ರಾಜ್ಯದಲ್ಲಿ ಆಪ್ ಮೂಲಕ ಸೇವೆ ನೀಡುವ ಎಲ್ಲಾ ಟ್ಯಾಕ್ಸಿಗಳಿಗೆ ಮೀಟರ್ ಅಳವಡಿಕೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಹೆಚ್ಚುವರಿ ದರ ವಸೂಲಿಗೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಹೊಸ ವರ್ಷದಿಂದ ಓಲಾ, ಉಬರ್ ಕ್ಯಾಬ್ಗಳಿಗೆ ಮೀಟರ್ ನಿಯಮ ಜಾರಿಗೆ ಬರುವ ನಿರೀಕ್ಷೆ ಇದೆ.
ಬೆಂಗಳೂರು: ರಾಜ್ಯದಲ್ಲಿ ಆಪ್ ಮೂಲಕ ಸೇವೆ ನೀಡುವ ಎಲ್ಲಾ ಟ್ಯಾಕ್ಸಿಗಳಿಗೆ ಮೀಟರ್ ಕಡ್ಡಾಯ ಮಾಡಿದ್ದು, ಸರ್ಕಾರ ನೀಡಿದ ದರ ಪಟ್ಟಿಯಂತೆಯೇ ದರಗಳನ್ನು ಕಡ್ಡಾಯಗೊಳಿಸಬೇಕು ಎಂದು ಕರ್ನಾಟಕ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಆ ಮೂಲಕ ಅಧಿಕ ಹಣ ವಸೂಲಿ ಮಾಡುವ, ಹೆಚ್ಚುವರಿ ತೆರಿಗೆ ಹಾಗೂ ಟಿಪ್ಸ್ ಹೆಸರಿನಲ್ಲಿ ಪ್ರಯಾಣಿಕರ ಸೂಲಿಗೆ ಬ್ರೇಕ್ ಹಾಕಲು ಮುಂದಾಗಿದೆ.
ಆಪ್ ಟ್ಯಾಕ್ಸಿಗಳಿಗೆ ಮೀಟರ್ ಕಡ್ಡಾಯ
ಈ ಕುರಿತಂತೆ ಸಾರಿಗೆ ಸಚಿವ ಬೈರತಿ ಸುರೇಶ್ ಮಾಹಿತಿ ಹಂಚಿಕೊಂಡಿದ್ದು, ಹೊಸ ವರ್ಷಕ್ಕೆ ಈ ನಿಯಮ ಜಾರಿಯ ಮುನ್ಸೂಚನೆ ಕೊಟ್ಟಿದ್ದಾರೆ. ಇದೇ ವೇಳೆ ವಿಯೇಟ್ನಾಂ ಮೂಲದ ಗ್ರೀನ್ ಎಸ್ ಎಂ ಕಂಪನಿಗೂ ಈ ನಿಯಮ ಕಡ್ಡಾಯ ಎಂದ ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಮೀಟರ್ ಅಳವಡಿಕೆ ಕುರಿತು ಕರಡು ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಏರ್ ಪೋರ್ಟ್ ರಸ್ತೆಯ ಕ್ಯಾಬ್ ಗಳಿಗೂ ಮೀಟರ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಮೀಟರ್ ಇಲ್ಲದೆ ಆಟೋ ಕ್ಯಾಬ್ ಓಡಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ಇನ್ಮುಂದೆ ಓಲಾ, ಊಬರ್ ಕ್ಯಾಬ್ ಗಳಿಗೆ ಮೀಟರ್ ಕಡ್ಡಾಯ ಆಗಲಿದ್ದು, ಮೀಟರ್ ಇಲ್ಲದೆ ಇದಿದ್ದರೆ ಕ್ಯಾಬ್, ಆಟೋ ಓಡಿಸಲು ಅನುಮತಿ ಇರೋದಿಲ್ಲ. ಆಟೋಗಳಲ್ಲಿ ಕೂಡ ಕಡ್ಡಾಯ ಮೀಟರ್ ಹಾಕಿಯೇ ಓಡಿಸಬೇಕು ಎಂದು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗುತ್ತಿದ್ದು, ಈ ಕುರಿತಂತೆ ಸಾರಿಗೆ ಇಲಾಖೆಯಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಹೊಸ ನಿಯಮ
ಸಾರಿಗೆ ಸಂಘಟನೆಗಳು ಹಾಗೂ ನೌಕರರ ಬೇಡಿಕೆ ಹಾಗೂ ಗ್ರಾಹಕರಿಂದ ಹೆಚ್ಚುವರಿ ದರ ವಸೂಲಿ ಮಾಡುತ್ತಿರುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಮೀಟರ್ ಕಡ್ಡಾಯಗೊಳಿಸುತ್ತಿದೆ. ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ಮಹತ್ವದ ಚರ್ಚೆ ಕೂಡ ನಡೆಯುತ್ತಿದ್ದು, ಓಲಾ-ಉಬರ್ ಟ್ಯಾಕ್ಸಿಗಳಿಗ ಮೀಟರ್ ಕಡ್ಡಾಯ ಮಾಡುವ ಚಿಂತನೆ ನಡೆಸಿದೆ. ಮುಂದಿನ ವರ್ಷದಿಂದ ಈ ನಿಯಮ ಜಾರಿ ಮಾಡುವ ನಿರೀಕ್ಷೆ ಇದ್ದು, ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಬೇಕಿದೆ.
