ಧರ್ಮಸ್ಥಳ ಕೇಸ್‌ನಲ್ಲಿ ಚಿನ್ನಯ್ಯನ ಜಾಮೀನಿಗೆ ಶ್ಯೂರಿಟಿ ನೀಡಲು ಆಗುತ್ತಿಲ್ಲ, ಕಾರಣ ಹೇಳಿದ ಮಟ್ಟಣ್ಣನವರ್, ಚಿನ್ನಯ್ಯನಿಗೆ ಜಾಮೀನು ಸಿಕ್ಕರೂ ಶ್ಯೂರಿಟಿ ನೀಡಲು ಯಾರೂ ಮುಂದೆ ಬಂದಿಲ್ಲ. ಈ ಕುರಿತು ಗಿರೀಶ್ ಮಟ್ಟಣ್ಣನವರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು (ಡಿ.04) ಧರ್ಮಸ್ಥಳದ ಬುರುಡೆ ಪ್ರಕರಣದ ತನಿಕೆ ನಡೆಸಿರುವ ಎಸ್ಐಟಿ ಈಗಾಗಲೇ ಮಧ್ಯಂತರ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದೆ. ಈ ಪ್ರಕರಣದಲ್ಲಿ ದೂರು ನೀಡಿದ್ದ ಚಿನ್ನಯ್ಯನೇ ಅರೆಸ್ಟ್ ಆಗಿ ವಿಚಾರಣೆ ಎದುರಿಸುವಂತಾಗಿದೆ. ಧರ್ಮಸ್ಥಳ ಪ್ರಕರಣದ ಆರಂಭದಲ್ಲಿ ಭಾರಿ ಮೇಲುಗೈ ಸಾಧಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಗ್ಯಾಂಗ್ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಉತ್ಖನನ ಮಾಡಿದರೂ ಶವಗಳು ಸಿಗಲಿಲ್ಲ, ದೂರು ನೀಡಿದವರೇ ಸಾಕ್ಷಿಗಳಾಗಿದ್ದಾರೆ. ಈ ಪೈಕಿ ಚಿನ್ನಯ್ಯ, ಸುಜಾತ್ ಭಟ್ ಅಸಲಿ ಕತೆ ಬಾಯ್ಬಿಟ್ಟು ಬುರುಡೆ ಕೇಸ್ ಹಿಂದಿನ ಷಡ್ಯಂತ್ರ ಬಯಲು ಮಾಡಿದ್ದಾರೆ. ಇಡೀ ಪ್ರಕರಣ ಕುರಿತು ಇದೀಗ ಗಿರೀಶ್ ಮಟ್ಟಣ್ಣನವರ್ ಪ್ರತಿಕ್ರಿಯಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ಸರಿಯಾಗಿ ಆಗಿಲ್ಲ. ಎಸ್‌ಐಟಿ ತನಿಖೆಯಲ್ಲಿ ದೂರುದಾರರನ್ನೇ ಹೆದರಿಸಿ, ಬೆದರಿಸಿ ತನಿಖೆ ಮಾಡಿದ್ದಾರೆ ಎಂದು ಮಟ್ಟಣ್ಣನವರ್ ಆರೋಪಿಸಿದ್ದಾರೆ. ಇದೇ ವೇಳೆ ಚಿನ್ನಯ್ಯನ ಜಾಮೀನು ಕುರಿತು ಮಾತನಾಡಿದ್ದಾರೆ.

ಚಿನ್ನಯ್ಯನಿಗೆ ಯಾರಿಂದಲೂ ಸಿಗಲಿಲ್ಲ ಶ್ಯೂರಿಟಿ

ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯನಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಸಿಕ್ಕರೂ ಶ್ಯೂರಿಟಿ ನೀಡಲು ಯಾರೂ ಮುಂದೆ ಬಂದಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯನಿಗೆ ಜಾಮೀನು ಸಿಕ್ಕಿದೆ. ಆದರೆ ಶ್ಯೂರಿಟಿ ನೀಡಲು ಯಾರು ಮುಂದೆ ಬರುತ್ತಿಲ್ಲ ಎಂದಲ್ಲ. ನನಗೆ ಶ್ಯೂರಿಟಿ ನೀಡಲು ಕೆಲ ತಾಂತ್ರಿಕ ಸಮಸ್ಯೆ ಇದೆ. ಹೀಗಾಗಿ ಸಾಧ್ಯವಾಗುತ್ತಿಲ್ಲ. ಇಲ್ಲವಾದರೆ ನಾನೇ ಕೊಡುತ್ತಿದ್ದೆ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದ್ದಾರೆ.

