Covid 19 in Bengaluru: ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಆರೈಕೆ ಕೇಂದ್ರ: ಗೌರವ್ ಗುಪ್ತಾ
*ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಆರೈಕೆ ಕೇಂದ್ರ
*ಈ ಹಿಂದೆ ತೆರೆದಿದ್ದ ಆರೈಕೆ ಕೇಂದ್ರಗಳನ್ನು ಸುಸ್ಥಿತಿಯಲ್ಲಿ ಇಡಿ
*ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೂಚನೆ
ಬೆಂಗಳೂರು (ಜ. 5): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು (Covid 19) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಒಂದೊಂದು ಕೋವಿಡ್ ಆರೈಕೆ ಕೇಂದ್ರ ತೆರೆಯಲು ಅಗತ್ಯ ಕ್ರಮಕೈಗೊಳ್ಳುವಂತೆ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ (Gaurav Gupta) ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಂಗಳವಾರ ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ನಂದಿನಿ ಬಡಾವಣೆಯಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಸಿಎಸ್‌ಆರ್ (CSR) ಅನುದಾನದಡಿ ಸ್ಥಾಪಿಸಿರುವ ಕೋವಿಡ್ ಆರೈಕೆ ಕೇಂದ್ರವನ್ನು (Covid Care Centre) ಅವರು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ನಗರದಲ್ಲಿ ಕೊರೋನಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿವೆ. ಹಾಗಾಗಿ ಎರಡನೇ ಅಲೆಯ ಸಂದರ್ಭದಲ್ಲಿ ತೆರೆಯಲಾಗಿದ್ದ ಕೋವಿಡ್ ಆರೈಕೆ ಕೇಂದ್ರಗಳನ್ನು ಸುಸ್ಥಿತಿಯಲ್ಲಿ ಇಡಬೇಕು ಎಂದು ತಿಳಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಆರೈಕೆ ಕೇಂದ್ರ!
ಪ್ರತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಒಂದು ಆರೈಕೆ ಕೇಂದ್ರವನ್ನು ಗುರುತಿಸಿ ಎಲ್ಲ ರೀತಿಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲ ಕೋವಿಡ್ ಆರೈಕೆ ಕೇಂದ್ರದ ಹೆಸರು ಮತ್ತು ವಿಳಾಸ, ಒಟ್ಟು ಹಾಸಿಗೆಗಳ ಸಂಖ್ಯೆ, ಆಕ್ಸಿಜನ್ ಹಾಸಿಗೆಗಳ ಸಂಖ್ಯೆ, ಲಭ್ಯವಿರುವ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಸಂಖ್ಯೆ ಸೇರಿದಂತೆ ಇನ್ನಿತರ ಮಾಹಿತಿಯನ್ನು ಕೂಡಲೇ ಸಂಗ್ರಹಿಸಿ ವರದಿ ಮಾಡುವಂತೆ ಮುಖ್ಯ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಸಜ್ಜಿತ ಕೋವಿಡ್ ಆರೈಕೆ ಕೇಂದ್ರ: ಸಚಿವ
