ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರಿಸುವ ಸರ್ಕಾರದ ನಿರ್ಧಾರಕ್ಕೆ ಭಕ್ತರು ಮತ್ತು ಟ್ರಸ್ಟ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹುಂಡಿ ಕಳವು ಪ್ರಕರಣವನ್ನು ನೆಪವಾಗಿಸಿಕೊಂಡು ಈ ಷಡ್ಯಂತ್ರ ನಡೆದಿದೆ ಎಂದು ಟ್ರಸ್ಟ್ ಆರೋಪಿಸಿದೆ.
ಬೆಂಗಳೂರು: ಐತಿಹಾಸಿಕ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ನೀಡಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕೆ ದೇವಾಲಯದ ಟ್ರಸ್ಟ್ ಹಾಗೂ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ನಿರ್ಧಾರವನ್ನು ವಿರೋಧಿಸಿ ಇಂದು ಬೆಳಗ್ಗೆ 10 ಗಂಟೆಗೆ ದೇವಾಲಯದ ಎದುರು ಭಾರೀ ಪ್ರತಿಭಟನೆ ನಡೆಯಲಿದೆ. ಸಾವಿರಕ್ಕೂ ಹೆಚ್ಚು ಭಕ್ತರು ಈ ಪ್ರತಿಭಟನೆಗೆ ಸೇರಿಕೊಳ್ಳುವ ಸಾಧ್ಯತೆ ಇದೆ. ಟ್ರಸ್ಟ್ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ದೇವಾಲಯದ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುತ್ತಿರುವ ಟ್ರಸ್ಟ್ ವಿರುದ್ಧ ಕೆಲವು ಕೆಟ್ಟ ಗುಂಪುಗಳು ಹುಂಡಿ ಕಳವು ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಎಳೆತಂದಿದ್ದು, ಇದೇ ವಿಚಾರವನ್ನು ಆಧರಿಸಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರಿಸಲು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಟ್ರಸ್ಟ್ ಆರೋಪಿಸಿದೆ.
“ಹುಂಡಿ ಎಣಿಕೆಯ ವೇಳೆ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಆದರೂ ಅದೇ ಕಾರಣವನ್ನು ಮುಂದಿಟ್ಟುಕೊಂಡು ದೇವಾಲಯವನ್ನು ಮುಜರಾಯಿ ಸುಪರ್ದಿಗೆ ನೀಡಲು ಸರ್ಕಾರ ಯತ್ನಿಸುತ್ತಿದೆ. ಇದು ದೇವಾಲಯದ ಸ್ವಾಯತ್ತತೆಗೆ ಧಕ್ಕೆ ತರುವ ನಿರ್ಧಾರ,” ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ. ಈ ದಿಢೀರ್ ಸರ್ಕಾರದ ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ, ಭಕ್ತರು ಮತ್ತು ಟ್ರಸ್ಟ್ ಸದಸ್ಯರು ದೇವಾಲಯದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಟ್ರಸ್ಟಿಗಳು ತುರ್ತು ಸಭೆ
ದೇಗುಲ ಹಸ್ತಾಂತರ ಹಿನ್ನೆಲೆಯಲ್ಲಿ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಟ್ರಸ್ಟಿಗಳು ತುರ್ತು ಸಭೆ ನಡೆಸಿದರು, ದೇವಾಲಯದ ಟ್ರಸ್ಟಿ ನಾಗರಾಜ್ ಮತ್ತು ಬಿ.ಆರ್. ಕಿಷನ್ ಮಹತ್ವದ ವಿವರಗಳನ್ನು ಹಂಚಿಕೊಂಡಿದ್ದಾರೆ.
