ರಾಷ್ಟ್ರೀಯ ವಸತಿ ಮಂಡಳಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸಲು ಎಷ್ಟು ವರ್ಷಗಳ ಉಳಿತಾಯ ಬೇಕಾಗುತ್ತದೆ ಎಂದು ಹೇಳಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ದರ ಗಗನಕ್ಕೇರುತ್ತಿದೆ. ಇಂದು ಬೆಂಗಳೂರಿನ ಯಾವುದೇ ಪ್ರದೇಶಕ್ಕೂ ಹೋದರೂ 1 BHK ಮನೆಗೆ ಅಡ್ವಾನ್ಸ್ ರೂಪದಲ್ಲಿ 1 ರಿಂದ 1.5 ಲಕ್ಷ ರೂಪಾಯಿ ಹಣ ಕೇಳುತ್ತಾರೆ. ಮನೆ ಖಾಲಿ ಮಾಡುವಾಗ ಮುಂಗಡ ಹಣದಲ್ಲಿ ಶೇ.10 ರಿಂದ ಶೇ.15 ಕಡಿತ ಮಾಡಿಕೊಳ್ಳುತ್ತಾರೆ. ಇಂತಹ ದುಬಾರಿ ನಗರದಲ್ಲಿ ಸ್ವಂತ ಮನೆಯೊಂದು ಮಾಡೋದು ಆಕಾಶದೆತ್ತರದ ಕನಸು ಆಗಿರುತ್ತದೆ. ರಾಷ್ಟ್ರೀಯ ವಸತಿ ಮಂಡಳಿ (NHB) ಕೆಲವು ದತ್ತಾಂಶ ಬಿಡುಗಡೆ ಮಾಡಿದ್ದು, ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸ್ವಂತ ಸೂರು ಕಟ್ಟಿಕೊಳ್ಳಲು ಎಷ್ಟು ವರ್ಷದ ಉಳಿತಾಯ ಬೇಕಾಗುತ್ತದೆ ಎಂದು ಹೇಳಿದೆ.
ರಾಷ್ಟ್ರೀಯ ವಸತಿ ಮಂಡಳಿ ಈ ಅಂಕಿಅಂಶಗಳನ್ನು ಒಂದು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಶೇ.5ರಷ್ಟು ಕುಟುಂಬಗಳ ಆದಾಯ ಮತ್ತು ರಾಜ್ಯದ ರಾಜಧಾನಿಗಳಲ್ಲಿರುವ 1,184 ಚದರ ಅಡಿ ಮನೆಯ ಸರಾಸರಿ ಬೆಲೆಯೊಂದಿಗೆ ಹೋಲಿಕೆ ಮಾಡಿ ಅಂತಿಮಗೊಳಿಸಿದೆ. 2022-23 ರಲ್ಲಿ, ಭಾರತದ ಒಟ್ಟು ಉಳಿತಾಯ ಮತ್ತು GDP ಅನುಪಾತವು 30.2% ರಷ್ಟಿತ್ತು. ಇದೀಗ ಇದೇ ಅನುಪಾತದ ಆಧಾರದ ಮೇಲೆ ಶೇ.5ರಷ್ಟು ಶ್ರೀಮಂತ ಕುಟುಂಬಗಳ ಉಳಿತಾಯದ ಲೆಕ್ಕಾಚಾರದ ಮೇಲೆ ರಾಷ್ಟ್ರೀಯ ವಸತಿ ಮಂಡಳಿ ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.
ಕುಟುಂಬಗಳ ಆದಾಯ ಮತ್ತು ಬಳಕೆ ವೆಚ್ಚ ನಗರದಿಂದ ನಗರಕ್ಕೆ ಬದಲಾಗುತ್ತಿರುತ್ತವೆ. ಗ್ರಾಮೀಣ ಭಾಗದಲ್ಲಿ ಆದಾಯ ಮತ್ತು ವೆಚ್ಚದ ಪ್ರಮಾಣ ಕಡಿಮೆಯಾಗಿರುತ್ತದೆ. ಟೈಯರ್ 1, ಟೈಯರ್ 2, 3 ನಗರಗಳ ಜೀವನಶೈಲಿಯೂ ಭಿನ್ನವಾಗಿರುತ್ತದೆ. ಹಾಗಾಗಿ ಈ ಪ್ರದೇಶಗಳಲ್ಲಿ ಸ್ವಂತ ಮನೆ ಮಾಡಿಕೊಳ್ಳುವ ಅಂಕಿಅಂಶಗಳು ಭಿನ್ನವಾಗಿರುತ್ತವೆ.