ಇದೇ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಶಾಸಕ, ಸಚಿವ ಕೆ.ಗೋಪಾಲಯ್ಯ ಅವರು, ನಂದಿನಿ ಬಡಾವಣೆಯ ಕೆಂಪೇಗೌಡ ಸಮುದಾಯ ಭವನದಲ್ಲಿ ಈ ಹಿಂದೆಯೇ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದೀಗ ಸಿಎಸ್‌ಆರ್ ಅನುದಾನದಡಿ ಆಕ್ಸಿಜನ್ ಪ್ಲಾಂಟ್, ಕಟ್ಟಡದ ಮೊದಲನೇ ಮಹಡಿಯಲ್ಲಿ 18 ಆಕ್ಸಿಜನ್ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ವೈದ್ಯರು, ಸಿಬ್ಬಂದಿ ಸೇರಿದಂತೆ ಇನ್ನಿತರೆ ಅಗತ್ಯ ವ್ಯವಸ್ಥೆ ಮಾಡಿಕೊಂಡು ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರವನ್ನಾಗಿ ಮಾಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Weekend Curfew ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ, ಬೆಂಗ್ಳೂರಲ್ಲಿ 2 ವಾರ ಶಾಲಾ-ಕಾಲೇಜು ಬಂದ್
ಈ ಕೋವಿಡ್ ಆರೈಕೆ ಕೇಂದ್ರದಲ್ಲಿ ನೆಲಮಡಿಯಲ್ಲಿ 45 ಹಾಸಿಗೆ ವ್ಯವಸ್ಥೆ ಹಾಗೂ ಮೊದಲ ಮಹಡಿಯಲ್ಲಿ 18 ಆಕ್ಸಿಜನ್ ಹಾಸಿಗೆ ವ್ಯವಸ್ಥೆಯಿದೆ. ಸ್ಥಳದಲ್ಲೇ ಆಕ್ಸಿಜನ್ ಪ್ಲಾಂಟ್ ವ್ಯವಸ್ಥೆ ಕೂಡ ಮಾಡಲಾಗಿದೆ. ಸುಮಾರು 40 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳಿವೆ. ಇನ್ನು ಸೋಂಕಿತ ವ್ಯಕ್ತಿಗೆ ಅಗತ್ಯವಿರುವ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯಿದೆ. ಮೊದಲ ಮಹಡಿಗೆ ಲಿಫ್ಟ್ ಸೇರಿದಂತೆ ಇನ್ನಿತರೆ ಸಣ್ಣ-ಪುಟ್ಟಕೆಲಸಗಳು ಆಗಬೇಕಿದ್ದು, ಶೀಘ್ರವೇ ಕೆಲಸ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Covid 19 Threat: ಕೊರೋನಾ ಕೇಸ್ ಏರಿಕೆಯಾದರೆ 1-2 ವಾರದಲ್ಲಿ ಶಾಲೆ ಬಂದ್?
ಈ ಸಂದರ್ಭದಲ್ಲಿ ವಿಶೇಷ ಆಯುಕ್ತ(ಆರೋಗ್ಯ) ಡಾ ತ್ರಿಲೋಕ್ ಚಂದ್ರ, ವಲಯ ಜಂಟಿ ಆಯುಕ್ತ ಬಿ.ಶಿವಸ್ವಾಮಿ, ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ ಬಾಲಸುಂದರ್, ಡಾ ನಿರ್ಮಲಾ ಬುಗ್ಗಿ, ವಲಯ ಆರೋಗ್ಯಾಧಿಕಾರಿ ಡಾ ಮನೋರಂಜನ್ ಹೆಗ್ಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗೋವಾದಿಂದ ಬಂದವರ ಪರೀಕ್ಷೆ:
ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯದಿಂದ ಯಾವ ಮಾರ್ಗವಾಗಿ ಬಂದರೂ ಕಡ್ಡಾಯ ನಿಗಾಕ್ಕೆ ಸೂಚಿಸಲಾಗಿದೆ. ಆರ್‌ಟಿಪಿಸಿಆರ್ ಪರೀಕ್ಷೆ ವರದಿ ಇಲ್ಲದಿದ್ದರೆ ರಾಜ್ಯ ಪ್ರವೇಶಕ್ಕೆ ಬಿಡುವುದಿಲ್ಲ. ಹೊಸ ವರ್ಷವನ್ನು ಗೋವಾದಲ್ಲಿ ಆಚರಿಸಿ ಬಂದವರಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಹೀಗಾಗಿ, ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಗೋವಾಕ್ಕೆ ತೆರಳಿ ಹೊಸ ವರ್ಷ ಆಚರಿಸಿ ಬಂದವರನ್ನು ಪತ್ತೆ ಮಾಡಿ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಡಾ. ಕೆ ಸುಧಾಕರ್ ತಿಳಿಸಿದ್ದಾರೆ.