ನಾಗರಾಜ್ ಹೇಳಿಕೆ:
“ಮುಜರಾಯಿ ಇಲಾಖೆಯ ಆದೇಶ ಕುರಿತು ತುರ್ತು ಸಭೆ ನಡೆಸಿದ್ದೇವೆ. ಅವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದವು. ಅವರ ರೀತಿಯಲ್ಲೇ ನಾವು ಕಾನೂನಾತ್ಮಕ ಹೋರಾಟ ಮಾಡಲಿದ್ದೇವೆ. ಈಗಲೇ ವಕೀಲರನ್ನು ಸಂಪರ್ಕಿಸಿದ್ದು, ಕೋರ್ಟ್‌ಗೆ ಹೋಗುವ ನಿರ್ಧಾರದಲ್ಲಿದ್ದೇವೆ. ದೇವಾಲಯವನ್ನು 5 ವರ್ಷಗಳ ಕಾಲ ಸುಪರ್ದಿಗೆ ಪಡೆಯಲು ಇಲಾಖೆ ಯತ್ನಿಸುತ್ತಿರುವ ವಿಚಾರದಲ್ಲಿ ನಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇದುವರೆಗೆ ಮುಜರಾಯಿ ಇಲಾಖೆಯಿಂದ ಯಾವುದೇ ನೋಟೀಸ್ ಕೂಡ ಬಂದಿಲ್ಲ. ಸಚಿವರು ಹಾಗೂ ಸ್ಥಳೀಯ ಶಾಸಕರಿಗೆ ವಿಷಯ ತಿಳಿಸಿ, ನಾಳೆ ಶಾಸಕ ಕೃಷ್ಣಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ. ಈ ದೇವಾಲಯಕ್ಕೆ ಬ್ಯಾಟರಾಯನಪುರ, ಆವಲಹಳ್ಳಿ ಮತ್ತು ದೀಪಾಂಜಲಿ ನಗರ ಭಾಗಗಳು ಸೇರಿವೆ,” ಎಂದು ನಾಗರಾಜ್ ತಿಳಿಸಿದರು.
ಬಿ.ಆರ್. ಕಿಷನ್ ಹೇಳಿಕೆ:
“ತಾವು 25 ವರ್ಷಗಳಿಂದ ಆಡಿಟ್ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ನಾವು ಪ್ರತಿವರ್ಷವೂ ಆಡಿಟ್ ಮಾಡುತ್ತಿದ್ದೇವೆ. 25 ವರ್ಷದ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ದಾಖಲೆಗಳಿವೆ. 2023-24ನೇ ಸಾಲಿನ ಇನ್‌ಕಮ್ ಟ್ಯಾಕ್ಸ್ ಆಡಿಟ್ ಕೂಡ ನಡೆದಿದೆ. ದೇವಾಲಯದ ಹಣವನ್ನು ಜೋಪಾನವಾಗಿ ಉಳಿಸಿಕೊಂಡಿದ್ದೇವೆ. ಸರ್ಕಾರಕ್ಕೆ ಮನವಿ ಸಲ್ಲಿಸುವೆವು. ನಾಳೆ ಬೆಳಿಗ್ಗೆ ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ನಂತರ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ. ದೇವಾಲಯದ ಹಣ ಉಳಿಸಿರುವುದರ ಜೊತೆಗೆ ಕೋಟ್ಯಂತರ ರೂಪಾಯಿಗಳ ಬೆಲೆಯ ಆಭರಣಗಳನ್ನು ಖರೀದಿಸಿ ಸ್ಟ್ರಾಂಗ್ ರೂಮಿನಲ್ಲಿ ಭದ್ರಪಡಿಸಿದ್ದೇವೆ. ದೇವಾಲಯ ನಮ್ಮ ಮನೆ ಇದ್ದಂತೆ. ಕೆಲವೊಮ್ಮೆ ತಪ್ಪುಗಳು ಸಂಭವಿಸಿವೆ, ಆದರೆ ಅವನ್ನು ಸರಿಪಡಿಸಿಕೊಂಡು ದೇವಾಲಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇವೆ,” ಎಂದು ಬಿ.ಆರ್. ಕಿಷನ್ ಸ್ಪಷ್ಟಪಡಿಸಿದರು.
