ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಫಾರ್ಚೂನರ್ ಕಾರೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾದ ಭೀಕರ ಹಿಟ್ ಅಂಡ್ ರನ್ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕೊಳ್ಳೆಗಾಲ ಮೂಲದ ಮೂರ್ತಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಬೆಂಗಳೂರು: ನಗರದಲ್ಲಿ ಹಿಟ್ ರನ್ ಪ್ರಕರಣ ನಡೆದಿದ್ದು, ಅಪಘಾತದ ಸಂತ್ರಸ್ತರೊಬ್ಬರು ಸಾವು ಬದುಕಿನ ನಡುವೆ ತೀವ್ರ ಹೋರಾಟ ನಡೆಸ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೊಳ್ಳೆಗಾಲ ಮೂಲದ ಮೂರ್ತಿ(26) ಅನ್ನೋರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಮೂರ್ತಿ ಅನ್ನೋರು ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬಸಾಪುರ ಬಳಿ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಹಿಂದಿನಿಂದ ಬಂದ ಪಾರ್ಚೂನರ್ ಕಾರು ಬೈಕ್ ಸವಾರನಿಗೆ ಗುದ್ದಿದೆ. KA51 MW 8744 ನಂಬರಿನ ಕಾರು ಜೋರಾಗಿ ಬಂದು ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಬೈಕ್ ಸವಾರ ತನ್ನ ಬೈಕ್ನೊಂದಿಗೆ ಕೆಳಕ್ಕೆ ಬಿದ್ದಿದ್ದಾರೆ. ಬೈಕ್ಗೆ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಕಾರಿನ ಡ್ರೈವರ್, ತನ್ನ ಕಾರನ್ನು ರಿವರ್ಸ್ ತೆಗೆದುಕೊಂಡು ಅಲ್ಲಿಂದ ಪರಾರಿ ಆಗಿದ್ದಾನೆ. ಕಾರಿನ ಡ್ರೈವರ್ ಬೈಕ್ಗೆ ಬಂದು ಗುದ್ದುವ ದೃಶ್ಯ ಸಿಸಿಟಿವಿಲ್ಲಿ ಸೆರೆಯಾಗಿದೆ. ಅಪಘಾತದ ಬಳಿಕ ಯಾವುದೇ ಮನವೀಯತೆ ತೋರಿಸದೇ ಕಾರಿನಲ್ಲಿದ್ದ ಪ್ರಯಾಣಿಕರು ಅಲ್ಲಿಂದ ಪರಾರಿ ಆಗಿರುವ ದೃಶ್ಯ ಕೆರಳಿಸುವಂತಿದೆ..
ಘಟನೆಯಲ್ಲಿ ಸೈಕಲ್ ಸವಾರನ ಕಾಲು ಕಟ್
ಇತ್ತ ಅಪಘಾತದ ಬಳಿಕ ಮೂರ್ತಿ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದರು. ಮೂರ್ತಿ ಅವರ ಕಾಲು ಕಟ್ ಆಗಿತ್ತು. ಕೂಡಲೇ ಸ್ಥಳೀಯರು ಸಹಾಯಕ್ಕೆ ಬಂದು ಮೂರ್ತಿಯನ್ನ ಕೂಡಲೇ ರಕ್ಷಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ನಂತರ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಅಪಘಾತದ ತೀವ್ರತೆ ಎಷ್ಟು ಭೀಕಾಗಿತ್ತು ಅಂದರೆ ಬೈಕ್ ಸಂಪೂರ್ಣ ನುಜ್ಜು-ಗುಜ್ಜಾಗಿದೆ.
