Weekend Curfew ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ, ಬೆಂಗ್ಳೂರಲ್ಲಿ 2 ವಾರ ಶಾಲಾ-ಕಾಲೇಜು ಬಂದ್
* ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ
* ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ
* ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ತೀರ್ಮಾನ
ಬೆಂಗಳೂರು, (ಜ.04): ರಾಜ್ಯದಲ್ಲಿ ಕೊರೋನಾ ವೈರಸ್(Coronavrius) ಪ್ರಮಾಣ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ. ಅಲ್ಲದೇ ಬೆಂಗಳೂರಲ್ಲಿ ಮಾತ್ರ ಶಾಲೆಗಳನ್ನ ಎರಡು ವಾರ ಬಂದ್ ಮಾಡಲು ಸರ್ಕಾರ ತೀರ್ಮಾನಿಸಿದೆ.
ಇಂದು(ಮಂಗಳವಾರ) ತಜ್ಞರ ಜೊತೆಗಿನ ಸಭೆ ಬಳಿಕ ಸಚಿವರಾದ ಅಶೋಕ್, ಸುಧಾಕರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇದೇ ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಗ್ಗೆ 5ರ ವರೆಗೆ ವೀಕೆಂಡ್ ಕರ್ಫ್ಯೂ (weekend Curfew) ಇರಲಿದೆ ಎಂದು ಸ್ಪಷ್ಟಪಡಿಸಿದರು.
Corona Update ಕರ್ನಾಟಕದಲ್ಲಿ ಕೊರೋನಾ ಸ್ಫೋಟ, 24ಗಂಟೆಗಳಲ್ಲಿ ದ್ವಿಗುಣ
ಕರ್ನಾಟಕದಾದ್ಯಂತ ಎರಡು ವಾರ ವೀಕೆಂಡ್ ಜಾರಿಯಲ್ಲಿರಲಿದೆ. ಇನ್ನು ಬೆಂಗಳೂರಲ್ಲಿ ಮಾತ್ರ ಎರಡು ವಾರ ಶಾಲೆ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಮುಂದಿನ ಎರಡು ವಾರಗಳು (ಜನವರಿ 6ರಿಂದ) 10 ಮತ್ತು 12ನೇ ತರಗತಿ ಹೊರತು ಪಡಿಸಿ ಉಳಿದ ಎಲ್ಲ ತರಗತಿಗಳನ್ನೂ ಬಂದ್ ಮಾಡಿ ಆನ್‌ಲೈನ್ ಮೂಲಕ ನಡೆಸಲು ನಿರ್ಧರಿಸಲಾಗಿದೆ.
ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದೆಲ್ಲ ಕಡೆ ಆಫ್ಲೈನ್ ತರಗತಿ ನಿಲ್ಲುತ್ತದೆ. ಶಾಲಾ ಕಾಲೇಜುಗಳು ಆನ್‌ಲೈನ್ ವಿಧಾನದಲ್ಲಿ ನಡೆಯುತ್ತದೆ. 6ನೇ ತಾರೀಖಿನಿಂದ ಜಾರಿಯಾಗುವಂತೆ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ವೀಕೆಂಟ್ ಕರ್ಫ್ಯೂ ಇರುತ್ತದೆ. ಆಹಾರ ವಸ್ತು, ಹೊಟೆಲ್ಗಳಲ್ಲಿ ಪಾರ್ಸೆಲ್, ಅತ್ಯಗತ್ಯ ಸೇವೆಗಳು ಮಾತ್ರ ಇರುತ್ತವೆ ಎಂದು ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಂತರ ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್ ವಿವರಿಸಿದರು.
* ಸರ್ಕಾರಿ ಕಚೇರಿಗಳು ಮಾಲ್ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು.
* ಚಿತ್ರಮಂದಿರ, ಮಾಲ್, ಬಾರ್, ಪಬ್ಗಳ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ ಪ್ರವೇಶ ಇರುತ್ತದೆ. ಇಲ್ಲಿಗೆ ಭೇಟಿ ನೀಡುವವರಿಗೆ ಲಸಿಕೆ ಕಡ್ಡಾಯ ಆಗಿರಲಿದೆ.
* ದೇವಸ್ಥಾನಕ್ಕೆ 50 ಜನಕ್ಕೆ ಮಾತ್ರ ಅವಕಾಶ
* ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಡಬಲ್ ಡೋಸ್ ಕಡ್ಡಾಯ ಆಗಿರಲಿದೆ.
* ಮದುವೆ ಹೊರಾಂಗಣದಲ್ಲಿದ್ದರೆ 200, ಒಳಾಂಗಣದಲ್ಲಿದ್ದರೆ 100 ಜನರಿಗೆ ಮಾತ್ರ ಅವಕಾಶ. ಅವರಿಗೂ 2 ಡೋಸ್ ಆಗಿರಬೇಕು.
* ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಆರ್ಟಿಪಿಸಿಆರ್ ಕಡ್ಡಾಯ.
