Asianet Suvarna News Asianet Suvarna News

ಬೆಂಗಳೂರಿನಲ್ಲಿ ತುಳುನಾಡಿನ ಪಂಜುರ್ಲಿ ದೈವದಂತೆ ದೇವಿಗೆ ಅಲಂಕಾರ: ಕೆಲವರಿಂದ ವಿರೋಧ

ಇಲ್ಲೊಂದು ಕಡೆ ದೇವಿಗೆ ತುಳುನಾಡಿನ (Tulunadu) ದೈವ ಪಂಜುರ್ಲಿಗೆ (Panjurli)  ಅಲಂಕರಿಸುವಂತೆ ದೇವಿಗೆ ಅಲಂಕಾರ ಮಾಡಿದ್ದು, ಇದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ (Viral video) ಆಗಿದೆ. 

decoration of goddess as Panjurli deity of Tulunad in Bengaluru video viral some objection the act akb
Author
First Published Mar 23, 2023, 1:30 PM IST | Last Updated Mar 23, 2023, 1:31 PM IST

ಬೆಂಗಳೂರು: ತುಳುನಾಡಿನಲ್ಲಿ ದೇವರಿಗಿಂತ ದೈವರಾಧನೆಯೇ ಹೆಚ್ಚು ಪ್ರಚಲಿತ,  ನಂಬಿದ ದೈವ ಎಂದು ಕೈ ಬಿಡುವುದಿಲ್ಲ ಎಂಬ ನಂಬಿಕೆ ತುಳುವರದ್ದು. ಆದರೆ ಕಾಂತಾರ ಸಿನಿಮಾ ಬರುವುದಕ್ಕೂ ಮೊದಲು ತುಳುನಾಡಿನ ದೈವರಾಧನೆ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದಿರಲಿಲ್ಲ. ಕೇವಲ ತುಳುನಾಡಿನಲ್ಲಿ ಇದ್ದವರು, ಅಲ್ಲಿಂದ ಉದ್ಯೋಗ, ವ್ಯವಹಾರವೆಂದು ಹೊರಗೆ ಹೋದವರಿಗೆ ಹಾಗೂ ಉದ್ಯೋಗ ವೃತ್ತಿ ಶಿಕ್ಷಣ ಅರಸಿ ತುಳುನಾಡಿಗೆ ಬಂದವರಿಗಷ್ಟೇ ಈ ದೈವರಾಧಾನೆಯ ಅರಿವಿತ್ತು. ಆದರೆ ಕಾಂತಾರ ಸಿನಿಮಾದ ಮೂಲಕ ತುಳುನಾಡಿನ ಈ ಸಂಸ್ಕೃತಿ ಇಡೀ ವಿಶ್ವಕ್ಕೆ ತಿಳಿದಿದೆ.  ಸಿನಿಮಾ ಬಿಡುಗಡೆಯ ಬಳಿಕ ಕೆಲವು ಅತೀರೇಕದ ಅವಾಂತರಗಳು ನಡೆದಿವೆ. ದೈವದಂತೆ  ನರ್ತಿಸುವ ವಿಡಿಯೋ ಮಾಡಿ ಕೂಡ ಅನೇಕರು ಆಕ್ರೋಶಕ್ಕೆ ಗುರಿಯಾಗಿದ್ದರು.

ಈ ಮಧ್ಯೆ ಈಗ ಇಲ್ಲೊಂದು ಕಡೆ ದೇವಿಗೆ ತುಳುನಾಡಿನ (Tulunadu) ದೈವ ಪಂಜುರ್ಲಿಗೆ (Panjurli)  ಅಲಂಕರಿಸುವಂತೆ ದೇವಿಗೆ ಅಲಂಕಾರ ಮಾಡಿದ್ದು, ಇದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ (Viral video) ಆಗಿದ್ದು, ಕಾಂತಾರ ಸಿನಿಮಾ ನಿರ್ದೇಶಿಸಿದ್ದ ರಿಷಬ್ ಶೆಟ್ಟಿಗೆ ಬೈದುಕೊಂಡು ಒಬ್ಬರು ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು,  ಇದಕ್ಕೆ ಅನೇಕ ನೆಗೆಟಿವ್‌ ಕಾಮೆಂಟ್‌ಗಳು ಬಂದಿವೆ. 

'ಕಾಂತಾರ' ಒಳಗಣ್ಣಿಗೊಂದಿಷ್ಟು ಬೆಳಕು ಕೊಡುವ ಚಿತ್ರ, ಅದಕ್ಯಾಕೆ ಜಾತಿ, ಧರ್ಮದ ಬಣ್ಣ?

