ನಟ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಮತ್ತು ಕುಟುಂಬದ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟ ಧನ್ವೀರ್ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತಮ್ಮ ಬೆನ್ನಿಗೆ ಚೂರಿ ಹಾಕಿರುವ ಧನ್ವೀರ್ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಲು ದರ್ಶನ್ ಮನವಿ ಮಾಡಿದ್ದಾರೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಕುಟುಂಬ ಹಾಗೂ ನಟ ಧನ್ವೀರ್ ನಡುವಿನ ಗಲಾಟೆ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ತಮ್ಮ ಹಾಗೂ ತಮ್ಮ ಪತ್ನಿಯ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಆಗಲಿ ನನ್ನ ಕುಟುಂಬದ ವಿರುದ್ಧವಾಗಲಿ ಯಾವುದೇ ಹೇಳಿಕೆ ನೀಡಬಾರದೆಂದು ತಡೆ ಕೋರಿ ಧನ್ವೀರ್ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಸಲ್ಲಿಕೆ ಮಾಡಿದ್ದಾರೆ.
ತಮ್ಮ ಪರ ವಕೀಲರಾದ ರಂಗನಾಥ ರೆಡ್ಡಿ ಅವರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ದರ್ಶನ್, ಧನ್ವೀರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ತಮ್ಮ ಕುಟುಂಬದ ಕುರಿತು ಯಾವುದೇ ಮಾಧ್ಯಮಗಳಲ್ಲಿ ಅಥವಾ ಸಾರ್ವಜನಿಕವಾಗಿ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಬೇಕೆಂದು ಮನವಿ ಮಾಡಿದ್ದಾರೆ.
'ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ': ದರ್ಶನ್ ಆಕ್ರೋಶ
ಅರ್ಜಿಯಲ್ಲಿ ನಟ ಧನ್ವೀರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ದರ್ಶನ್, ನನ್ನ ಅಭಿಮಾನಿಗಳ ಬೆಂಬಲದಿಂದ ಧನ್ವೀರ್ ಬೆಳೆದಿದ್ದಾನೆ. ಈಗ ನನ್ನ ಮತ್ತು ನನ್ನ ಪತ್ನಿಯ ಮರ್ಯಾದೆಯನ್ನು ಹರಾಜು ಹಾಕುತ್ತಿದ್ದಾನೆ. ನನ್ನ ಹೆಸರನ್ನು ಬಳಸಿಕೊಂಡು ಬೆಳೆದು, ಕೊನೆಗೆ ನನ್ನ ಕುಟುಂಬದ ಬೆನ್ನಿಗೇ ಚೂರಿ ಹಾಕುವ ಕೆಲಸ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪತ್ನಿಯ ತೇಜೋವಧೆ ಹಾಗೂ ಸುಳ್ಳು ಆರೋಪಗಳಿಗೆ ಖಂಡನೆ
ಪ್ರದೋಷ್ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಪತ್ನಿಯ ಮೇಲೆ ಧನ್ವೀರ್ ಮಾಡಿರುವ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು ಎಂದು ದರ್ಶನ್ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದು. ಧನ್ವೀರ್ ನೀಡುತ್ತಿರುವ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ತಮ್ಮ ಪತ್ನಿಯ ಚಾರಿತ್ರ್ಯ ಹರಣವಾಗುತ್ತಿದ್ದು, ತೀವ್ರ ಮಾನಸಿಕ ನೆಮ್ಮದಿ ಹಾಳಾಗಿದೆ ಎಂದು ಕೋರ್ಟ್ಗೆ ತಿಳಿಸಿದ್ದಾರೆ.
ನ್ಯಾಯಾಲಯದಲ್ಲಿ ಮಾಡಲಾಗಿರುವ ಮುಖ್ಯ ಮನವಿಗಳು:
ನಟ ಧನ್ವೀರ್ , ದರ್ಶನ್ ಆಗಲಿ ಪತ್ನಿ, ಕುಟುಂಬದ ವಿರುದ್ಧವಾಗಲಿ ಯಾವುದೇ ರೀತಿಯ ಹೇಳಿಕೆಗಳನ್ನು ಮಾಧ್ಯಮಗಳಲ್ಲಾಗಲಿ, ಸಾಮಾಜಿಕ ಜಾಲತಾಣಗಳಲ್ಲಾಗಲಿ ನೀಡದಂತೆ ತಡೆಯಾಜ್ಞೆ ನೀಡಬೇಕು.
ಪ್ರದೋಷ್ ಹಾಗೂ ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸುಳ್ಳು ಆರೋಪಗಳನ್ನು ಮಾಡಿ ತೇಜೋವಧೆ ಮಾಡುವುದನ್ನು ತಕ್ಷಣವೇ ತಡೆಯಬೇಕು.
ನಂಬಿಕೆದ್ರೋಹ ಎಸಗಿ, ಕುಟುಂಬದ ಗೌರವಕ್ಕೆ ಧಕ್ಕೆ ತಂದಿರುವುದಕ್ಕಾಗಿ ಮಾನನಷ್ಟ ಮೊಕದ್ದಮೆಯಡಿ ಕಾನೂನುಬದ್ಧ ಶಿಕ್ಷೆ ವಿಧಿಸಬೇಕು.
ವಕೀಲ ರಂಗನಾಥ ರೆಡ್ಡಿ ಅವರ ಮೂಲಕ ಸಲ್ಲಿಕೆಯಾಗಿರುವ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಶೀಘ್ರದಲ್ಲೇ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ. ಈ ಬೆಳವಣಿಗೆಯಿಂದಾಗಿ ಕಳೆದ ಒಂದು ವಾರದಿಂದ ದರ್ಶನ್ ಪತ್ನಿ ಮತ್ತು ಧನ್ವೀರ್ ನಡುವಿನ ಜಗಳ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.