ಅಷ್ಟರಲ್ಲೇ ಎಲೆಕ್ಟ್ರಾನಿಕ್ಸ್ ಸಿಟಿ ಟ್ರಾಫಿಕ್ ಪೊಲೀಸರು ವಿಷಯ ಗೊತ್ತಾಗಿದೆ. ಗಾಯಾಳು ಯಾವ ಆಸ್ಪತ್ರೆಯಲ್ಲಿದ್ದಾನೆ ಅನ್ನೋದನ್ನು ತಿಳಿದುಕೊಂಡು ಸ್ಥಳೀಯ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಅಲ್ಲಿಗೆ ಬಂದ ಪೊಲೀಸರು ಕೇಸ್ ಆಗಿದೆ ಬಿಡಿ ಎಂದು ಲಘುವಾಗಿ ಮಾತನ್ನಾಡಿದ್ದಾರೆ ಎನ್ನಲಾಗಿದೆ. ಅಷ್ಟರಲ್ಲಾಗಲೇ ಸಂಬಂಧಿಕರು, ಸ್ನೇಹಿತರು ಮೂರ್ತಿ ಅವರ ಸಹಾಯಕ್ಕೆ ಬಂದಿದ್ದಾರೆ. ಇದೇ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ ಮೂರ್ತಿಯನ್ನು ನಿಮ್ಹಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಆಸ್ಪತ್ರೆ ಸಿಬ್ಬಂದಿ ನಮ್ಮಲ್ಲಿ ಐಸಿಯು ಬೆಡ್ ಇಲ್ಲ ಎಂದು ಚಿಕಿತ್ಸೆ ಕೊಡಿಸಲು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅದಾದ ಬಳಿಕ ಗಾಯಾಳು ಮೂರ್ತಿಯನ್ನು ಸ್ನೇಹಿತರು ಮತ್ತು ಸಂಬಂಧಿಕರು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆದಾಡಿದ್ದಾರೆ. ಕೊನೆಯದಾಗ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂರ್ತಿ ಅವರ ಆರೋಗ್ಯ ಗಂಭೀರವಾಗಿಯೇ ಇದೆ ಎಂದು ಹೇಳಲಾಗಿದೆ.
ಕುಡಿದ ನಶೆಯಲ್ಲಿ ಅಪಘಾತ?
ಕೆಲವು ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ.. ಕಾರಿನಲ್ಲಿದ್ದ ಪ್ರಯಾಣಿಕರು ಕುಡಿದು ಡ್ರೈವಿಂಗ್ ಮಾಡುತ್ತಿದ್ದರು. ಅಪಘಾತದ ವೇಳೆ ಸ್ಥಳಕ್ಕೆ ಓಡಿಬಂದಿದ್ದ ಸ್ಥಳೀಯರಿಗೆ, ಕಾರಿನಲ್ಲಿ ಮಧ್ಯದ ಬಾಟಲಿ ಹಿಡಿದುಕೊಂಡಿರೋದನ್ನ ನೋಡಿರೋದಾಗಿ ಹೇಳಿದ್ದಾರೆ ಎನ್ನಲಾಗದೆ. ಯಾರೆಲ್ಲ ಕಾರಿನಲ್ಲಿದ್ದರೋ, ಅವರೆಲ್ಲರ ಬಳಿಯೂ ಮದ್ಯದ ಬಾಟಲಿ ಇತ್ತು ಎನ್ನಲಾಗಿದೆ. ಇನ್ನು, ಪ್ರಕರಣ ನಡೆದು ಮೂರು ದಿನವಾದರೂ, ಕಾರಿನ ಮಾಲೀಕರನ್ನು ಪೊಲೀಸರು ಪತ್ತೆ ಹಚ್ಚಿಲ್ಲ. ಕಾರಿನ ಮಾಲೀಕರು ಕೂಡ ಠಾಣೆಗೆ ಬಂದು ಶರಣಾಗಿಲ್ಲ. ಆದಷ್ಟ ಬೇಗ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಠಾಣೆಯ ಪೊಲೀಸರು ಹಿಟ್ ಅಂಡ್ ರನ್ ಮಾಡಿದ ಆರೋಪಿಗಳನ್ನ ಬಂಧಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.







