ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಹಣ, ಬೈಕ್ ಪಡೆದು ವಂಚಿಸಿ, ಫೋಟೋ ಇಟ್ಟು ಬ್ಲಾಕ್‌ಮೇಲ್ ಮಾಡಿ ಪರಾರಿಯಾಗಿರುವ ಹೈದರಾಬಾದ್ ಮೂಲದ ಶೇಖ್ ಮೊಹಮ್ಮದ್ ವಿರುದ್ಧ ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಮದುವೆಯಾಗುವ ಭರವಸೆ ನೀಡಿ ವಿವಾಹಿತ ಮಹಿಳೆಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಮದುವೆಯಾಗಿದ್ದ ಗಂಡನಿಂದ ದೂರವಾಗಿ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದ ಮಹಿಳೆಯ ಜೀವನಕ್ಕೆ ಎಂಟ್ರಿ ಕೊಟ್ಟಿದ್ದ ಯುವಕ, ಕೊನೆಗೆ ಮದುವೆಯಾಗದೆ ಎಸ್ಕೇಪ್ ಆಗಿದ್ದಾನೆ ಎಂದು ಮಹಿಳೆಯೊಬ್ಬರು ದೂರು ನೀಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಘಟನೆ ಸಂಬಂಧ ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್

ಆರ್ಕಿಟೆಕ್ಟ್ ಆಗಿ ಕೆಲಸ ಮಾಡಿತ್ತಿದ್ದ ಮಹಿಳೆಗೆ ಯುವಕನ ಪರಿಚಯ ಆಗಿದ್ದು, ಆ ಬಳಿಕ ಇಬ್ಬರ ನಡುವೆ ಸ್ನೇಹವಾಗಿ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಈ ನಡುವೆ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಪುಸಲಾಯಿಸಿದ್ದ ಯುವಕ ಈಗ ಮದುವೆಯಾಗದೆ ಎಸ್ಕೇಪ್ ಆಗಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಶೇಖ್ ಮೊಹಮ್ಮದ್ ಎಂಬಾತನ ವಿರುದ್ಧ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಸಂತ್ರಸ್ತ ಮಹಿಳೆ ಆರು ತಿಂಗಳ ಹಿಂದೆ ಗಂಡನೊಂದಿಗೆ ವಿಚ್ಛೇದನ ಪಡೆದು ಮಗನೊಂದಿಗೆ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರು. ಪರಿಚಯವಾದ ಬಳಿಕ ಮದುವೆಯಾಗುವುದಾಗಿ ಆತ ಭರವಸೆ ನೀಡಿದ್ದನಂತೆ. ಈತನ ಮಾತು ನಂಬಿದ್ದ ಆಕೆ, ಆತನಿಗೆ ಐಫೋನ್, ಬೈಕ್ ಕೂಡ ಗಿಫ್ಟ್ ಕೊಟ್ಟಿದ್ದರಂತೆ.

ಇನ್ನು, ಆರೋಪಿ ಹೈದರಾಬಾದ್ ಮೂಲದ ನಿವಾಸಿ ಎಂದು ತಿಳಿದು ಬಂದಿದ್ದು, ಸಂತ್ರಸ್ತೆ ಹೈದರಾಬಾದಿನ ಆತನ ನಿವಾಸಕ್ಕೆ ತೆರಳಿದ ವೇಳೆ ಅಲ್ಲಿಯೂ ಆತನ ಸಿಕ್ಕಿರಲಿಲ್ಲವಂತೆ, ಈ ಹಿನ್ನೆಲೆಯಲ್ಲಿ ಮಹಿಳೆ ಪೊಲೀಸರಿಗೆ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಂತ್ರಸ್ತ ಮಹಿಳೆ ಹೇಳಿದ್ದೇನು?

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹಿಳೆ, ಇಬ್ಬರಿಗೆ ಪರಿಚಯವಾದ ಬಳಿಕ ನಾವು ಬ್ಯುಸಿನೆಸ್ ಮಾಡೋಣಾ ಅಂತ ಹೇಳಿದ್ದರು. ಮೇ 18ರಂದು ಆತನೊಂದಿಗೆ ನಾನು ಹೈದರಾಬಾದ್ಗೆ ಬ್ಯುಸಿನೆಸ್ ವಿಚಾರವಾಗಿ ತೆರಳಿದ್ದೆ. 19ರಂದು ಅಲ್ಲಿಯ ಪಿಜಿಯೊಂದಕ್ಕೆ ಕರೆದುಕೊಂಡು ಹೋಗಿ ಬಲವಂತವಾಗಿ ದೈಹಿಕವಾಗಿ ಬಳಸಿಕೊಂಡಿದ್ದ, ಈ ವೇಳೆ ನನ್ನ ಫೋಟೋವೊಂದು ತೆಗೆದುಕೊಂಡಿದ್ದ. ಆ ಫೋಟೋ ಇಟ್ಟುಕೊಂಡು ಆ ಬಳಿಕ ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದ. ನಾನು ದೂರು ನೀಡಿದರೆ ಫೋಟೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾನೆ. ಆ ಫೋಟೋ ಇಟ್ಟುಕೊಂಡು ಪ್ರತಿದಿನ ನನ್ನೊಂದಿಗೆ ಇರುವಂತೆ ಬೆದರಿಕೆ ಹಾಕುತ್ತಿದ್ದಾನೆ. ನನ್ನ ಬಳಿ ಐದು ಲಕ್ಷದ ವರೆಗೂ ಹಣ, ಮೊಬೈಲ್, ಬೈಕ್ ತೆಗೆದುಕೊಂಡಿದ್ದಾನೆ. ಆತನಿಗೆ ಅಪಘಾತವಾದ ಸಂದರ್ಭದಲ್ಲಿ ಒಂದೂವರೆ ಲಕ್ಷದ ವರೆಗೂ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದೇನೆ. ಮದುವೆ ಮಾಡಿಕೊಳ್ಳುತ್ತೇನೆ ಎಂದು ಈಗ ಮೋಸ ಮಾಡಿದ್ದೇನೆ. ಅವರ ಮನೆಯವರು ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಆರೋಪಿ ಹೈದರಾಬಾದ್ ಮೂಲದವ ಎಂದು ತಿಳಿದು ಬಂದಿದ್ದು, ಸಂತ್ರಸ್ತೆ ಆರ್ಕಿಟೆಕ್ಟ್ ಆಗಿದ್ದು, ಆರ್ಥಿಕವಾಗಿ ಉತ್ತಮವಾಗಿದ್ದಾರೆ. ಇದನ್ನೇ ಆತ ಮಿಸ್ ಯೂಸ್ ಮಾಡಿಕೊಡಿದ್ದು, ಆಕೆಯಿಂದ ಹಣ ಪಡೆದುಕೊಂಡು ಈಗ ಮೋಸ ಮಾಡಿರುವ ಕೇಳಿ ಬಂದಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. (ವರದಿ: ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು)

YouTube video player