ಮಯೂರ ಗ್ರೂಪ್‌ನ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ ಅವರಿಗೆ ಮಲೇಷ್ಯಾದಲ್ಲಿ 'ಫಾರ್ ಈಸ್ಟ್ ಏಷ್ಯಾ ಲೀಡರ್‌ಶಿಪ್ ಅವಾರ್ಡ್ 2026' ಪ್ರದಾನ ಮಾಡಲಾಯಿತು. ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಹಾರ ಒದಗಿಸುವ ಇವರು, ಸರ್ಕಾರಿ ಶಾಲೆಗಳ ಶೌಚಾಲಯ ಸ್ವಚ್ಛತೆ ಸೇರಿದಂತೆ ಹಲವು ಸಮಾಜಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕೌಲಾಲಂಪುರ (ಅ.26): ಆಹಾರೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದರೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಮಯೂರ ಗ್ರೂಪ್‌ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಕುಂದಾಪುರ ಮೂಲದ ಸಾಧಕ ಗೋಪಾಡಿ ಶ್ರೀನಿವಾಸ ರಾವ್ ಅವರಿಗೆ ಮಲೇಷ್ಯಾದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಷ್ಠಿತ ಫಾರ್ ಈಸ್ಟ್ ಏಷ್ಯಾ ಲೀಡರ್‌ಶಿಪ್ ಅವಾರ್ಡ್ 2026 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಮಲೇಷ್ಯಾದಲ್ಲಿ ಆಯೋಜಿಸಲಾಗಿದ್ದ ಫಾರ್ ಈಸ್ಟ್ ಏಷ್ಯಾ ಲೀಡರ್‌ಶಿಪ್ ಸಮ್ಮಿಟ್ 2026 ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕಡಿಮೆ ಬೆಲೆ, ಸ್ವಚ್ಛತೆ, ಉತ್ತಮ ರುಚಿ ಹಾಗೂ ಗ್ರಾಹಕರ ಮುಖದಲ್ಲಿ ತೃಪ್ತಿ ಕಾಣುವುದನ್ನೇ ತಮ್ಮ ವ್ಯಾಪಾರ ಧರ್ಮವನ್ನಾಗಿಸಿಕೊಂಡಿರುವ ಗೋಪಾಡಿ ಶ್ರೀನಿವಾಸ ರಾವ್ ಅವರು, ‘ಮಯೂರ ಬೇಕರಿ’, ‘ತಾಜಾ ತಿಂಡಿ’, ‘ತಾಜಾ ಮಿಠಾಯಿ’, ‘ನಮ್ಮೂರ ಹೋಟೆಲ್’, ‘ಆರೋಗ್ಯ ಆಹಾರ’, ‘ಕೇಕ್‌ವಾಲಾ’, ‘ಈಶಾನ್ಯ’, ‘ಪ್ರೈಡ್ ಬೇಕರ್ಸ್’ ಸೇರಿದಂತೆ ಹಲವು ಜನಪ್ರಿಯ ಸಂಸ್ಥೆಗಳ ಮೂಲಕ ಲಕ್ಷಾಂತರ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸುಮಾರು 1,800ಕ್ಕೂ ಹೆಚ್ಚು ಸಿಬ್ಬಂದಿಯ ಸಹಯೋಗದೊಂದಿಗೆ ಪ್ರತಿದಿನ ಸುಮಾರು 50 ಸಾವಿರಕ್ಕೂ ಅಧಿಕ ಮಂದಿಗೆ ಶುದ್ಧ ಹಾಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುತ್ತಿದ್ದಾರೆ.

ಸಮಾಜಸೇವೆ ಮತ್ತು ಶೌಚಾಲಯ ಸ್ವಚ್ಛತಾ ಕಾಯಕ

ಆಹಾರೋದ್ಯಮದಷ್ಟೇ ಅಲ್ಲದೆ, ಜಿಎಸ್‌ಆರ್ ಫೌಂಡೇಶನ್ ಹಾಗೂ ಕೋಟೇಶ್ವರ ಸೇವಾ ಟ್ರಸ್ಟ್ ಮೂಲಕ ಸಾವಿರಾರು ಜನರ ಬಾಳಿಗೆ ಬೆಳಕಾಗಿದ್ದಾರೆ. ಲಯನ್ಸ್ ಕ್ಲಬ್ ಮೂಲಕ 40 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು, ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಹಾಗೂ ಸಭಾಂಗಣಗಳನ್ನು ನಿರ್ಮಿಸಿಕೊಟ್ಟಿದ್ದಾರೆ.

ವಿಶೇಷವಾಗಿ, ಪ್ರಧಾನಿ ನರೇಂದ್ರ ಮೋದಿಯವರ ‘ಸ್ವಚ್ಛ ಭಾರತ ಅಭಿಯಾನ’ದಿಂದ ಪ್ರೇರಿತರಾಗಿ ಕುಂದಾಪುರ ವಲಯದ ಕೋಟೇಶ್ವರ ವ್ಯಾಪ್ತಿಯ 26 ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ದತ್ತು ಪಡೆದು, ಸ್ವಂತ ಖರ್ಚಿನಲ್ಲಿ ಸಂಚಾರಿ ವಾಹನ (ಮೊಬೈಲ್ ಯೂನಿಟ್) ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ಪ್ರತಿದಿನ ಶುಚಿಗೊಳಿಸುವ ಮಹತ್ತರ ಕಾರ್ಯವನ್ನು ಕೈಗೊಂಡಿದ್ದಾರೆ. ಗ್ರಾಮೀಣ ಭಾಗದ ಸುಮಾರು 6,500ಕ್ಕೂ ಹೆಚ್ಚು ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗೆ ನೆರವಾಗುತ್ತಿದ್ದಾರೆ. ಇದಲ್ಲದೆ, ಕೋಟಲಿಂಗೇಶ್ವರ ದೇಗುಲದ ಶೌಚಾಲಯ ನಿರ್ವಹಣೆಯಲ್ಲೂ ಕೈಜೋಡಿಸಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗೋಪಾಡಿ ಶ್ರೀನಿವಾಸ ರಾವ್ ಅವರು, "ಕಳೆದ 30 ವರ್ಷಗಳಿಂದ ನಮಗೆ ಮಾರ್ಗದರ್ಶನ ಹಾಗೂ ನಿರಂತರ ಬೆಂಬಲ ನೀಡುತ್ತಾ ಬಂದಿರುವ ಹಿರಿಯ ಪತ್ರಕರ್ತ ರವಿ ಹೆಗಡೆ ಅವರಿಗೆ ಈ ಪ್ರಶಸ್ತಿಯನ್ನು ಮುಡಿಪಾಗಿಡುತ್ತಿದ್ದೇನೆ. ಸ್ವಚ್ಛತೆಯೇ ನನ್ನ ಜೀವನದ ತಪಸ್ಸು. ಸಮಾಜದಲ್ಲಿ ಆಹಾರ, ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಕುಟುಂಬ ಹಾಗೂ ಸಿಬ್ಬಂದಿಯ ಬೆಂಬಲವೇ ಕಾರಣ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆಯ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಶೌಚಾಲಯ ನೈರ್ಮಲ್ಯೀಕರಣ ಅಭಿಯಾನವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ" ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಗೋಪಾಡಿ ಶ್ರೀನಿವಾಸರಾಯರ ಪತ್ನಿ ರುಕ್ಮಿಣಿ ಇದ್ದರು. ಸುವರ್ಣ ನ್ಯೂಸ್ - ಕನ್ನಡಪ್ರಭ ಸಮೂಹ ಸಂಪಾದಕೀಯ ನಿರ್ದೇಶಕರಾದ ರವಿ ಹೆಗಡೆ, ಮಲೇಷಿಯಾದ ಭಾರತೀಯ ಕೌನ್ಸೆಲರ್, ಮಲೇಷಿಯಾದ ಖ್ಯಾತ ಹೃದ್ರೋಗ ತಜ್ಞ ಮತ್ತು ಉದ್ಯಮಿ ಡಾ. ವೀರಪ್ಪನ್ ಮತ್ತಿತರ ಗಣ್ಯರು ಹಾಜರಿದ್ದರು.