ರಷ್ಯಾ ಹಾಗೂ ಉಕ್ರೇನ್‌ ಯುದ್ಧದಿಂದ ಪಾಠ ಕಲಿತು ದೇಶದ ಸೇನೆಯು ಭವಿಷ್ಯದಲ್ಲಿ ಸದಾ ಸಜ್ಜಾಗಿರಬೇಕೆಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕರೆ ನೀಡಿದ್ದಾರೆ.  

ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್‌ ಯುದ್ಧದಿಂದ ಪಾಠ ಕಲಿತು ದೇಶದ ಸೇನೆಯು ಭವಿಷ್ಯದಲ್ಲಿ ಸದಾ ಸಜ್ಜಾಗಿರಬೇಕೆಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕರೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿಯ ಹೊರಗೆ ನಡೆದ ಹಾಗೂ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ 75ನೇ ಭಾರತೀಯ ಸೇನಾ ದಿನಾಚರಣೆಯ ಶೌರ್ಯ ಸಂಧ್ಯಾ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ಆರ್ಥಿಕಾಭಿವೃದ್ಧಿ ರಕ್ಷಣೆ ಸೇರಿ ದೇಶದ ಸಮಗ್ರ ಅಭಿವೃದ್ಧಿಗೆ ಕಾರಣವಾಗುವ ಭಾರತೀಯ ಸೈನ್ಯವು, ಭವಿಷ್ಯದ ಸವಾಲು ಎದುರಿಸಲು ಸದಾ ಸಜ್ಜಾಗಿರಬೇಕು. ಹೊಸತನಕ್ಕೆ ಒಗ್ಗಿಕೊಳ್ಳುವ ಕ್ಷಮತೆ ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಗತ್ತಿನ ದೈತ್ಯ ಸೈನ್ಯಗಳು ತಮ್ಮನ್ನು ಆಧುನಿಕತೆಗೆ ತೆರೆದುಕೊಳ್ಳುತ್ತಿವೆ. ಯುದ್ಧೋಪಕರಣಗಳ ಬಗ್ಗೆ ಸಂಶೋಧನೆ ಹೆಚ್ಚಿಸಿವೆ. ಸಮಯ ಬದಲಾದಂತೆ ದೇಶ ಎದುರಿಸುವ ಭದ್ರತಾ ಸವಾಲುಗಳು ಕೂಡ ಭಿನ್ನವಾಗಿವೆ. ಯುದ್ಧವು, ಇದೀಗ ತಂತ್ರಜ್ಞಾನ (technology) ಹಾಗೂ ಸೈನಿಕರ ಸಂಯೋಜನೆಯಾಗಿ ಪರಿವರ್ತನೆಯಾಗಿದೆ. ಭಾರತೀಯ ಸೈನ್ಯ (Indian Army)ಕೂಡ ಯೋಜನಾಬದ್ಧ ತಂತ್ರಗಾರಿಕೆ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಇವತ್ತಿನ ಬದಲಾಗಿ ‘ಭವಿಷ್ಯದ ಕುರಿತು ಯೋಚನೆ’ ಎಂಬ ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

Army Day: ಭದ್ರತಾ ರಕ್ಷಣೆಯಿಂದ ಸೈನಿಕರ ಸಾವಿನ ಪ್ರಮಾಣ ತಗ್ಗಿದೆ: ಸೇನಾ ಮುಖ್ಯಸ್ಥ ಮನೋಜ್‌ ಪಾಂಡೆ

