ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಬೈಗುಳಗಳಿಗೆ ಗುರಿಯಾದ ನಟಿ ರಮ್ಯಾ, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಈಗ ಅಶ್ಲೀಲ ಕಾಮೆಂಟ್‌ಗಳು ಕಡಿಮೆಯಾಗಿವೆ.
ಬೆಂಗಳೂರು (ಆ.18): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಸಂಬಂಧಿಸಿದಂತೆ ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ 'ಕಾನೂನಿನ ಮುಂದೆ ಎಲ್ಲರೂ ಸಮಾನರು' ಎಂದು ಪೋಸ್ಟ್ ಮಾಡಿ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕೆ, ದರ್ಶನ್ ಅಭಿಮಾನಿಗಳಿಂದ ತೀವ್ರ ಆಕ್ರೋಶ ಮತ್ತು ಅಶ್ಲೀಲ ಬೈಗುಳಕ್ಕೆ ಗುರಿಯಾಗಿದ್ದರು.
ಕೆಲವು ಅಭಿಮಾನಿಗಳು ರಮ್ಯಾರಿಗೆ ಅವಹೇಳನಕಾರಿ ಸಂದೇಶ, ಕಾಮೆಂಟ್‌ಗಳನ್ನ ಮಾಡಿದ್ದರು. ರಮ್ಯಾ ಇಷ್ಟಕ್ಕೆ ಸುಮ್ಮನಾಗುವ ನಟಿ ಅಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ ದರ್ಶನ್ ಅಭಿಮಾನಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದರು. ರಮ್ಯಾ ದೂರು ನೀಡುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿಗಳನ್ನ ಪತ್ತೆ ಹಚ್ಚಿ ಬಂಧಿಸಿ ಜೈಲಿಗಟ್ಟಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಬಂಧನದ ಬಳಿಕ ಇದೀಗ ರಮ್ಯಾರಿಗೆ ಅಶ್ಲೀಲ ಕಾಮೆಂಟ್‌ಗಳು ಗಣನೀಯವಾಗಿ ಕಡಿಮೆಯಾಗಿವೆ. ಈ ಬಗ್ಗೆ ಮಾತನಾಡಿರುವ ರಮ್ಯಾ, 'ಮೂವರು ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಈಗ ಅಶ್ಲೀಲ ಕಾಮೆಂಟ್‌ಗಳು ಮತ್ತು ಕೆಟ್ಟ ಸಂದೇಶಗಳು ಬರುವುದು ಕಡಿಮೆಯಾಗಿದೆ. ಆದರೆ, ಸ್ವಲ್ಪ ಕಾಮೆಂಟ್‌ಗಳು ಇನ್ನೂ ಬರುತ್ತಿವೆ, ಸಾರ್ವಜನಿಕ ಜೀವನದಲ್ಲಿ ಇದು ಸಾಮಾನ್ಯವೆಂದು ಸಹಿಸಿಕೊಳ್ಳುತ್ತೇನೆ. ಈ ರೀತಿಯ ಕಾಮೆಂಟ್‌ಗಳು ನನಗೆ ಮಾತ್ರವಲ್ಲ, ಸಾಕಷ್ಟು ಮಹಿಳೆಯರಿಗೂ ಬಂದಿತ್ತು. ಇತರ ಮಹಿಳೆಯರಿಗೂ ಆಗಬಾರದೆಂದು ದೂರು ನೀಡಿದ್ದೆ ಎಂದರು.
ದೂರಿನ ಬಳಿಕ ಬಹಳಷ್ಟು ಜನ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದ ನಟಿ ರಮ್ಯಾ. ಅಷ್ಟೇ ಅಲ್ಲ. ಪೊಲೀಸರ ಕಠಿಣ ಕ್ರಮದಿಂದ ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರ ವಿರುದ್ಧ ಅವಾಚ್ಯ ಕಾಮೆಂಟ್‌ಗಳ ಪ್ರಮಾಣವೂ ತಗ್ಗಿದೆ. ಮಹಿಳೆಯರಿಗೆ ಅಶ್ಲೀಲ ಕಾಮೆಂಟ್ ಮಾಡಲು ಸಹ ಇದೀಗ ಪುಂಡಪೋಕರಿಗಳು, ದರ್ಶನ್ ಅಭಿಮಾನಿಗಳು ಹೆದರುವಂತಾಗಿದೆ.
