ಬೆಂಗಳೂರಿನ ಟೆಕ್ಕಿ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾನೆ. ಮ್ಯೂಚುವಲ್ ಫಂಡ್, ಚಿನ್ನ, ಷೇರು ಸೇರಿದಂತೆ ಹಲವೆಡೆ ಹೂಡಿಕೆಯನ್ನು ಮಾಡುತ್ತಿದ್ದಾನೆ. ಖಾತೆಯಲ್ಲಿ 6 ಲಕ್ಷ ರೂಪಾಯಿ ಉಳಿತಾಯ ಮಾಡಿದ್ದಾನೆ. ಆದರೂ ಬೆಂಗಳೂರಲ್ಲಿ ಬಡವ ಎಂದಿದ್ದೇಕೆ?
ಬೆಂಗಳೂರು (ಜು.27) ಐಟಿ ಸಿಟಿ ಬೆಂಗಳೂರು ಉತ್ತಮ ವೇತನ ನೀಡುವ ನಗರ ಎಂದೇ ಗುರುತಿಸಿಕೊಂಡಿದೆ. ಭಾರತದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಉತ್ತಮ ವೇತನ ಸಿಗುತ್ತೆ.ಪ್ರಮುಖವಾಗಿ ಬೆಂಗಳೂರಿನ ಟೆಕ್ ಕ್ಷೇತ್ರ ಕೈತುಂಬ ವೇತನ ನೀಡುತ್ತದೆ. ಹೀಗೆ 26 ವರ್ಷದ ಬೆಂಗಳೂರಿನ ಟೆಕ್ಕಿ ಪ್ರತಿ ತಿಂಗಳು 2 ಲಕ್ಷ ರೂಪಾಯಿ ಸ್ಯಾಲರಿ ಪಡೆಯುತ್ತಿದ್ದಾನೆ. ಇನ್ನು ಯಾವುದೇ ಸಾಲ ಇಲ್ಲ. ಕಂತು ಕಟ್ಟಬೇಕಾದ ತಲೆನೋವು ಇಲ್ಲ. ಪ್ರತಿ ತಿಂಗಳು ಚಿನ್ನದ ಮೇಲೆ, ಷೇರು, ಮ್ಯೂಚ್ಯುವಲ್ ಫಂಡ್ ಸೇರಿದಂತೆ ಕೆಲ ಹೂಡಿಕೆ ಮಾಡುತ್ತಿದ್ದಾನೆ. ಇನ್ನು ಸ್ಯಾಲರಿ ಖಾತೆಯಲ್ಲಿ 6 ಲಕ್ಷ ರೂಪಾಯಿ ಉಳಿತಾಯವನ್ನು ಮಾಡಿದ್ದಾನೆ. ಇಷ್ಟಾದರೂ ಬೆಂಗಳೂರಲ್ಲಿ ನಾನು ಬಡವ ಎಂದು ಟೆಕ್ಕಿ ಹೇಳಿದ್ದಾನೆ. ಬೆಂಗಳೂರಿನ ಟೆಕ್ಕಿ ರೆಡ್ಡಿಟ್ ಮೂಲಕ ತನ್ನ ನೋವು ಹೇಳಿಕೊಂಡಿದ್ದಾನೆ.
ಪೇಪರ್‌ನಲ್ಲಿ ಮಾತ್ರ ನಾನು ಶ್ರೀಮಂತ
ಪೇಪರ್‌ನಲ್ಲಿ ಆರ್ಥಿಕವಾಗಿ ಸದೃಢವಾಗಿ ಕಾಣುತ್ತಿದ್ದೇನೆ, ಆದರೆ ನಿಜವಾಗಿಯೂ ನಾನು ಬಡವನಾಗಿದ್ದೇನೆ ಎಂದು ಬೆಂಗಳೂರು ಟೆಕ್ಕಿ ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾರೆ. ನನಗೆ ಇಷ್ಟು ವೇತನ ಇದ್ದರೂ ನಾನು ಬಡವ ಅನ್ನೋ ಭಾವನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾನೆ. ವಿದ್ಯಾಭ್ಯಾಸ ದಿನಗಳಲ್ಲಿ ಪೋಷಕರ ವೇತನ, ಈಗ ತನ್ನ ವೇತನಕ್ಕೆ ಅಜಗಜಾಂತರ ವ್ಯತ್ಯಾಸವಿದೆ ಎಂದಿರುವ ಟೆಕ್ಕಿ ಹಲವು ಘಟನೆಗಳು ಬಿಚ್ಚಿಟ್ಟಿದ್ದಾನೆ. ಪೋಷಕರಿಗೆ ಎಲ್ಲಾ ವಸ್ತುಗಳನ್ನು ನೀಡಿದ್ದೇನೆ. ತನಗೆ ಸ್ಕೂಟರ್, ಮ್ಯಾಕ್‌ಬುಕ್, ಐಫೋನ್ ಕೂಡ ಖರೀದಿಸಿರುವುದಾಗಿ ಟೆಕ್ಕಿ ಹೇಳಿದ್ದಾನೆ. ಪೋಷಕರಿಗೆ, ತನಗೆ ಹೆಲ್ತ್ ಇನ್ಶೂರೆನ್ಸ್ ಮಾಡಿರುವುದಾಗಿ ಹೇಳಿದ್ದಾನೆ.