ಸೇನಾ ದಿನಾಚರಣೆ ಅಂಗವಾಗಿ ಯೋಧರು, ಸುಖೋಯ್‌, ಜಾಗ್ವಾರ್‌ ಯುದ್ಧ ವಿಮಾನಗಳ ಮಿಂಚಿನ ಸಂಚಾರ, ರಾಷ್ಟ್ರಧ್ವಜ ಹೊತ್ತ ಹೆಲಿಕಾಪ್ಟರ್‌ ಹಾರಾಟ, ಡ್ರೋನ್‌ಗಳ ಮೂಲಕ ಪುಷ್ಪವೃಷ್ಟಿ, ಪ್ಯಾರಾಚೂಟ್‌ ಮೂಲಕ ಯೋಧರಿಂದ ಬಗೆಬಗೆಯ ಪ್ರದರ್ಶನ, ಬೈಕ್‌ನಲ್ಲಿ ವಿವಿಧ ಕಸರತ್ತು, ಬೆಂಕಿಯೊಳಗಿನಿಂದ ಬೈಕ್‌ ಜಂಪ್‌, ಬೈಕ್‌ ಸವಾರನಿಂದ ಟ್ಯೂಬ್‌ಲೈಟ್‌ ಒಡೆಯುವ ಮೂಲಕ ಮೈನವಿರೇಳಿಸುವ ಸಾಹಸವನ್ನು ಪ್ರದರ್ಶಿಸಿದರು. ತನ್ಮೂಲಕ ಭಾರತೀಯ ಸೇನೆಯ ಶಕ್ತಿಯನ್ನು ಅನಾವರಣಗೊಳಿಸಿದರು. 

ಆರ್ಥಿಕ ಶಕ್ತಿ:

ಕಳೆದ ಆರ್ಥಿಕ ವರ್ಷದಲ್ಲಿ ದೇಶ 6.8 ಲಕ್ಷ ಕೋಟಿ ರು.ನಷ್ಟು ದಾಖಲೆಯ ವಿದೇಶಿ ನೇರ ಬಂಡವಾಳ ವಹಿವಾಟು ಸಾಧಿಸಿದೆ. 2047ರ ವೇಳೆಗೆ ಆರ್ಥಿಕತೆಯಲ್ಲಿ ಭಾರತ ಜಗತ್ತಿನಲ್ಲಿ 3ನೇ ಸ್ಥಾನಕ್ಕೇರುವ ಭರವಸೆ ನಮಗಿದೆ. ಯಾವುದೇ ಹೂಡಿಕೆ ಸಂಸ್ಥೆಗಳು ಅನ್ಯ ದೇಶದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡೆ ಹೂಡಿಕೆ ಮಾಡುತ್ತವೆ. ಅರ್ಥ ವ್ಯವಸ್ಥೆ ರಕ್ಷಣೆ ಸೇರಿ ಸಮಗ್ರ ಆಯಾಮದಿಂದ ಸೈನ್ಯ ಭವಿಷ್ಯತ್ತಿನ ದೃಷ್ಟಿಯಿಂದ ಸಜ್ಜಾಗಬೇಕು ಎಂದರು.

ಭಾರತಕ್ಕೆ ಮನ್ನಣೆ:

ಈ ಮೊದಲು ಜಗತ್ತು ಭಾರತದ ಮಾತನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಆದರೆ ಈಗ ಜಾಗತಿಕ ಸಮುದಾಯ ಕಿವಿ ತೆರೆದುಕೊಂಡು ಭಾರತದ ಮಾತನ್ನು ಕೇಳುತ್ತಿವೆ. ರಷ್ಯಾ ಉಕ್ರೇನ್‌ ಯುದ್ಧದ ಆರಂಭದಲ್ಲಿ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ಪುಟಿನ್‌, ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ, ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಜೊತೆ ಚರ್ಚಿಸಿದ್ದರು. ಪರಿಣಾಮ ಯುದ್ಧ ವಿರಾಮಗೊಳಿಸಿ ಅವರು ಭಾರತೀಯರ ರಕ್ಷಣೆಗೆ ಸಹಕಾರ ನೀಡಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಮರ್ಥ್ಯ ತೋರುತ್ತಿದೆ ಎಂದರು.

ಭಾರತ, ಮೋದಿಯನ್ನು ಕೊಂಡಾಡಿದ ಪಾಕ್ ರಕ್ಷಣಾ ವಿಶ್ಲೇಷಕ ಶಹ್ಜಾದ್

ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆಗಳ ಮುಖ್ಯಸ್ಥ ಅನಿಲ್‌ ಚೌಹಾಣ್‌, ಭಾರತೀಯ ಸೇನಾಪಡೆ ಮುಖ್ಯಸ್ಥ ಜ. ಮನೋಜ್‌ಕುಮಾರ್‌ ಪಾಂಡೆ, ಮೇ.ಜ. ಎಂ.ಕೆ. ಖಾನ್‌, ಸಚಿವ ಡಾ. ಕೆ. ಸುಧಾಕರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕರ್ನಾಟಕ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌, ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.