ಬೆಂಗಳೂರಿನಿಂದ ಮಧುರೈಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ಸೋಮವಾರ ಬೆಳಿಗ್ಗೆ ಟೇಕ್ಆಫ್ಗೆ ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿ ಹೈಡ್ರಾಲಿಕ್ ವ್ಯವಸ್ಥೆಗೆ ಸಂಬಂಧಿಸಿದ ತಾಂತ್ರಿಕ ದೋಷ ಕಾಣಿಸಿಕೊಂಡು, ಪೈಲಟ್ ತಕ್ಷಣವೇ ತುರ್ತು ಬ್ರೇಕ್ ಹಾಕಿ ಟೇಕ್ಆಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೋಮವಾರ ಬೆಳಿಗ್ಗೆ ಮಧುರೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಕೊನೆಯ ಕ್ಷಣದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ನ ಸಮಯಪ್ರಜ್ಞೆಯಿಂದ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ದಿಢೀರ್ ವೈಫಲ್ಯ ಕಂಡುಬಂದ ಹಿನ್ನೆಲೆಯಲ್ಲಿ, ರನ್ವೇಯಲ್ಲಿ ವೇಗವಾಗಿ ಚಲಿಸುತ್ತಿದ್ದ ವಿಮಾನಕ್ಕೆ ತುರ್ತು ಬ್ರೇಕ್ ಹಾಕುವ ಮೂಲಕ ಟೇಕ್-ಆಫ್ ಅನ್ನು ಯಶಸ್ವಿಯಾಗಿ ನಿಲ್ಲಿಸಲಾಗಿದ್ದು, ಪ್ರಯಾಣಿಕರೆಲ್ಲರೂ ಸೇಫ್ ಆಗಿದ್ದಾರೆ.
ರನ್ವೇಯಲ್ಲಿ ವೇಗ ಪಡೆದುಕೊಳ್ಳುತ್ತಿದ್ದಾಗ ಕಾಣಿಸಿಕೊಂಡ ದೋಷ
ಬೆಂಗಳೂರಿನಿಂದ ಮಧುರೈಗೆ ಪ್ರಯಾಣಿಸಬೇಕಿದ್ದ ಇಂಡಿಗೋ ಸಂಸ್ಥೆಯ 6E 6526 ನಂಬರ್ ನ ವಿಮಾನವು ಸೋಮವಾರ ಬೆಳಿಗ್ಗೆ 7.20ಕ್ಕೆ ಟೇಕ್-ಆಫ್ ಆಗಲು ನಿಗದಿಯಾಗಿತ್ತು. ವಾಯು ಸಂಚಾರ ನಿಯಂತ್ರಣ ವಿಭಾಗದಿಂದ ಹಾರಾಟಕ್ಕೆ ಅನುಮತಿ ದೊರೆತ ನಂತರ, ವಿಮಾನವು ರನ್ವೇಯಲ್ಲಿ ವೇಗವನ್ನು ಹೆಚ್ಚಿಸಿಕೊಳ್ಳುತ್ತಿತ್ತು. ಇನ್ನೇನು ವಿಮಾನ ಆಗಸಕ್ಕೆ ಜಿಗಿಯಬೇಕು ಎನ್ನುವಷ್ಟರಲ್ಲಿ, ಕಾಕ್ಪಿಟ್ನಲ್ಲಿ ಹೈಡ್ರಾಲಿಕ್ ವ್ಯವಸ್ಥೆಯ ವೈಫಲ್ಯದ ಎಚ್ಚರಿಕೆ ಸೂಚಕವು ಬೆಳಗಿದೆ. ತಕ್ಷಣವೇ ಅಪಾಯವನ್ನು ಅರಿತ ಕ್ಯಾಪ್ಟನ್ ಗೌತಮ್ ಮತ್ತು ಸಹ-ಪೈಲಟ್ ಕ್ಷಣಮಾತ್ರವೂ ತಡಮಾಡದೆ ತುರ್ತು ಬ್ರೇಕ್ ಹಾಕಿ ವಿಮಾನವನ್ನು ರನ್ವೇಯಲ್ಲೇ ನಿಯಂತ್ರಣಕ್ಕೆ ತಂದಿದ್ದಾರೆ.