ತನಗೆ 26 ವರ್ಷ ಎಂದು ಹೇಳಿಕೊಂಡಿರುವ ಟೆಕ್ಕಿ 2 ಲಕ್ಷ ರೂಪಾಯಿ ತಿಂಗಳಿಗೆ ವೇತನವಾಗಿ ಪಡೆಯುತ್ತಿದ್ದೇನೆ ಎಂದಿದ್ದಾನೆ. ನಾನು ಹಾಗೂ ನನ್ನ ಕುಟುಂಬದ ಮೇಲೆ ಯಾವುದೇ ಸಾಲ ಇಲ್ಲ. 21 ವರ್ಷದ ವರೆಗೆ ನನ್ನ ಕುಟುಂಬದ ಒಟ್ಟು ಆದಾಯ 6 ರಿಂದ 7 ಸಾವಿರ ರೂಪಾಯಿ ಮಾತ್ರ. ಸಣ್ಣ ಮನೆಯಲ್ಲಿ ನಾವು ಅತ್ಯಂತ ಕಷ್ಟದಲ್ಲಿ ಬೆಳೆದು ಬಂದಿದ್ದೇವೆ. ನಾನು ಕೆಲಸ ಗಿಟ್ಟಿಸಿಕೊಂಡ ತಕ್ಷಣ ಪೋಷಕರನ್ನು ಕೆಲಸದಿಂದ ಬಿಡಿಸಿ ಊರಿನಲ್ಲಿ 2 ಬೆಡ್ ರೂಂ ಬಾಡಿಗೆ ಮನೆ ಮಾಡಿಕೊಟ್ಟಿದ್ದೇನೆ. ನಾನು ಬೆಂಗಳೂರಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ ಎಂದು ಟೆಕ್ಕಿ ಹೇಳಿದ್ದಾನೆ.
ಉಳಿತಾಯ ಲೆಕ್ಕ ಹೇಳಿದ ಟೆಕ್ಕಿ
ತನಗೆ ಬರವು ಸ್ಯಾಲರಿಯಲ್ಲಿ ಪ್ರತಿ ತಿಂಗಳು 30 ಸಾವಿರ ರೂಪಾಯಿ ಮ್ಯೂಚ್ಯುವಲ್ ಫಂಡ್, 10 ಸಾವಿರ ರೂ ಎಫ್‌ಡಿ, 10 ಸಾವಿರ ಚಿನ್ನ, ಪೋಷಕರಿಗೆ 15 ರಿಂದ 20 ಸಾವಿರ, ನನ್ನ ಬಾಡಿಗೆ, ಖರ್ಚು ವೆಚ್ಚ 25 ಸಾವಿರ ರೂಪಾಯಿ. 2021ರಿಂದ ಇಲ್ಲೀವರೆಗೆ ಸ್ಯಾಲರಿ ಖಾತೆಯಲ್ಲಿ 6 ಲಕ್ಷ ರೂಪಾಯಿ ಉಳಿತಾಯ, ಷೇರಿನಲ್ಲಿ 4 ಲಕ್ಷ ರೂ, ಎಫ್‌ಡಿಯಲ್ಲಿ 2 ಲಕ್ಷ ರೂ, ಚಿನ್ನದಲ್ಲಿ 2.5 ಲಕ್ಷ ರೂ, ಹೂಡಿಕೆ ಮಾಡಿದ್ದೇನೆ.
ಉಳಿತಾಯ, ಹೂಡಿಕೆ, ವೇತನ ಎಲ್ಲವೂ ನನಗಿದೆ. ಆದರೆ ನಾನು ಬಡವ ಅನ್ನೋ ಭಾವನೆಯಿಂದ ಹೊರಬಂದಿಲ್ಲ, ಹೊರಬರಲು ಸಾಧ್ಯವಾಗುತ್ತಿಲ್ಲ. ನಾನು ಶ್ರೀಮಂತ ಎಂದು ನನಗೆ ಅನಿಸುತ್ತಿಲ್ಲ. ಮದುವೆಯಾಗುವ ಆಲೋಚನೆ ಇದೆ, ಪೋಷಕರ ಒತ್ತಾಯವೂ ಇದೆ. ಮದುವೆಗೆ ಕನಿಷ್ಠ 10 ಲಕ್ಷ ರೂ ಖರ್ಚಾಗಬಹುದು. ಸೆಕೆಂಡ್ ಹ್ಯಾಂಡ್ ಖರೀದಿಸುವ ಆಸೆ ಇದೆ. ಸ್ವಂತ ಊರಿನಲ್ಲಿ 10 ರಿಂದ 15 ಲಕ್ಷಕ್ಕೆ ಜಾಗ ಖರೀದಿಸಿ ಮನೆ ಕಟ್ಟಿಸುವ ಆಸೆ ಇದೆ. ಒಂದೊಂದೆ ಮಾಡಬೇಕು. ಎಲ್ಲವನ್ನೂ ಒಟ್ಟಿಗೆ ಮಾಡಲು ಆಗಲ್ಲ. ಈ ಎಲ್ಲಾ ಕನಸುಗಳು ಈಡೇರುವಾಗ ವಯಸ್ಸು ಹಾಗೂ ಸಮಯ ಅದೆಷ್ಟಾಗುತ್ತದೋ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.


