ರಾಜ್ಯ ರಾಜಕಾರಣದ ರಹಸ್ಯಗಳನ್ನು ಒಳಗೊಂಡಿರುವ 'ಬಾಂಬೆ ಡೇಸ್' ಪುಸ್ತಕವನ್ನು ಪ್ರಕಟಿಸದಿರಲು ಎಚ್.ವಿಶ್ವನಾಥ್ ನಿರ್ಧರಿಸಿದ್ದಾರೆ. ರಾಜಕೀಯದ ಬಗ್ಗೆ ಜನರಿಗೆ ಮತ್ತಷ್ಟು ಅಸಹ್ಯ ಮೂಡುವುದು ಬೇಡ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ, ಎನ್‌ಡಿಎ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿ, ವಾರಣಾಸಿ ಸೋಲನ್ನು ನೆನಪಿಸಿದ್ದಾರೆ.

ಮೈಸೂರು (ಅ.29): ರಾಜ್ಯ ರಾಜಕಾರಣದ ತೆರೆಮರೆಯ ರಹಸ್ಯಗಳನ್ನು ಬಿಚ್ಚಿಡಲಿದೆ ಎಂದೇ ನಿರೀಕ್ಷಿಸಲಾಗಿದ್ದ ಬಹುಚರ್ಚಿತ ‘ಬಾಂಬೆ ಡೇಸ್’ (Bombay Days) ಪುಸ್ತಕವನ್ನು ಪ್ರಕಟಿಸದಿರಲು ನಿರ್ಧರಿಸಿರುವುದಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ವಿಶ್ವನಾಥ್ ಘೋಷಿಸಿದ್ದಾರೆ.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪುಸ್ತಕ ಬಿಡುಗಡೆಯಿಂದ ಹಿಂದೆ ಸರಿದಿರುವುದಕ್ಕೆ ಕಾರಣವನ್ನು ವಿವರಿಸಿದ್ದಲ್ಲದೆ, ಮೈಸೂರು ರಾಜಮನೆತನದ ಬಗ್ಗೆ ಹೇಳಿಕೆ ನೀಡಿದ್ದ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದರು.

‘ಬಾಂಬೆ ಡೇಸ್’ ಪ್ರಕಟಿಸದಿರಲು ಕಾರಣವೇನು?

2019ರ ಸಮ್ಮಿಶ್ರ ಸರ್ಕಾರ ಪತನ ಹಾಗೂ 'ಆಪರೇಷನ್ ಕಮಲ'ದ ನೈಜ ಒಳಸುಳಿಗಳನ್ನು ಒಳಗೊಂಡಿದೆ ಎನ್ನಲಾದ ‘ಬಾಂಬೆ ಡೇಸ್’ ಪುಸ್ತಕದ ಬಗ್ಗೆ ಮಾತನಾಡಿದ ವಿಶ್ವನಾಥ್, "ಬಾಂಬೆ ಡೇಸ್ ಪುಸ್ತಕವನ್ನು ನಾನು ಸಂಪೂರ್ಣವಾಗಿ ಬರೆದು ಮುಗಿಸಿದ್ದೇನೆ. ಆದರೆ ಅದನ್ನು ಪ್ರಕಟ ಮಾಡದಿರಲು ಈಗ ನಿರ್ಧರಿಸಿದ್ದೇನೆ. ಈ ಪುಸ್ತಕವನ್ನು ಬಿಡುಗಡೆ ಮಾಡಿದರೆ ಜನ ರಾಜಕಾರಣದ ಬಗ್ಗೆ ಮತ್ತಷ್ಟು ಅಸಹ್ಯಪಟ್ಟುಕೊಳ್ಳುತ್ತಾರೆ. ಈಗಾಗಲೇ ಜನಸಾಮಾನ್ಯರಿಗೆ ರಾಜಕೀಯದ ಬಗ್ಗೆ ಬಹಳ ಅಸಹ್ಯ ಮೂಡಿದೆ. ನಾನಾಗಿಯೇ ಜನರಿಗೆ ರಾಜಕೀಯದ ಬಗ್ಗೆ ಇನ್ನಷ್ಟು ಅಸಹ್ಯ ಮಾಡಿಸುವುದಕ್ಕೆ ಇಷ್ಟವಿಲ್ಲ. ಆದ್ದರಿಂದ ಪುಸ್ತಕ ಪ್ರಕಟಣೆಯಿಂದ ಹಿಂದೆ ಸರಿದಿದ್ದೇನೆ' ಎಂದು ಸ್ಪಷ್ಟಪಡಿಸಿದರು.

ವಾರಣಾಸಿ ಸೋಲು ನೆನಪಿಸಿದ ವಿಶ್ವನಾಥ್:

ಇತ್ತೀಚೆಗೆ ನಡೆದ 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ (NDA) ಮೈತ್ರಿಕೂಟ ಭರ್ಜರಿ ಜಯ ದಾಖಲಿಸಿರುವ ಕುರಿತು ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ತಿವಿದರು. 'ಈ ಚುನಾವಣೆಯಲ್ಲಿ ವೋಟ್ ಮಾಡಿದ್ದು ಕೇವಲ ಪದವೀಧರರು ಮತ್ತು ಶಿಕ್ಷಕರು ಮಾತ್ರ. ಆದರೆ ಈ ಫಲಿತಾಂಶ ಬರುತ್ತಿದ್ದಂತೆಯೇ ಬಿ.ವೈ. ವಿಜಯೇಂದ್ರ, ಆರ್. ಅಶೋಕ್ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ‘2028ಕ್ಕೆ ನಾವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ’ ಎಂದು ಕೂಗಾಡುತ್ತಿದ್ದಾರೆ. ಆದರೆ, ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲೇ ಬಿಜೆಪಿ ಸೋತಿದೆ. ಅಲ್ಲಿ ಸಮಾಜವಾದಿ ಪಕ್ಷ ಗೆಲುವು ಸಾಧಿಸಿದೆ ಎಂಬುದನ್ನು ಈ ನಾಯಕರು ಮರೆಯಬಾರದು,' ಎಂದು ತಿರುಗೇಟು ನೀಡಿದರು.