ವಿಶ್ವಬ್ಯಾಂಕ್ ನೆರವಿನಿಂದ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ 148 ಎಂಎಲ್‌ಡಿ ಸಾಮರ್ಥ್ಯದ 9 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಕಾಮಗಾರಿಯನ್ನು ಚುರುಕುಗೊಳಿಸಲು ಜಲಮಂಡಳಿ ಅಧ್ಯಕ್ಷೆ ಸೂಚಿಸಿದ್ದಾರೆ. ಅಲ್ಲದೆ, ಜೈಕಾ ನೆರವಿನ ಕಾವೇರಿ 6ನೇ ಹಂತದ ಕುಡಿಯುವ ನೀರಿನ ಯೋಜನೆಗೂ ಅಂತಿಮ ರೂಪ ನೀಡಲಾಗಿದೆ.

ಬೆಂಗಳೂರು: ವಿಶ್ವ ಬ್ಯಾಂಕ್ ನೆರವಿನಿಂದ ನಗರದ ವಿವಿಧೆಡೆ ನಿರ್ಮಾಣವಾಗುತ್ತಿರುವ ಒಟ್ಟು 148 ಎಂಎಲ್‌ಡಿ ಸಾಮರ್ಥ್ಯದ 9 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಶ್ವ ಬ್ಯಾಂಕ್ ಮತ್ತು ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ನೆರವಿನಲ್ಲಿ ನಡೆಯುತ್ತಿರುವ ಎಸ್‌ಟಿಪಿ ನಿರ್ಮಾಣ, ಒಳಚರಂಡಿ ಜಾಲ, ತ್ಯಾಜ್ಯ ನೀರು ಸಂಸ್ಕರಣೆ ಮತ್ತು ನೀರು ಸರಬರಾಜು ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಡಾ.ಎನ್. ಮಂಜುಳಾ ನಡೆಸಿದರು.

ಎಲ್ಲೆಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ?

ಇಬ್ಬಲೂರಿನಲ್ಲಿ 5 ಎಂಎಲ್‌ಡಿ ಸಾಮರ್ಥ್ಯ, ಅಬ್ಬಿಗೆರೆ - 5, ಯು.ಎಂ. ಕಾವಲ್ -10, ಕೊಗಿಲು - 15, ಅಂಜನಾಪುರ - 35, ಚನ್ನಸಂದ್ರ- 20, ಸೌಲ್‌ಕೆರೆ -28, ಹುಳಿಮಾವು - 15, ಚಿಕ್ಕ ಬೇಗೂರಿನಲ್ಲಿ 15 ಎಂಎಲ್‌ಡಿ ಸೇರಿದಂತೆ ಒಟ್ಟು 148 ಎಂಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿಗಳನ್ನು ವಿಶ್ವಬ್ಯಾಂಕ್ ನೆರವಿನಲ್ಲಿ ನಿರ್ಮಿಸಲಾಗುತ್ತಿದೆ. ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಬ್ಯಾಟರಾಯನಪುರ, ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯಗಳಲ್ಲಿ ನಡೆಯುತ್ತಿರುವ ಎಸ್‌ಟಿಪಿ ಹಾಗೂ ಒಳಚರಂಡಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಕಾವೇರಿ 6ನೇ ಹಂತಕ್ಕೆ ಸಾಲ: ಮಂಜುಳ

ಜೈಕಾ ನೆರವಿನಲ್ಲಿ ಪ್ರಸ್ತಾವಿಸಲಾದ ಕಾವೇರಿ ನೀರು ಸರಬರಾಜು ಯೋಜನೆಯ 6ನೇ ಹಂತಕ್ಕೆ ಅಂತಿಮ ರೂಪ ನೀಡಲಾಗಿದ್ದು, ಸಾಲ ಮಂಜೂರಾತಿಗೆ ಸಂಬಂಧಿಸಿದ ಅಂತಿಮ ಹಂತದ ಮಾತುಕತೆಯನ್ನೂ ಸಭೆಯಲ್ಲಿ ನಡೆಸಲಾಯಿತು. ಯೋಜನೆಗೆ ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ದೊರೆತಿದ್ದು, ಅಗತ್ಯ ಪೂರ್ವಸಿದ್ಧತೆಗಳನ್ನು ಆರಂಭಿಸಲಾಗಿದೆ. ಬೆಂಗಳೂರು ನಗರದ ಕೆಲವು ಭಾಗಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಭವಿಷ್ಯದ ಕುಡಿಯುವ ನೀರಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸುವಂತೆ ಡಾ. ಎನ್. ಮಂಜುಳ ಸೂಚಿಸಿದರು.