30 ಸೆಕೆಂಡ್‌ಗಳ ವಿಡಿಯೋದಲ್ಲಿ ಕಾಣಿಸುವಂತೆ ದೇವಿಯ ಒಂದು ಕೈಯಲ್ಲಿ ಕತ್ತಿ ಹಾಗೂ ಮತ್ತೊಂದು ಕೈಯಲ್ಲಿ ಪಂಜುರ್ಲಿ ದೈವ ಹಿಡಿದಿರುವಂತೆ  ದೊಂದಿ (ಪಂಜು)ಯನ್ನು ನೀಡಲಾಗಿದೆ.  ಅಲ್ಲದೇ ಹಿಂಭಾಗದಲ್ಲಿ ತಾಳೆಯ ಗರಿಯಿಂದ  ದೈವಗಳಿಗೆ ಅಲಂಕರಿಸುವಂತೆ ಅಲಂಕರಿಸಲಾಗಿದೆ. ಈ ಅಲಂಕಾರದಲ್ಲಿ ದೇವಿ ಸುಂದರವಾಗಿ ಕಂಗೊಳಿಸುತ್ತಿದ್ದಾಳೆ. ದೇಗುಲದ ಅರ್ಚಕರು ಆರತಿ ಮಾಡುತ್ತಿದ್ದು, ದೇಗುಲದಲ್ಲಿ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ವಿಡಿಯೋ ನೋಡಿದ ಅನೇಕರು ಆಕ್ರೋಶಗೊಂಡಿದ್ದಾರೆ. 

ರೋಶಾನ್ ರೆನೋಲ್ಡ್ ಎಂಬುವವರು ಫೇಸ್‌ಬುಕ್‌ನಲ್ಲಿ (Facebook) ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಕಾಂತಾರ ನಟ ರಿಷಭ್ ಶೆಟ್ಟಿಯನ್ನು ಬೈದುಕೊಂಡಿದ್ದಾರೆ.  ಹಣದ ಆಸೆಗಾಗಿ ತುಳುನಾಡಿನ ಆರಾಧನೆ ಆಚರಣೆಯನ್ನು ಎಲ್ಲಿಗೆ ತಲುಪಿಸಿದೆ ಮಾರಾಯ ಎಂದು ಆತ ಬರೆದುಕೊಂಡಿದ್ದಾರೆ.  ಇದಕ್ಕೆ ಕಾಮೆಂಟ್ ಮಾಡಿದ್ದ ಒಬ್ಬರು ರಿಷಭ್ ಶೆಟ್ಟಿ ದೈವಾರಾಧನೆಯನ್ನು ಹಾಳು ಮಾಡಿದ್ದಾರೆ ಎಂದು ಹೇಳಿದ್ದಾರೆ.  ಆದರೆ ಮತ್ತೆ ಕೆಲವರು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದು,  ದೈವ ದೇವರನ್ನು ಒಂದು ಪ್ರದೇಶಕ್ಕೆ ಬರೆದು ಕೊಟ್ಟಿದ್ದಾರೆಯೇ ? ದೇವರ ಆರಾಧನೆ ಮಾಡುವವರು ಶುದ್ಧದಿಂದ ಭಕ್ತಿಯಿಂದ ಎಲ್ಲಿ ಬೇಕಾದರೂ ಆರಾಧಿಸಲಿ, ದೇವರನ್ನು ಹಣಕ್ಕಾಗಿ ಹೇಗೆ ಹರಾಜಿಗಿಟ್ಟಿದ್ದಾರೆ ಎಂದು ನಮಗೂ ಗೊತ್ತು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲವಾ?: ದೈವರಾಧನೆ ಕೆಣಕುವ ವಿಚಾರವಲ್ಲ ಅಂದ್ರು!

ಅಲ್ಲದೇ ಅನೇಕರು ಪರವಾಗಿ ಅನೇಕರು ವಿರೋಧವಾಗಿ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲವೂ ಸರಿ ಎಂದಾದರೆ ದೈವರಾಧನೆಯ ಕಟ್ಟು ಕಟ್ಟಳೆಗಳು, ಸಂಧಿ ಪಾಡ್ದನಗಳು ಏಕೆ ಇರುವುದು ಎಂದು ಕೆಲವರು ಕೇಳಿದರೆ, ಮತ್ತೆ ಕೆಲವರು ಹಾಗಾದರೆ ಇತ್ತೀಚಿನ ದೈವರಾಧಾನೆಯಲ್ಲಿ ಏಕೆ ಹೆಚ್ಚಾಗಿ ವೈದಿಕ ಸಂಪ್ರದಾಯ ಬಳಕೆಯಾಗುತ್ತಿದೆ ಎಂದು ಪ್ರಶ್ನಿಸಿ ಪರಸ್ಪರ ಬೈದಾಡಿಕೊಳ್ಳುತ್ತಿದ್ದಾರೆ. 

ಅಂದಹಾಗೆ  ಮಲ್ಲೇಶ್ವರದಲ್ಲಿರು ಗಂಗಮ್ಮ ಗುಡಿಯಲ್ಲಿ ದೇವಿಗೆ ಈ ಪಂಜುರ್ಲಿ ಅಲಂಕಾರ ಮಾಡಲಾಗಿದೆ ಎಂದು ಈ ವಿಡಿಯೋ ಶೇರ್ ಮಾಡಿದವರು ಉಲ್ಲೇಖಿಸಿದ್ದಾರೆ.  ಅದೇನೆ ಇರಲಿ, ಆರಾಧನೆ, ಅಲಂಕಾರ ಅವರವರ ಭಾವ ಭಕುತಿಗೆ ಬಿಟ್ಟಿದು ಅಲ್ಲವೇ? 

 

Latest Videos
Follow Us:
Download App:
  • android
  • ios