ದೊಡ್ಡಬಳ್ಳಾಪುರದಲ್ಲಿ 48 ಎಕರೆ ಭೂಮಿಯನ್ನು ಗೋದ್ರೇಜ್ ಪ್ರಾಪರ್ಟೀಸ್ ಸ್ವಾಧೀನಪಡಿಸಿಕೊಂಡಿದೆ. ಈ ಭೂಮಿಯಲ್ಲಿ 1.1 ಮಿಲಿಯನ್ ಚದರ ಅಡಿಯ ಪ್ಲಾಟ್‌ಗಳನ್ನು ಅಭಿವೃದ್ಧಿಪಡಿಸಲಿದ್ದು, ಬೆಂಗಳೂರು ಉತ್ತರ ಭಾಗದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತೇಜನ ನೀಡಲಿದೆ.

ಬೆಂಗಳೂರು: ಮುಂಬೈ ಮೂಲದ ರಿಯಲ್ ಎಸ್ಟೇಟ್ ಡೆವಲಪರ್ ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ (ಜಿಪಿಎಲ್) ದೊಡ್ಡಬಳ್ಳಾಪುರದ ಭಾಗದಲ್ಲಿ 48 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಈ ಸಂಬಂಧ ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಈ 48 ಎಕರೆ ಭೂಮಿಯಲ್ಲಿ ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ ಪ್ಲಾಟ್‌ ಅಭಿವೃದ್ಧಿಗೆ ಪ್ರಾಥಮಿಕ ಆದ್ಯತೆಯನ್ನು ನೀಡಲಿದೆ. 1.1 ಮಿಲಿಯನ್ ಚದರ ಅಡಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಿದೆ. ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಿರುವ ಭೂಮಿ ಬೆಂಗಳೂರು ಉತ್ತರ ಭಾಗದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಬಳಿಯಲ್ಲಿದೆ.

ಈ ಯೋಜನೆಯಿಂದಾಗಿ ಬೆಂಗಳೂರು ಉತ್ತರ ಭಾಗದ ರಿಯಲ್ ಎಸ್ಟೇಟ್ ಉದ್ಯಮ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶ ಮೂಲಭೂತ ಸೌಕರ್ಯ ಹೊಂದಿರುವ ಕಾರಿಡಾರ್ ಆಗಿ ಮಾರ್ಪಾಡು ಆಗಲಿದೆ. ಈ ಪ್ರದೇಶದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರವಾಸಿ ತಾಣ ನಂದಿಬೆಟ್ಟ ಸಮೀಪದಲ್ಲಿದ್ದು, ದೊಡ್ಡಬಳ್ಳಾಪುರ ಭಾಗ ಕಡಿಮೆ ಸಮಯದಲ್ಲಿಯೇ ರಿಯಲ್ ಎಸ್ಟೇಟ್ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಲಿದೆ.

ತ್ತಮ ಯೋಜಿತ ವಸತಿಯ ಪ್ಲಾಟ್‌ ನಿರ್ಮಾಣ

ಈ ಯೋಜನೆ ಕುರಿತು ಪ್ರತಿಕ್ರಿಯಿಸಿರುವ ಗೋದ್ರೇಜ್ ಪ್ರಾಪರ್ಟೀಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಗೌರವ್ ಪಾಂಡೆ, ಈ ಹೂಡಿಕೆಯು ನಮ್ಮ ಉಪಸ್ಥಿತಿಯನ್ನು ವಿಸ್ತರಿಸುತ್ತಿದೆ. ಮೂಲಭೂತ ಸೌಕರ್ಯವುಳ್ಳ ವಸತಿ ಸಮುಚ್ಚಯ ನಿರ್ಮಾಣ ಈ ಭಾಗದಲ್ಲಿಯ ಹಲವು ಅಭಿವೃದ್ಧಿಯ ಬೆಳವಣಿಗೆಗೆ ಕಾರಣವಾಗಲಿದೆ. ಗೋದ್ರೇಜ್ ಪ್ರಾಪರ್ಟೀಸ್‌ ಉತ್ತಮ ಯೋಜಿತ ವಸತಿಯ ಪ್ಲಾಟ್‌ ನಿರ್ಮಿಸಲಿದೆ ಎಂದು ಹೇಳಿದ್ದಾರೆ.

