*ಸರ್ಕಾರಿ ಆಸ್ಪತ್ರೆಯಲ್ಲಿ ಶೇ.90ರಷ್ಟುಹಾಸಿಗೆ ಖಾಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಆರೈಕೆಗೆ ಬೇಡಿಕೆ ಹೆಚ್ಚಳ*ಸರ್ಕಾರಿ ಆಸ್ಪತ್ರೆಗೆ 170 ಸೋಂಕಿತರು ದಾಖಲು, 1661 ಬೆಡ್‌ಗಳು ಖಾಲಿ*ಖಾಸಗಿಯಲ್ಲಿ 577 ಮಂದಿ ದಾಖಲು

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು (ಜ. 9): ರಾಜಧಾನಿಯಲ್ಲಿ ಕೊರೋನಾ ಸೋಂಕಿತರ (Covid 19) ಸಂಖ್ಯೆ ಹೆಚ್ಚಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ (Private Hospitals) ಚಿಕಿತ್ಸೆ, ಆರೈಕೆಗೆ ಬೇಡಿಕೆ ಹೆಚ್ಚಳವಾಗಿದೆ. ಸರ್ಕಾರಿ (Government) ಆಸ್ಪತ್ರೆಗಳಲ್ಲಿ ಶೇ.90ರಷ್ಟುಹಾಸಿಗೆಗಳು ಖಾಲಿದ್ದರೂ, ಸರ್ಕಾರಿ ಆಸ್ಪತ್ರೆಗಳಿಗಿಂತ ಮೂರು ಪಟ್ಟು ಅಧಿಕ ಮಂದಿ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ (BBMP) ಮತ್ತು ನಗರ ಆರೋಗ್ಯ ಇಲಾಖೆ ವತಿಯಿಂದ ಸೋಂಕಿತರ ಆರೈಕೆಗೆಂದು ಮೂರು ವೈದ್ಯಕೀಯ ಕಾಲೇಜು, 17 ಸರ್ಕಾರಿ ಆಸ್ಪತ್ರೆಗಳಲ್ಲಿ 1,836 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಈ ಪೈಕಿ ಕೇವಲ 170 ಹಾಸಿಗೆಗಳು ಭರ್ತಿಯಾಗಿದ್ದು, 1,661 ಹಾಸಿಗೆಗಳು ಖಾಲಿ ಇವೆ. ಆದರೂ, ನಗರದ ಖಾಸಗಿ ಆಸ್ಪತ್ರೆಗಳಲ್ಲಿ 577 ಸೋಂಕಿತರು ಚಿಕಿತ್ಸೆ ಆರೈಕೆಯಲ್ಲಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಹೋಲಿಸಿದರೆ ಮೂರುಪಟ್ಟು ಅಧಿಕ ಸೋಂಕಿತರು ಸ್ವಂತ ಖರ್ಚಿನಲ್ಲಿ ಖಾಸಗಿಯಲ್ಲಿ ದಾಖಲಾಗಿದ್ದಾರೆ.

ಪ್ರಮುಖವಾಗಿ ಹಳೇ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್‌ ಆಸ್ಪತ್ರೆ, ಅಪೋಲೋ, ಫೋರ್ಟಿಸ್‌, ಸಕ್ರಾ, ರೈಬೋ ಮಕ್ಕಳ ಆಸ್ಪತ್ರೆಗಳಲ್ಲಿ ಒಮಿಕ್ರೋನ್‌ ಸೇರಿದಂತೆ ಕೊರೋನಾ ಕೊರೋನಾ ಸೋಂಕಿತರ ಚಿಕಿತ್ಸೆಗೆ ಅನುಮತಿ ನೀಡಿದ್ದು, ಈ ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ಇನ್ನು ತೀವ್ರ ಭಯ ಹೊಂದಿರುವವರು, ವಿದೇಶಗಳಿಂದ ಬಂದವರು, ಸರ್ಕಾರಿ ವ್ಯವಸ್ಥೆಗಳ ಮೇಲಿನ ಅಪನಂಬಿಕೆ ಉಳ್ಳವರು ಮತ್ತು ಶ್ರೀಮಂತ ವರ್ಗವು ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದೆ ಎನ್ನುತ್ತಾರೆ ಆರೋಗ್ಯ ಅಧಿಕಾರಿಗಳು.

ಇದನ್ನೂ ಓದಿ:Corona Effect ಫೆಬ್ರವರಿಯಲ್ಲಿ ಶಾಲಾ-ಕಾಲೇಜು ಬಂದ್ ಆಗ್ತಾವ? ಗೊಂದಲಗಳಿಗೆ ಸಚಿವ ತೆರೆ

1 ವಾರದಲ್ಲಿ 500 ಮಂದಿ ದಾಖಲು:

ನಗರದಲ್ಲಿ ಸೋಂಕು ಪ್ರಕರಣಗಳು ಹೆಚ್ಚಳವಾದಂತೆ ಆಸ್ಪತ್ರೆ ದಾಖಲಾತಿಗಳು ಹೆಚ್ಚಳವಾಗುತ್ತಿವೆ. ದಿನದಿಂದ ದಿನಕ್ಕೆ ಸೋಂಕಿತರ ದಾಖಲಾತಿ ಶೇ.10-15ರಷ್ಟುಹೆಚ್ಚಳವಾಗುತ್ತಿವೆ. ಕಳೆದ ಒಂದು ವಾರದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ 500ಕ್ಕೂ ಹೆಚ್ಚು ಕೊರೋನಾ ಸೋಂಕಿರು ದಾಖಲಾಗಿದ್ದಾರೆ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂ ಅನೋಸಿಯೇಷನ್‌(ಫನಾ) ಅಧ್ಯಕ್ಷ ಡಾ.ಪ್ರಸನ್ನ ತಿಳಿಸಿದ್ದಾರೆ.

