ಬೆಂಗಳೂರಿನ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಕಾನೂನು ಲೋಪಗಳ ಹಿನ್ನೆಲೆಯಲ್ಲಿ ಈ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಾಲಯ, ಆಡಳಿತವನ್ನು ಮರಳಿ ಟ್ರಸ್ಟ್ಗೆ ಹಸ್ತಾಂತರಿಸಲು ಸೂಚಿಸಿದೆ.
ಬೆಂಗಳೂರು: ಮುಜರಾಯಿ ಇಲಾಖೆಯ ಸುಪರ್ದಿಗೆ ನಗರದ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಒಪ್ಪಿಸಿ 2025ರ ಜುಲೈ 8ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಏಕಸದಸ್ಯ ಪೀಠ ತೀರ್ಪು
ಸರ್ಕಾರದ ಆದೇಶ ಪ್ರಶ್ನಿಸಿ, ದೇವಸ್ಥಾನದ ಟ್ರಸ್ಟ್ ಸಂಚಾಲಕ ಬಿ.ಪಿ.ನಾಗರಾಜು ಹಾಗೂ ಇತರ ಟ್ರಸ್ಟಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಏಕಸದಸ್ಯ ಪೀಠ ತೀರ್ಪು ನೀಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್.ರವಿಶಂಕರ್ ಅವರು ವಾದ ಮಂಡಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿದೆ. ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆದುಕೊಂಡಿದ್ದ ಆದೇಶದಲ್ಲಿ ಕಾನೂನು ಲೋಪಗಳಿರುವ ಹಿನ್ನೆಲೆಯಲ್ಲಿ ರದ್ದುಗೊಳಿಸಿದೆ. ಮೂಲ ಆದೇಶವೇ ರದ್ದಾಗಿರುವುದರಿಂದ, ದೇವಾಲಯಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದ ಪ್ರಕ್ರಿಯೆಯೂ ಅಸಿಂಧುವಾಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಮುಕ್ತ ಅವಕಾಶ
ನ್ಯಾಯಾಲಯದ ಆದೇಶ ಪ್ರಕಟಗೊಂಡ ಒಂದು ವಾರದೊಳಗೆ ಆಡಳಿತಾಧಿಕಾರಿಯು ದೇವಸ್ಥಾನದ ಆಡಳಿತ ನಿರ್ವಹಣೆಯನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಬೇಕು. ಆದರೆ, ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳ ಕುರಿತು ಸಂಬಂಧಪಟ್ಟ ಇಲಾಖೆ ಹಾಗೂ ಪ್ರಾಧಿಕಾರವು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮುಕ್ತ ಅವಕಾಶವನ್ನು ಹೈಕೋರ್ಟ್ ನೀಡಿದೆ.
ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದಿರುವುದು, ಲಕ್ಷಾಂತರ ರು. ಆದಾಯವಿದ್ದರೂ ಉಳಿತಾಯವಿಲ್ಲದೆ ವೆಚ್ಚ ಮಾಡುತ್ತಿರುವುದು ಹಾಗೂ ಹಣ ದುರುಪಯೋಗವಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೇ, ಕಳೆದ 25 ವರ್ಷಗಳಿಂದ ಸರಿಯಾಗಿ ದಾಖಲೆ ನಿರ್ವಹಣೆ ಮಾಡಿಲ್ಲ ಮತ್ತು ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರು ನೋಟಿಸ್ ನೀಡಿದ ಬಳಿಕ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂಬ ಕಾರಣ ನೀಡಿ ಸರ್ಕಾರ 2025ರ ಜುಲೈ 8ರಂದು ದೇವಸ್ಥಾನವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತ್ತು.