ದೀರ್ಘಾವಧಿಯ ಮೌಲ್ಯವುಳ್ಳ ಅಭಿವೃದ್ಧಿ

ದೊಡ್ಡಬಳ್ಳಾಪುರದಲ್ಲಿ 40 ಎಕರೆ ಭೂಮಿಯನ್ನು ಪಡೆದುಕೊಂಡಿದ್ದೇವೆ ಎಂದು ಹೇಳಲು ನಮಗೆ ಸಂತೋಷವಾಗುತ್ತಿದೆ. ದೊಡ್ಡಬಳ್ಳಾಪುರ ಬೆಂಗಳೂರು ಉತ್ತರ ಭಾಗದ ಮಾರುಕಟ್ಟೆ ಕೇಂದ್ರವಾಗಿದೆ. ಬೆಂಗಳೂರು ನಮಗೆ ಪ್ರಮುಖ ಮೊದಲ ಮಾರುಕಟ್ಟೆಯಾಗಿದೆ. ಬೆಂಗಳೂರು ನಿವಾಸಿಗಳಿಗೆ ದೀರ್ಘಾವಧಿಯ ಮೌಲ್ಯವುಳ್ಳ ಅಭಿವೃದ್ಧಿ ನೀಡಲು ನಾವು ಕಾಯುತ್ತಿದ್ದೇವೆ. ದೊಡ್ಡಬಳ್ಳಾಪುರದ ಪ್ರಮುಖ ಭಾಗದಲ್ಲಿ ಜಮೀನು ಖರೀದಿಸಿರೋದು ಸಂತಸದ ವಿಷಯ ಎಂದು ಗೌರವ್ ಪಾಂಡೆ ಹೇಳುತ್ತಾರೆ.

ಬೆಂಗಳೂರು ಉತ್ತರ ಭಾಗದ ಭೂಮಿಯ ಮೌಲ್ಯ ಹೆಚ್ಚಳ

ಗೋದ್ರೇಜ್ ಪ್ರಾಪರ್ಟೀಸ್‌ ಈ ಸ್ವಾಧೀನವು ಬೆಂಗಳೂರು ಉತ್ತರ ಭಾಗದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದೆ. ದೊಡ್ಡಬಳ್ಳಾಪುರ, ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಸೇರಿದಂತೆ ಬೆಂಗಳೂರು ಉತ್ತರ ಭಾಗದ ಭೂಮಿಯ ಮೌಲ್ಯ ಹೆಚ್ಚಳಕ್ಕೆ ಗೋದ್ರೇಜ್ ಪ್ರಾಪರ್ಟೀಸ್‌ ಡೀಲ್ ಕಾರಣವಾಗಲಿದೆ. ಭವಿಷ್ಯದಲ್ಲಿ ಈ ಭಾಗದ ರಿಯಲ್ ಎಸ್ಟೇಟ್ ಉದ್ಯಮ ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗಲಿದೆ. ಈಗಾಗಲೇ ಬೆಂಗಳೂರು ಉತ್ತರ ಭಾಗದಲ್ಲಿ ನಡೆಯುತ್ತಿರುವ,ಪೂರ್ಣಗೊಂಡ ಯೋಜನೆಗಳನ್ನು ಹೊಂದಿದ್ದೇವೆ ಎಂದು ಗೋದ್ರೇಜ್ ಪ್ರಾಪರ್ಟಿಸ್ ಹೇಳಿದೆ.

ಹೊಸಕೋಟೆಯಲ್ಲಿ 14 ಎಕರೆ ಭೂಮಿ

ಈ ಹಿಂದೆ ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ ಹೊಸಕೋಟೆಯಲ್ಲಿ 14 ಎಕರೆ ಭೂಮಿಯಲ್ಲಿ ಪ್ರೀಮಿಯಂ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿಕೊಂಡಿತ್ತು. ಇದು 1500 ಕೋಟಿ ರೂ. ಯೋಜನೆ ಎಂದು ವರದಿಯಾಗಿದೆ.

ರಾಯ್ಪುರಕ್ಕೂ ಎಂಟ್ರಿ ನೀಡಿರುವ ಗೋದ್ರೇಜ್ ಪ್ರಾಪರ್ಟಿಸ್

ರಾಯ್ಪುರದಲ್ಲಿ ಪ್ಲಾಟ್ ಅಭಿವೃದ್ಧಿಗಾಗಿ 50 ಎಕರೆ ಭೂಮಿಯನ್ನು ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಿದೆ ಎಂದು ಜುಲೈ 16ರಂದು ಘೋಷಿಸಿದೆ. ಸೆಂಟ್ರಲ್ ರಾಯ್‌ಪುರ, ರಾಯ್‌ಪುರ ರೈಲ್ವೆ ನಿಲ್ದಾಣ ಮತ್ತು ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದ ಸಮೀಪದಲ್ಲಿಯೇ ಈ ಪ್ರದೇಶವಿದೆ ಎಂದು ಗೋದ್ರೇಜ್ ಹೇಳಿದೆ. ಪ್ರಾಥಮಿಕವಾಗಿ ಪ್ರೀಮಿಯಂ ಪ್ಲಾಟ್ ಹೊಂದಿರುವ ವಸತಿ ಘಟಕಗಳನ್ನು ನಿರ್ಮಾಣ ಮಾಡಲಿದೆ. ರಾಯ್ಪುರದಲ್ಲಿಯೂ ರಿಯಲ್ ಎಸ್ಟೇಟ್ ಉದ್ಯಮ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ.