ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಆರೋಪಿಗಳ ಜೈಲು ವರ್ಗಾವಣೆ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಲಾಗಿದೆ. ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 9 ರವರೆಗೆ ವಿಸ್ತರಿಸಲಾಗಿದೆ.

ಬೆಂಗಳೂರು (ಆ.23): ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಅವರ ಸಹ ಆರೋಪಿಗಳು ಸಲ್ಲಿಸಿದ್ದ ಜೈಲು ವರ್ಗಾವಣೆ ಅರ್ಜಿಯ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ಮುಂದೂಡಿದೆ. ಜತೆಗೆ, ಪವಿತ್ರಾ ಗೌಡ ಪರ ವಕೀಲರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಲಾಗಿದೆ. ಈ ನಡುವೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳಿಗೆ ನ್ಯಾಯಾಂಗ ಬಂಧನ ಅವಧಿಯನ್ನು ಸೆಪ್ಟೆಂಬರ್ 9ರ ವರೆಗೆ ವಿಸ್ತರಿಸಲಾಗಿದೆ.

ಜೈಲು ವರ್ಗಾವಣೆ ಅರ್ಜಿ ವಿಚಾರಣೆ ಮುಂದೂಡಿಕೆ: ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆ ಜೈಲಿಗೆ ವರ್ಗಾಯಿಸುವಂತೆ ದರ್ಶನ್ ಹಾಗೂ ನಾಗರಾಜ್, ಲಕ್ಷ್ಮಣ್, ಪ್ರದೂಷ್, ಜಗದೀಶ್ ಸೇರಿದಂತೆ ಐವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು (ಆ.23) 64ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆಯಿತು. ಈ ವೇಳೆ, ಜೈಲು ವರ್ಗಾವಣೆಗೆ ಪ್ರದೋಷ್ ಅವರ ವಕೀಲರು ಆಕ್ಷೇಪಣೆ ಸಲ್ಲಿಸಿದರು. ಇದರ ಬಗ್ಗೆ ಪ್ರತಿಕ್ರಿಯೆ ನೀಡಲು ದರ್ಶನ್, ಪವಿತ್ರಾ ಗೌಡ ಮತ್ತು ಇತರ ಆರೋಪಿಗಳ ವಕೀಲರು ನ್ಯಾಯಾಲಯದಲ್ಲಿ ಸಮಯ ಕೋರಿದರು. ಈ ಕಾರಣಕ್ಕೆ, ಜೈಲು ವರ್ಗಾವಣೆ ಅರ್ಜಿ ವಿಚಾರಣೆಯನ್ನು ಆಗಸ್ಟ್ 30ಕ್ಕೆ ಮುಂದೂಡಲಾಗಿದೆ.

ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್‌ಗೆ ಮುಂದೂಡಿಕೆ: ಇದೇ ವೇಳೆ, ಪವಿತ್ರಾ ಗೌಡ ಪರ ವಕೀಲರು ಸ್ಟ್ಯಾಚುಟರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಚಾರ್ಜ್‌ಶೀಟ್‌ ಅನ್ನು ಸಿಆರ್‌ಪಿಸಿ ಅಡಿಯಲ್ಲಿ ಸಲ್ಲಿಸಲಾಗಿದ್ದು, ಹೊಸ ಬಿಎನ್‌ಎಸ್‌ಎಸ್ ಕಾಯ್ದೆ ಅಡಿಯಲ್ಲಿ ಸಲ್ಲಿಸಿಲ್ಲ ಎಂದು ವಕೀಲ ಬಾಲನ್ ವಾದಿಸಿದರು. ಈ ವಾದಕ್ಕೆ ಪ್ರತಿಕ್ರಿಯೆ ನೀಡಲು ವಕೀಲರು ಸಮಯ ಕೋರಿದ್ದರಿಂದ ನ್ಯಾಯಾಲಯ ಈ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ.

ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 7 ಆರೋಪಿಗಳನ್ನು ಸೆಪ್ಟೆಂಬರ್ 9ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಅಲ್ಲಿಯವರೆಗೂ ಎಲ್ಲರೂ ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.

ವಕೀಲ ಬಾಲನ್ ಅವರ ಪ್ರಕಾರ, ಚಾರ್ಜ್‌ಶೀಟ್ ಅನ್ನು ಸೆಪ್ಟೆಂಬರ್ ತಿಂಗಳಲ್ಲಿ ಸಲ್ಲಿಸಲಾಗಿದೆ. ಆದರೆ, ಜುಲೈ 1, 2024ರ ನಂತರ ಭಾರತೀಯ ನ್ಯಾಯ ಸಂಹಿತೆ (BNSS) ಕಾಯ್ದೆ ಜಾರಿಗೆ ಬಂದಿರುವುದರಿಂದ, ಚಾರ್ಜ್‌ಶೀಟ್ ಅನ್ನು ಈ ಹೊಸ ಕಾಯ್ದೆಯ ಅಡಿಯಲ್ಲಿಯೇ ಸಲ್ಲಿಸಬೇಕಿತ್ತು. ಆದರೆ, ಪೊಲೀಸರು ಅದನ್ನು ಸಿಆರ್‌ಪಿಸಿ (CrPC) ಅಂದರೆ ಹಳೆಯ ಕಾಯ್ದೆಯ ಸೆಕ್ಷನ್ 173ರ ಅಡಿಯಲ್ಲಿ ಸಲ್ಲಿಸಿದ್ದಾರೆ.

ಹೀಗಾಗಿ, ಕಾನೂನಿನ ಪ್ರಕಾರ ಚಾರ್ಜ್‌ಶೀಟ್‌ನಲ್ಲಿ ಲೋಪವಾಗಿದೆ. ತನಿಖಾಧಿಕಾರಿಗಳ ಈ ತಪ್ಪಿನ ಕಾರಣಕ್ಕೆ ಪವಿತ್ರಾ ಗೌಡಗೆ ಶಾಸನಬದ್ಧ ಜಾಮೀನು ನೀಡಬೇಕು ಎಂದು ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಪವಿತ್ರಾ ಗೌಡ ಇಡೀ ಕೇಸ್‌ಅನ್ನು ಸಿಆರ್‌ಪಿಸಿ ಅಡಿಯಲ್ಲಿ ದಾಖಲು ಮಾಡಲಾಗಿದೆ. ಆದರೆ, ಈಗ ಇರುವುದು ಬಿಎನ್‌ಎಸ್‌ಎಸ್‌ ಕಾಯ್ದೆ ಎಂದು ವಕೀಲರ ಮೂಲಕ ಹೇಳಿದ್ದಾರೆ. ಅದಕ್ಕೆ ಕಾರಣವೂ ಇದೆ. ಕಳೆದ ವರ್ಷದ ಜುಲೈನಿಂದ ಹೊಸ ಕ್ರಿಮಿನಲ್‌ ಕಾಯ್ದೆ ಜಾರಿಗೆ ಬಂದಿದೆ. ಆದರೆ, ರೇಣಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇವರೆಲ್ಲ ಬಂಧಿತರಾಗಿದ್ದು ಕಳೆದ ವರ್ಷದ ಜೂನ್‌ನಲ್ಲಿ. ಚಾರ್ಜ್‌ಶೀಟ್‌ಅನ್ನು ಸಿಆರ್‌ಪಿಎಸ್‌ ಅಡಿಯಲ್ಲಿ ಸಲ್ಲಿಕೆ ಮಾಡಲಾಗಿದೆ. ಇದನ್ನೇ ಇರಿಸಿಕೊಂಡು ಪವಿತ್ರಾ ಗೌಡ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರೂ, ಇದರಿಂದ ಯಾವುದೇ ವ್ಯತ್ಯಾಸವಾಗೋದಲ್ಲ ಅನ್ನೋದು ಗೊತ್ತಿರುವ ವಿಚಾರ. ಏಕೆಂದರೆ, ಇಡೀ ಕೇಸ್‌ನಲ್ಲಿ ಸ್ವತಃ ಸುಪ್ರೀಂ ಕೋರ್ಟ್‌ ಜಾಮೀನು ನಿರಾಕರಣೆ ಮಾಡಿರುವ ಕಾರಣ, ಕೋರ್ಟ್‌ನಲ್ಲಿ ಅವರ ಈ ವಾದ ನಿಲ್ಲೋದು ಕಷ್ಟ.