"ಹೆಡ್ಸ್ ಡೌನ್" ಘೋಷಣೆ, ಜೀವ ಕೈನಲ್ಲಿ ಹಿಡಿದು ಕುಳಿತ ಪ್ರಯಾಣಿಕರು
ವಿಮಾನವು ಅತಿ ವೇಗದಲ್ಲಿದ್ದಾಗ ದಿಢೀರ್ ಬ್ರೇಕ್ ಹಾಕಿದ್ದರಿಂದ ಭಾರಿ ಶಬ್ದದೊಂದಿಗೆ ಒಮ್ಮೆಲೇ ನಿಂತಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕ್ಯಾಬಿನ್ ಸಿಬ್ಬಂದಿ ತಕ್ಷಣವೇ ಪ್ರಯಾಣಿಕರ ಸುರಕ್ಷತೆಗಾಗಿ "ಹೆಡ್ ಡೌನ್, ಹೆಡ್ಸ್ ಡೌನ್" (ತಲೆ ತಗ್ಗಿಸಿ ಕುಳಿತುಕೊಳ್ಳಿ) ಎಂದು ಜೋರಾಗಿ ಘೋಷಿಸಿದ್ದಾರೆ. ಅನಿರೀಕ್ಷಿತ ಬೆಳವಣಿಗೆಯಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಕೆಲಕಾಲ ತೀವ್ರ ಆತಂಕಕ್ಕೆ ಒಳಗಾದರು. ಹಲವರು ಸುರಕ್ಷತಾ ಭಂಗಿಯಲ್ಲಿ ಕುಳಿತುಕೊಂಡರೆ, ಮತ್ತೆ ಕೆಲವರು ಏನಾಗುತ್ತಿದೆ ಎಂದು ತಿಳಿಯದೆ ಗಾಬರಿಗೊಂಡರು. ಬಳಿಕ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ ಕ್ಯಾಪ್ಟನ್ ಟೇಕ್-ಆಫ್ ರದ್ದುಗೊಳಿಸಿದ್ದಾರೆ ಎಂದು ಸಿಬ್ಬಂದಿ ಮಾಹಿತಿ ನೀಡಿದ ನಂತರ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.
ಪ್ರಯಾಣಿಕರಿಗೆ ಬಳಿಕ ಬದಲಿ ವ್ಯವಸ್ಥೆ
ತುರ್ತು ಬ್ರೇಕಿಂಗ್ ಬಳಿಕ ಸುರಕ್ಷತಾ ಪರಿಶೀಲನೆಗಳಿಗಾಗಿ ವಿಮಾನವನ್ನು ಸುಮಾರು 30 ನಿಮಿಷಗಳ ಕಾಲ ರನ್ವೇಯಲ್ಲೇ ನಿಲ್ಲಿಸಲಾಗಿತ್ತು. ನಂತರ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಿ ಟರ್ಮಿನಲ್ ಕಟ್ಟಡಕ್ಕೆ ತೆಗೆದುಕೊಂಡು ಹೋಗಲಾಯ್ತು. ಬಳಿಕ ಪ್ರಯಾಣಿಕರಿಗೆ ಬದಲಿ ವಿಮಾನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಬೆಳಿಗ್ಗೆ 9.20ಕ್ಕೆ ವಿಮಾನವು ಮಧುರೈನತ್ತ ಪ್ರಯಾಣ ಬೆಳೆಸಿತು.