NHB ಅಂಕಿಅಂಶಗಳ ಪ್ರಕಾರ, ಮಾಹಾರಾಷ್ಟ್ರದ ರಾಜಧಾನಿ ಮುಂಬೈ ದುಬಾರಿಯಾಗಿದೆ. ಇಲ್ಲಿ ಸ್ವಂತ ಮನೆ ಮಾಡಿಕೊಳ್ಳಲು 109 ವರ್ಷದ ಉಳಿತಾಯ ಬೇಕಾಗುತ್ತದೆ. ಇನ್ನು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮನೆ ಖರೀದಿಗೆ 36 ವರ್ಷದ ಉಳಿತಾಯದ ಅಗತ್ಯವಿದೆ. ದೇಶದಲ್ಲಿ ಚಂಡೀಗಢ ಕೈಗೆಟುಕುವ ನಗರವಾಗಿದ್ದು, ಕೇವಲ 15 ವರ್ಷದ ಉಳಿತಾಯದಲ್ಲಿ ಮನೆಯೊಂದನ್ನು ಮಾಡಿಕೊಳ್ಳಬಹುದು ಎಂದು NHB ಹೇಳಿದೆ.
ಲೆಕ್ಕಾಚಾರ ಹೇಗೆ?
ಮುಂಬೈನ ಬಾಡಿಗೆ ಮನೆಯಲ್ಲಿ ವಾಸಿಸುವ ಒಬ್ಬರ ಮಾಸಿಕ ಅದಾಯ ಅಂದಾಜು 22,352 ರೂ. ಆಗಿದೆ. ಒಂದು ಕುಟುಂಬದಲ್ಲಿ ನಾಲ್ವರು ಕೆಲಸ ಮಾಡುತ್ತಿದ್ರೆ ಆದಾಯ 89,408 ರೂ. ಆಗುತ್ತದೆ. ಒಂದು ಕುಟುಂಬದ ವಾರ್ಷಿಕ ಆದಾಯ 10.7 ಲಕ್ಷ ರೂ. ಆಗಲಿದೆ. ಇವರ ಉಳಿತಾಯ ದರವನ್ನು ಶೇ.30.2ಕ್ಕೆ ಅನ್ವಯಿಸಿದ್ರೆ ಸುಮಾರು 3.2 ಲಕ್ಷ ರೂ. ಗಳಾಗುತ್ತದೆ.
NHB ಅಂಕಿಅಂಶಗಳ ಪ್ರಕಾರ ಮುಂಬೈನ 645 ರಿಂದ 1,184 ಚದರ ಅಡಿ ಪ್ರದೇಶದಲ್ಲಿರುವ ಮನೆ ಬೆಲೆ 3.5 ಕೋಟಿ ರೂ. ಆಗಿದೆ. 1 ಚದರ ಅಡಿ ಬೆಲೆ 29,911 ರೂ. ಆಗುತ್ತದೆ. ಈ ಅಂಕಿಅಂಶಗಳ ಪ್ರಕಾರ, ವಾರ್ಷಿಕವಾಗಿ ಸುಮಾರು 3 ಲಕ್ಷ ರೂ. ಉಳಿತಾಯ ಮಾಡುವ ಕುಟುಂಬವೊಂದು ಸ್ವಂತ ಮನೆ ಹೊಂದಲು 109 ವರ್ಷ ಉಳಿತಾಯ ಮಾಡುತ್ತದೆ.
ರಾಷ್ಟ್ರೀಯ ವಸತಿ ಮಂಡಳಿ ಸರಾಸರಿ ಕಾರ್ಪೆಟ್ ಪ್ರದೇಶದ ಬೆಲೆಯು ಸಬ್-ರಿಜಿಸ್ಟ್ರಾರ್ ಕಚೇರಿಗಳಿಂದ (SRO ಗಳು) ಸಂಗ್ರಹಿಸಲಾದ ನೋಂದಣಿ ದತ್ತಾಂಶ ಮತ್ತು ಪ್ರಾಥಮಿಕ ಸಾಲ ನೀಡುವ ಸಂಸ್ಥೆಗಳಿಂದ ಸಂಗ್ರಹಿಸಲಾದ ಮೌಲ್ಯಮಾಪನ ದತ್ತಾಂಶವನ್ನು ಆಧರಿಸಿದೆ.
| ನಗರ | ಉಳಿತಾಯದ ವರ್ಷ |
| ಮುಂಬೈ | 109 |
| ಗುರುಗ್ರಾಮ | 64 |
| ಬೆಂಗಳೂರು | 36 |
| ದೆಹಲಿ | 35 |
| ಚಂಡೀಗಢ | 15 |