ಏನೆಲ್ಲಾ ಸವಾಲುಗಳಿದೆ?
ಆದರೆ, ಈಗಾಗಲೇ ಆಪ್ನಲ್ಲಿ ಒಂದು ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುವ ಮಾರ್ಗ, ದೂರ ಹಾಗೂ ಹಣ ಕೂಡ ಆಪ್ನಲ್ಲೇ ಡಿಪ್ಲೇ ಆಗುತ್ತಿದೆ. ಆದರೆ ಈಗ ಮೀಟರ್ ಅಳವಡಿಕೆಯಿಂದ ಏನೆಲ್ಲಾ ಬದಲಾವಣೆ ಆಗುತ್ತದೆ. ಮೀಟರ್ ಹಾಕಿದ ಬಳಿಕ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಮೀಟರ್ ಅಳವಡಿಕೆ ಎಷ್ಟು ಕಾಲಾವಧಿ ನೀಡಲಾಗುತ್ತದೆ. ಆಪ್ ಗಳ ಅಸ್ಥಿತ್ವ ಏನಾಗಲಿದೆ ಎಂಬ ಗೊಂದಲಗಳು ಉದ್ಭವವಾಗಿದೆ. ಈ ಅನುಮಾನಗಳ ಬಗ್ಗೆ ನಿಖರವಾದ ಸ್ಪಷ್ಟನೆ ಸಚಿವರ ಬಳಿ ಇಲ್ಲ. ಆದರೆ ಮೀಟರ್ ಅಳವಡಿಕೆ ಮಾಡಬೇಕು ಎಂಬ ಸಚಿವರ ಉದ್ದೇಶವಿದೆ. ಆದರೆ ಇದು ಹೇಗೆ ಜಾರಿಗೆ ಆಗುತ್ತೆ? ಆಪ್ ಕಂಪನಿಗಳಿಗೆ ಏನೆಲ್ಲಾ ಬದಲಾವಣೆ ಆಗುತ್ತದೆ? ಅಂತ ನಾವು ನೋಡಬೇಕಾಗುತ್ತದೆ.
ತಕ್ಷಣದಿಂದಲೇ ನಿಯಮ ಜಾರಿ ಆಗೋದಿಲ್ಲ!
ಸದ್ಯಕ್ಕೆ ಕ್ಯಾಬ್ಗಳಿಗೆ ಮೀಟರ್ ಹಾಕುವ ಕಾರ್ಯ ತಕ್ಷಣದಿಂದ ಜಾರಿ ಆಗೋದಿಲ್ಲ. ಇಂತಹ ಯೋಚನೆ ಸರ್ಕಾರ ಮುಂದಿದ್ದು, ಸದ್ಯ ಎದುರಾಗಿರುವ ಗೊಂದಲಗಳಿಗೆ ಹೇಗೆ ಸರ್ಕಾರ ಪರಿಹಾರ ಕಂಡುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ. ಮೀಟರ್ ಅಳವಡಿಕೆ ಮಾಡುವುದು ಸಂಘಟನೆಗಳ ಬೇಡಿಕೆ ಇದ್ದು, ಇದನ್ನು ಜಾರಿ ಮಾಡುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಆದ್ದರಿಂದ ಸರ್ಕಾರ ಮಾರ್ಗಸೂಚಿಗಳು ಹೇಗೆ ಇರಲಿದೆ ಎಂಬ ಪ್ರಶ್ನೆ ಎದುರಾಗಿದೆ.