ಧರ್ಮಸ್ಥಳ ಪ್ರಕರಣ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಗಿರೀಶ್ ಮಟ್ಟಣ್ಣನವರ್

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಮಾತನಾಡಿದ ಗಿರೀಶ್ ಮಟ್ಟಣ್ಣನವರ್ , ಧರ್ಮಸ್ಥಳ ಪ್ರಕರಣದ ತನಿಖೆ ಸರಿಯಾಗಿ ಆಗಿಲ್ಲ. ಧರ್ಮಸ್ಥಳ ಕೇಸ್ ನ್ಯಾಯಾಂಗ ತನಿಖೆ ಆಗಬೇಕು. ಎಸ್ ಐಟಿ ಯಲ್ಲಿ ಕೆಳ ಹಂತದ ಅಧಿಕಾರಿಗಳ ಹಸ್ತಕ್ಷೇಪ ದಿಂದ ಪಾರದರ್ಶಕ ತನಿಖೆ ನಡೆದಿಲ್ಲ. ಚಿನ್ನಯ್ಯಗೆ ಬೆದರಿಕೆ ಹಾಕಿ ತನಿಖೆ ಮಾಡಿದ್ದಾರೆ. ತನಿಖೆ ಹಾದಿ ಹಳ್ಳ ಹಿಡಿದಿದೆ. ಅಧಿಕಾರಿಗಳು ಸರಿಯಾಗಿ ತನಿಖೆ ಮಾಡಿದ್ದರೆ ನ್ಯಾಯಾಂಗ ತನಿಖೆಗೆ ಆಗ್ರಹಿಸುವ ಪ್ರಮೇಯ ಇರುತ್ತಿರಲಿಲ್ಲ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದ್ದಾರೆ.

ಚಿನ್ನಯ್ಯನಿಗೆ ಎಸ್‌ಐಟಿ ಅಧಿಕಾರಿಗಳ ಬೆದರಿಕೆ

ಎಸ್‌ಐಟಿ ಅಧಿಕಾರಿಗಳು ಚಿನ್ನಯ್ಯನಿಗೆ ಬೆದರಿಕೆ ಹಾಕಿದ್ದಾರೆ. ನೀವು ತೋರಿಸೋ ಜಾಗದಲ್ಲಿ ಶವ ಸಿಕ್ಕರೆ ಗಲ್ಲಿಗೆ ಏರಿಸುತ್ತೇವೆ ಎಂದು ಬೆದರಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳ ಭಯದಲ್ಲಿ ಚಿನ್ನಯ್ಯ ಶವ ಹೂತು ಹಾಕಿದ ಸರಿಯಾದ ಜಾಗ ತೋರಿಸಿಲ್ಲ. ಭಯದಿಂದಲೇ ಚಿನ್ನಯ್ಯ ಈ ರೀತಿ ಮಾಡಿದ್ದಾನೆ. ತನಿಖೆಯ ಆರಂಭದಲ್ಲೇ ಅಧಿಕಾರಿಗಳ ಬೆದರಿಯಿಂದ ತನಿಖೆ ಬೇರೆ ದಿಕ್ಕಿಗೆ ತಿರುಗಿತ್ತು ಎಂದಿದ್ದಾರೆ.

ನನಗೆ ಅವಕಾಶ ಕೊಟ್ರೆ ನಾನೇ ತೋರಿಸುತ್ತೇನೆ

ಸೌಜನ್ಯ ಕೇಸ್ ಸಂಬಂಧ ದೂರು‌ ನೀಡಲು ಬಂದ್ರೆ ಭಯ ಬೀಳಿಸಿ ಬೆದರಿಕೆ ಹಾಕಿದ್ದಾರೆ. ನನಗೆ ಅವಕಾಶ ಕೊಟ್ರೆ ನಾನೇ ಶವಗಳನ್ನು ಹೂತಿಟ್ಟ ಜಾಗ ತೋರಿಸುತ್ತೇನೆ. ಶವಗಳು ಹೂತಿಟ್ಟಿರುವುದು ಬೇರೆಯವರಿಗೆ ಆಶ್ಚರ್ಯ ಆಗಿರಬಹುದು. ಆದ್ರೆ ನಮ್ಮ ಊರಿನಲ್ಲಿ ಇದು ಸಾಮಾನ್ಯ ವಿಷಯ ಆಗಿದೆ. ಈ ತನಿಖೆಯಲ್ಲಿ ರಾಜಕಾರಣ ಬೆರೆಸಬಾರದು. ಧರ್ಮ ರಕ್ಷಣೆ ‌ಅಂತಾ ಎಲ್ಲರೂ ಬಂದಿದ್ದಾರೆ. ಆದರೆ ಅಲ್ಲಿ ಏನಾಗಿದೆ. ಧಾರ್ಮಿಕ ಭಾವನೆ ಇರೋ ಭಕ್ತರನ್ನೆ ಕೊಂದಿದ್ದಾರೆ. ಇದು ಯಾವ ಧರ್ಮ ರಕ್ಷಣೆ ಎಂದು ಗಿರೀಶ್ ಮಟ್ಟಣ್ಣನವರ್ ಪ್ರಶ್ನಿಸಿದ್ದಾರೆ.