ಬೆಂಗಳೂರು [ಅ.26]:  ದೀಪಾವಳಿ ಹಾಗೂ ವಾರಾಂತ್ಯ ರಜೆಗಳ ಹಿನ್ನೆಲೆ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲು ಮುಂದಾಗಿದ್ದರಿಂದ ನಗರದ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಕೆಎಸ್‌ಆರ್‌ ರೈಲು ನಿಲ್ದಾಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿತ್ತು.

ಮೈಸೂರು ರಸ್ತೆಯ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣ, ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿಯ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳಲ್ಲಿ ಭಾರೀ ಸಂಖ್ಯೆಯ ಪ್ರಯಾಣಿಕರು ಜಮಾಯಿಸಿದ್ದರು. ಸಂಜೆಯಿಂದಲೇ ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣಗಳತ್ತ ಪ್ರಯಾಣಿಕರು ದೌಡಾಯಿಸುತ್ತಿದ್ದರು. ತುಂತುರು ಮಳೆಯ ನಡುವೆಯೂ ಊರುಗಳಿಗೆ ತೆರಳಲು ನಿಲ್ದಾಣಗಳಿಗೆ ಬರುತ್ತಿದ್ದರು. ಒಂದೆಡೆ ಮಳೆ ಹಾಗೂ ಮತ್ತೊಂದೆಡೆ ವಾಹನ ಸಂಚಾರ ದಟ್ಟಣೆಯಿಂದ ಮೆಜೆಸ್ಟಿಕ್‌ ಸುತ್ತಮುತ್ತಲ ರಸ್ತೆಗಳಲ್ಲಿ ಸವಾರರು ಕೆಲ ಕಾಲ ಪರದಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿದಂತೆ ದೂರದ ಜಿಲ್ಲೆಗಳ ಪ್ರಯಾಣಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇನ್ನು ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತೆಲಂಗಾಣದ ವಿವಿಧ ನಗರಗಳಿಗೆ ಹೆಚ್ಚಿನ ಮಂದಿ ಪ್ರಯಾಣಿಸಿದರು. ಕೆಎಸ್‌ಆರ್‌ಟಿಸಿಯ ನಾಲ್ಕು ಟರ್ಮಿನಲ್‌ಗಳಲ್ಲೂ ಪ್ರಯಾಣಿಕರ ದಟ್ಟಣೆ ಹೆಚ್ಚಿತ್ತು. ಬಿಎಂಟಿಸಿಯ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಮೆಟ್ರೋ ರೈಲು ನಿಲ್ದಾಣಗಳಲ್ಲೂ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಇದ್ದರು. ಹಬ್ಬದ ರಜೆಗಳ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಿದ್ದರಿಂದ ಬಹುತೇಕ ಬಸ್‌ಗಳು ಭರ್ತಿಯಾಗಿದ್ದವು. ನಗರದ ಮೌರ್ಯ ವೃತ್ತ, ಆನಂದ ರಾವ್‌ ವೃತ್ತ, ರೇಸ್‌ಕೋರ್ಸ್‌ ರಸ್ತೆಗಳಿಂದ ಹೊರಡುವ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರು ತಮ್ಮ ಊರುಗಳಿಗೆ ಪ್ರಯಾಣಿಸಿದರು.

ಪ್ರಯಾಣಿಕರ ಸುಲಿಗೆ :  ವಿಶೇಷ ಸಂದರ್ಭಗಳ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್‌ ಆಪರೇಟರ್‌ಗಳು, ಶುಕ್ರವಾರವೂ ಪ್ರಯಾಣ ದರವನ್ನು ಎರಡರಿಂದ ನಾಲ್ಕು ಪಟ್ಟು ಏರಿಸಿಕೊಂಡು ಪ್ರಯಾಣಿಕರ ಸುಲಿಗೆಗೆ ಇಳಿದಿದ್ದರು. ಬೆಂಗಳೂರು- ಮಂಗಳೂರು ಪ್ರಯಾಣ ದರ ಸಾಮಾನ್ಯ ದಿನಗಳಲ್ಲಿ ಕನಿಷ್ಠ 450 ರು. ರಿಂದ ಗರಿಷ್ಠ 1200 ಇದ್ದರೆ, ಶುಕ್ರವಾರ 1200 ರು. ರಿಂದ 2 ಸಾವಿರ ರು. ವರೆಗೆ ಏರಿಕೆ ಮಾಡಲಾಗಿತ್ತು. ಇನ್ನು ಬೆಳಗಾವಿಗೆ ಸಾಮಾನ್ಯ ದಿನಗಳಲ್ಲಿ ಕನಿಷ್ಠ 500ರಿಂದ 1 ಸಾವಿರ ರು. ಇರುತ್ತದೆ. ಆದರೆ, 1400 ರು. ರಿಂದ 2 ಸಾವಿರ ವರೆಗೂ ಏರಿಕೆ ಮಾಡಲಾಗಿತ್ತು. ಇನ್ನು ಹುಬ್ಬಳ್ಳಿ. ಮಡಿಕೇರಿ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ದೂರುದೂರುಗಳ ಪ್ರಯಾಣ ದರವನ್ನು ಮನಬಂದತೆ ಏರಿಕೆ ಮಾಡಿ ಸುಲಿಗೆ ಮಾಡುತ್ತಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸುಲಿಗೆ ಇಂದು ನೆನ್ನೆಯದಲ್ಲ. ದಶಕಗಳಿಂದ ಗ್ರಾಹಕರ ಸುಲಿಗೆ ಅವ್ಯಾಹತವಾಗಿ ನಡೆಯುತ್ತಿದೆ. ಪ್ರಯಾಣಿಕರ ಆಕ್ರೋಶ ಹೆಚ್ಚಾದಾಗ ಪೊಲೀಸರು ಅಥವಾ ಸಾರಿಗೆ ಇಲಾಖೆ ಅಧಿಕಾರಿಗಳು ನೆಪಮಾತ್ರಕ್ಕೆ ತಪಾಸಣೆ ನಡೆಸುತ್ತಾರೆ. ಉಳಿದಂತೆ ನಮಗೂ ಖಾಸಗಿ ಬಸ್‌ಗಳಿಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಾರೆ. ಇನ್ನು ಈ ಖಾಸಗಿ ಬಸ್‌ ದಂಧೆಯ ಹಿಂದೆ ಪ್ರಭಾವಿಗಳೇ ಇರುವುದರಿಂದ ರಾಜ್ಯ ಸರ್ಕಾರಗಳು ಸಹ ಈ ದಂಧೆಗೆ ಬ್ರೇಕ್‌ ಹಾಕಲು ಮುಂದಾಗುತ್ತಿಲ್ಲ.