* ಯಾವುದೇ ರ‍್ಯಾಲಿ, ಸಭೆ, ಸಮಾರಂಭಗಳು ನಡೆಯುವಂತಿಲ್ಲ.
* ಮೆಟ್ರೋ, ಬಸ್‍ಗಳಿಗೂ ನಿರ್ಬಂಧ ವಿಧಿಸಲಾಗಿದ್ದು, ಸೀಟು ಇರುವಷ್ಟೇ ಪ್ರಯಣಿಕರಿಗೆ ಅವಕಾಶ ನೀಡಲು ಮುಂದಾಗಿದ್ದು, ಬಿಎಂಟಿಸಿ, ಮೆಟ್ರೋಗಳಲ್ಲಿ ನಿಂತು ಪ್ರಯಾಣಿಸುವಂತಿಲ್ಲ.
ನಾವು ತೆಗೆದುಕೊಂಡ ತೀರ್ಮಾನಗಳನ್ನು ವೈಜ್ಞಾನಿವಾಗಿ ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಸರ್ಕಾರ, ಅಕ್ಕಪಕ್ಕದ ಮಹಾರಾಷ್ಟ್ರ, ಕೇರಳ, ತಮಿಳುನಾಡು ಗಳಲ್ಲಿ ತೆಗೆದುಕೊಂಡಿರುವ ತೀರ್ಮಾನಗಳನ್ನು ಪರಾಮರ್ಶಿಸಿದೆವು. ಒಮಿಕ್ರಾನ್ ಸೋಂಕು ಕೊವಿಡ್ಗಿಂತ 5 ಪಟ್ಟು ಜಾಸ್ತಿ ಆಗ್ತಿದೆ ಅಂತ ತಜ್ಞರು ವರದಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಪಸ್ತುತ 3048 ಮಂದಿಗೆ ಸೋಂಕು ಬಂದಿದೆ. 147 ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ನಮ್ಮ ರಾಜ್ಯದಲ್ಲಿ ಪಾಸಿಟಿವ್ ಪ್ರಕರಣ ಶೇ 3ಕ್ಕಿಂತ ಹೆಚ್ಚಾಗುತ್ತಿದೆ. 20ರಿಂದ 50 ವರ್ಷದವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ತಿದೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿಗೊಂದು, ಇತರೆ ಜಿಲ್ಲೆಗೊಂದು ನಿಯಮ ಜಾರಿಗೆ ನಿರ್ಧಾರ
ಕಳೆದ 3 ದಿನಗಳಿಂದ ಕೊವಿಡ್ ಎರಡು ಮೂರು ದಿನಗಳಲ್ಲಿ ಡಬಲ್ ಆಗ್ತಿದೆ. 3ರಿಂದ 6, 6ರಿಂದ 9 ಸಾವಿರ ಆಗ್ತಿದೆ. ಐದಾರು ದಿನಗಳಲ್ಲಿ 10 ಸಾವಿರ ದಾಟುವ ಅಪಾಯ ಕಂಡುಬರುತ್ತಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ 10 ಸಾವಿರ ದಾಟಿದೆ ಎಂದು ಹೇಳಿದ್ದಾರೆ. ಶೇ 80ರಿಂದ 85ರಷ್ಟು ಸೋಂಕು ಮೆಟ್ರೊ ನಗರಗಳಲ್ಲಿ ಕಾಣಿಸಿಕೊಳ್ತಿದೆ. ದೇಶದೆಲ್ಲೆಡೆ ಇದೇ ವಿದ್ಯಮಾನ ವರದಿಯಾಗಿದೆ. ಅಮೆರಿಕದಲ್ಲಿಯೂ ಪ್ರಸ್ತುತ 5 ಕೋಟಿಗೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಪರಿಸ್ಥಿತಿ ನಿರ್ವಹಿಸಲು ಬೆಂಗಳೂರಿಗೆ ಒಂದು, ರಾಜ್ಯದ ಇತರೆಡೆಗೆ ಮತ್ತೊಂದು ನಿಯಮಾವಳಿ ರೂಪಿಸಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ದಿಲ್ಲಿಯಲ್ಲೂ ವೀಕೆಂಡ್ ಕರ್ಫ್ಯೂ
ಕೋವಿಡ್ ಉಲ್ಬಣದ ನಡುವೆ ದೆಹಲಿಯಲ್ಲಿ ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗ್ಗೆ 5 ರವರೆಗೆ ವಾರಾಂತ್ಯದ ಕರ್ಫ್ಯೂ ವಿಧಿಸಲಾಗಿದೆ. ಕೋವಿಡ್ ಪ್ರಕರಣಗಳ ಹೆಚ್ಚಳದ ಮಧ್ಯೆ, ದೆಹಲಿ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ ಜನವಾರಿ 7ರಿಂದ ರಾತ್ರಿ 10 ರಿಂದ ಸೋಮವಾರ ಬೆಳಿಗ್ಗೆ 5 ರವರೆಗೆ ವಾರಾಂತ್ಯದ ಕರ್ಫ್ಯೂವನ್ನು ವಿಧಿಸಿದೆ.