ಪೈಲಟ್ ಸಮಯಪ್ರಜ್ಞೆಗೆ ಮಾಜಿ ಪೈಲಟ್ ಮೆಚ್ಚುಗೆ, ತನಿಖೆಗೆ ಆಗ್ರಹ
ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸಿ, ಉದ್ಯಮಿ ಹಾಗೂ ಭಾರತೀಯ ವಾಯುಸೇನೆಯ ಮಾಜಿ ಪೈಲಟ್ ಆಗಿರುವ ಎಂ. ಬಾಲಸುಬ್ರಮಣಿಯಂ ಅವರು ಘಟನೆಯ ಕುರಿತು ಪ್ರತಿಕ್ರಿಯಿಸಿ ಪೈಲಟ್ ಕಾರ್ಯವೈಖರಿಯನ್ನು ಕೊಂಡಾಡಿದ್ದಾರೆ. ವಿಮಾನ ಟೇಕ್-ಆಫ್ ಆಗುವ ಕೆಲವೇ ಸೆಕೆಂಡುಗಳ ಮೊದಲು ಹೈಡ್ರಾಲಿಕ್ ವೈಫಲ್ಯದ ಸೂಚನೆ ಸಿಕ್ಕ ತಕ್ಷಣ ಕ್ಯಾಪ್ಟನ್ ತುರ್ತು ಬ್ರೇಕ್ ಹಾಕಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಅವರ ತ್ವರಿತ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಕ್ಯಾಬಿನ್ ಸಿಬ್ಬಂದಿ ಕೂಡ ಯಾವುದೇ ಗೊಂದಲ ಅಥವಾ ಭಯ ಹುಟ್ಟದಂತೆ ಪರಿಸ್ಥಿತಿಯನ್ನು ಅತ್ಯಂತ ವೃತ್ತಿಪರವಾಗಿ ನಿಭಾಯಿಸಿದರು. ಪ್ರಯಾಣಿಕರು ಕೆಳಗಿಳಿಯುವಾಗಲೂ ಕ್ಯಾಪ್ಟನ್ ಗೌತಮ್ ಮತ್ತು ತಂಡದವರು ಅನಾನುಕೂಲತೆಗಾಗಿ ಕ್ಷಮೆಯಾಚಿಸಿದರು ಎಂದು ವಿವರಿಸಿದ್ದಾರೆ.
ಆದರೂ ವಿಮಾನಗಳ ನಿರ್ವಹಣೆ ಮತ್ತು ಕಾರ್ಯಾಚರಣೆಯ ಸುರಕ್ಷತೆಯ ಬಗ್ಗೆ ಬಾಲಸುಬ್ರಮಣಿಯಂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ತುರ್ತು ಬ್ರೇಕಿಂಗ್ ಯಶಸ್ವಿಯಾಗಿ ಪ್ರಯಾಣಿಕರು ಪಾರಾಗಿದ್ದರೂ, ಇಂತಹ ತಾಂತ್ರಿಕ ಲೋಪಗಳು ಮರುಕಳಿಸದಂತೆ ಇಂಡಿಗೋ ಆಡಳಿತ ಮಂಡಳಿ ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಭಾನುವಾರವೂ ಇಂಡಿಗೂದಲ್ಲೇ ಕಾಣಿಸಿಕೊಂಡಿದ್ದ ದೋಷ
ಭಾನುವಾರ ಕೂಡ ಇಂಡಿಗೋ ವಿಮಾನಲ್ಲಿಯೇ ಸಮಸ್ಯೆ ಕಾಣಿಸಿಕೊಂಡಿತ್ತು. 192 ಪ್ರಯಾಣಿಕರನ್ನು ಹೊತ್ತು ಪುಣೆಯಿಂದ ಅಸ್ಸಾಂನ ಗುವಾಹಟಿಗೆ ತೆರಳುತ್ತಿದ್ದ 6E 0623 ಇಂಡಿಗೋ ವಿಮಾನದ ಲ್ಯಾಂಡಿಂಗ್ ಗೇರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ವಿಮಾನವನ್ನು ಮತ್ತೆ ಪುಣೆಗೆ ತಿರುಗಿಸಿ ಅಲ್ಲಿ ತುರ್ತು ಭೂಸ್ಪರ್ಶ ನಡೆಸಲಾಗಿತ್ತು. ಆ ಬಳಿಕ ಪ್ರಯಾಣಿಕರ ಪ್ರಯಾಣ ಅನುಕೂಲಕ್ಕಾಗಿ ಬೆಂಗಳೂರಿನಿಂದ ಪುಣೆಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಯಿತು.