ಸರ್ಕಾರಿ ಕೋಟಾಗೆ ಸಿದ್ಧ:

‘ಈ ಹಿಂದಿನಂತೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೊರೋನಾ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟುಹಾಸಿಗೆಗಳನ್ನು ಕೊರೋನಾ ಸೋಂಕಿತರಿಗೆ ಮೀಸಲಿಡಲು ಸೂಚಿಸಲಾಗಿದೆ. 12-13 ಸಾವಿರ ಹಾಸಿಗೆಗಳು ಲಭ್ಯವಾಗಲಿವೆ. ಸರ್ಕಾರಿ ಆಸ್ಪತ್ರೆಗಳ ಹಾಸಿಗೆಗಳು ಭರ್ತಿಯಾದ ಬಳಿಕ ಖಾಸಗಿಯಲ್ಲಿ ಅನುಮತಿ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್‌ ತಿಳಿಸಿದ್ದಾರೆ.

ಟೆಲಿಮೆಡಿಸಿನ್‌ಗೆ ಹೆಚ್ಚಿದ ಬೇಡಿಕೆ

ರಾಜಧಾನಿಯಲ್ಲಿ 25,000ಕ್ಕೂ ಅಧಿಕ ಸಕ್ರಿಯ ಸೋಂಕಿತರಿದ್ದು, ಈ ಪೈಕಿ 750 ಮಂದಿ ಮಾತ್ರ ಶೇ.1ಕ್ಕಿಂತ ಕಡಿಮೆ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 24,000ಕ್ಕೂ ಅಧಿಕ ಮಂದಿ ಮನೆ ಆರೈಕೆಯಲ್ಲಿ (ಹೋಂ ಐಸೋಲೇಷನ್‌) ಇದ್ದಾರೆ. ಇಂತಹ ಸೋಂಕಿತರ ಪೈಕಿ ಸಾವಿರಾರು ಮಂದಿ ಸಮೀಪ ಖಾಸಗಿ ಆಸ್ಪತ್ರೆಗಳು ಅಥವಾ ದೊಡ್ಡ ಖಾಸಗಿ ಆಸ್ಪತ್ರೆಗಳ ಟೆಲಿಮೆಡಿಸನ್‌ (Tele Medicine) ಸೇವೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ:Coronavirus ಕೊರೋನಾ ನಿಯಂತ್ರಣಕ್ಕೆ ನೋಡಲ್‌ ಅಧಿಕಾರಿಗಳನ್ನ ನೇಮಿಸಿದ ರಾಜ್ಯ ಸರ್ಕಾರ

ಇದಕ್ಕಾಗಿ ಒಂದು ವಾರ ಅಥವಾ ಮೂರು ದಿನಕ್ಕೆ ಇಂತಿಷ್ಟುಶುಲ್ಕವನ್ನು ಪಾವತಿಸುತ್ತಿದ್ದಾರೆ. ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳು ಕೂಡಾ ಹೋಂ ಐಸೋಲೇಷನ್‌ ಇದ್ದವರಿಗಾಗಿಯೇ ಟೆಲಿಮೆಡಿಸಿನ್‌ ಪ್ಯಾಕೇಜ್‌ಗಳನ್ನು ಆರಂಭಿಸಿದ್ದಾರೆ. ಜತೆಗೆ ಡೇ ಕೇರ್‌ ಸೇವೆಯು ಇದ್ದು, ಅಗತ್ಯ ವಿದ್ದರೆ ಬಂದು ಚುಚ್ಚುಮದ್ದು, ಸಲೈನ್‌ ಆರೈಕೆ ನೀಡಲಾಗುತ್ತಿದೆ.‘ನಿತ್ಯ ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿ ಕರೆ ಮಾಡಿ ಕೊರೋನಾ ಸೋಂಕಿತರ ಆರೋಗ್ಯ ಮಾಹಿತಿ ಪಡೆಯುತ್ತಾರೆ. ಆರಂಭದ ದಿನ ಮತ್ತು ಕೊನೆಯ ದಿನ ಮನೆಗೆ ಖುದ್ದು ಭೇಟಿ ನೀಡಿ ತಪಾಸಣೆ ಮಾಡುತ್ತೇವೆ. ಅಗತ್ಯವಿದ್ದ ಆಸ್ಪತ್ರೆ ದಾಖಲಾಗಲು ಸೂಚಿಲಾಗುತ್ತದೆ. ಪ್ರತ್ಯೇಕ ಕೊರೋನಾ ಸೋಂಕಿತರ ಡೇ ಕೇರ್‌ ’ ಎಂದು ಖಾಸಗಿ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದರು.