ಬಿಡದಿ ಸೇರಿ ಹಲವೆಡೆ ನಡೆದ ದಾಳಿಯಲ್ಲಿ ನಕಲಿ ಫೈಜರ್ ಔಷಧಿ ಜಾಲ ಪತ್ತೆಯಾಗಿದೆ. ಪ್ರಕರಣದ ಕಿಂಗ್‌ಪಿನ್ ಪ್ರಶಾಂತ್ ಟರ್ಕಿಯಿಂದ ಅಸಲಿ ಲೇಬಲ್ ತಂದು ನಕಲಿ ಔಷಧಿಗೆ ಅಂಟಿಸಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದನು. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ನಕಲಿ ಔಷಧ ದಂಧೆ ಪ್ರಕರಣದಲ್ಲಿ ಬಂಧಿತ ಆರೋಪಿ ಪ್ರಶಾಂತ್ ಫೈಜರ್‌ ಕಂಪನಿ ಔಷಧದ ಒರಿಜನಲ್‌ ಲೇಬಲ್‌ ತರಲು ವರ್ಷಕ್ಕೆ ಹತ್ತಾರು ಬಾರಿ ಟರ್ಕಿ ದೇಶಕ್ಕೆ ಹೋಗುತ್ತಿದ್ದ ಅಂಶ ವಿಚಾರಣೆ ವೇಳೆ ಬಯಲಾಗಿದೆ.

ಪ್ರಕರಣದ ಕಿಂಗ್‌ಪಿನ್‌ ಕೂಡ ಆಗಿರುವ ಪ್ರಶಾಂತ್‌ನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ಈ ಕಳ್ಳಾಟ ಗೊತ್ತಾಗಿದೆ. ಈ ರೀತಿ ಟರ್ಕಿಯಿಂದ ತಂದ ಅಸಲಿ ಲೇಬಲ್‌ಗಳನ್ನು ಬಳಸಿ ನಕಲಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.

ಅಜರ್‌ಬೈಜಾನ್‌ ಸೇರಿ ಬೇರೆ ಬೇರೆ ದೇಶಗಳಿಗೆ ಭೇಟಿ

ಆರೋಪಿ ಪ್ರಶಾಂತ್‌ ವರ್ಷದಲ್ಲಿ ಹತ್ತಾರು ಬಾರಿ ಟರ್ಕಿಗೆ ಹೋಗಿ ಬರುತ್ತಿದ್ದ. ಅಲ್ಲಿಂದ ಅತಿ ಕಡಿಮೆ ಗುಣಮಟ್ಟದ ಔಷಧವನ್ನು ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಬಿದ್ದಿದ್ದರಿಂದ ಟರ್ಕಿ ದೇಶದ ವೀಸಾ ರದ್ದಾಗಿತ್ತು. ಹೀಗಾಗಿ ಟರ್ಕಿಗೆ ಹೋಗಲು ಸಾಧ್ಯವಾಗದೆ ಅಜರ್‌ಬೈಜಾನ್‌ ಸೇರಿ ಬೇರೆ ಬೇರೆ ದೇಶಗಳಿಗೆ ಹೋಗುತ್ತಿದ್ದ. ಅಲ್ಲಿಂದ ಮಧ್ಯವರ್ತಿಗಳ ಮೂಲಕ ಟರ್ಕಿಯಿಂದ ಫೈಜರ್‌ ಕಂಪನಿಯ ಔಷಧಿಗಳ ಜೀವರಕ್ಷಕ ಔಷಧಗಳ ಒರಿಜನಲ್‌ ಲೇಬಲ್‌ಗಳನ್ನು ತರಿಸಿಕೊಳ್ಳುತ್ತಿದ್ದ. ತರುವಾಯ ಅದನ್ನು ಭಾರತಕ್ಕೆ ತಂದು ನಕಲಿ ಮೆಡಿಸಿನ್‌ಗಳಿಗೆ ಹಾಕಿ ಮಾರಾಟ ಮಾಡುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ರೀತಿ ವಿದೇಶದಿಂದ ಅಸಲಿ ಲೇಬಲ್‌ ತಂದು ನಕಲಿ ಔಷಧಿ ಬಾಟಲ್‌ಗಳಿಗೆ ಅಂಟಿಸಿ ಒರಿಜಿನಲ್‌ ಔಷಧಿಗಳ ಜತೆ ಇಟ್ಟು ಸರಬರಾಜು ಮಾಡಿ ಕೋಟ್ಯಂತರ ರು. ಸಂಪಾದಿಸುತ್ತಿದ್ದ ಎಂಬುದು ತನಿಖೆ ವೇಳೆ ಬಯಲಾಗಿದೆ.

ಮತ್ತೊಬ್ಬನ ವಿಚಾರಣೆ

ನಕಲಿ ಔಷಧಿ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್‌ನನ್ನು ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಸುಬ್ರಮಣಿಯನ್, ಪ್ರಶಾಂತ್‌ನ ಡಮ್ಮಿ(ನಕಲಿ) ಕಂಪನಿಗೆ ಮಾಲೀಕನಾಗಿದ್ದ.