ಬೆಂಗಳೂರು(ನ. 12]: 2014 ರ ಲೋಕಸಭೆ ಚುನಾವಣೆಗೂ ಮೊದಲು ಮೋದಿ, ಮೋದಿ, ಮೋದಿ ಎನ್ನುತ್ತಿದ್ದ ಯುವ ಸಮೂಹದ ಕನಸುಗಳು ಉದ್ಯೋಗ ಕಡಿತದ ಮೂಲಕ ನಾಶವಾಗಿವೆ. ಆರ್ಥಿಕವಾಗಿ ದೇಶ ಸಂಕಷ್ಟಕ್ಕೆ ಸಿಲುಕಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವನಾತ್ಮಕ ವಿಚಾರಗಳ ಮೂಲಕ ಜನರನ್ನು ವಂಚಿಸುವ ಕಾಯಕ ಮುಂದುವರೆಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರುದ್ಧಸೋಮವಾರ ಬೆಂಗಳೂರಿನ ಟೌನ್‌ಹಾಲ್‌ ಎದುರು ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ವಿರುದ್ಧ ಅವರು ಟೀಕಾಪ್ರಹಾರ ನಡೆಸಿದರು. ಚುನಾವಣೆಗೆ ಮೊದಲು ನರೇಂದ್ರ ಮೋದಿ ಪರ ಸಾಮಾಜಿಕ ಜಾಲತಾಣ ಭಾರಿ ಕೆಲಸ ಮಾಡಿತ್ತು. ಇದೀಗ ನರೇಂದ್ರ ಮೋದಿ 5 ವರ್ಷದ ಅಧಿಕಾರ ಪೂರೈಸಿ 6 ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದವರು 2 ಲಕ್ಷ ಉದ್ಯೋಗ ಸೃಷ್ಟಿಯನ್ನೂ ಮಾಡಿಲ್ಲ. 45 ವರ್ಷದಲ್ಲೇ ದಾಖಲೆಯ ನಿರುದ್ಯೋಗ ಸೃಷ್ಟಿಯಾಗಿದ್ದು, ನಿರುದ್ಯೋಗ ಪ್ರಮಾಣಶೇ. 8.1 ರಷ್ಟಾಗಿದೆ. ಅಲ್ಲದೆ, ಮನಮೋಹನ್‌ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ಶೇ.8 ಹಾಗೂ 9 ರಷ್ಟಿದ್ದ ಜಿಡಿಪಿ ಅಭಿವೃದ್ಧಿ ದರ ಈಗ ಶೇ.5ಕ್ಕೆ ಕುಸಿದಿದೆ. ನನ್ನ ಪ್ರಕಾರ ದೇಶದ ಜಿಡಿಪಿ  3.5 ಕ್ಕೆ ಕುಸಿದಿದೆ. ಹೀಗಿದ್ದರೂ ನರೇಂದ್ರ ಮೋದಿ ಭಾವನಾತ್ಮಕ ವಿಚಾರಗಳ ಮೂಲಕ ಜನರನ್ನು ವಂಚಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಕಪ್ಪುಹಣ ವಾಪಸು ತರುತ್ತೇವೆ. 15 ಲಕ್ಷ ರು. ಹಣವನ್ನು ಪ್ರತಿ ಖಾತೆಗೆ ಹಾಕುತ್ತೇವೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ನಿತ್ಯೋಪಯೋಗಿ ವಸ್ತುಗಳ ದರ ಕಡಿಮೆ ಮಾಡುತ್ತೇವೆ ಎಂದು ಹೇಳಿದ್ದರು. ಇದೀಗ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಧರ್ಮ-ಧರ್ಮ,ಜಾತಿ-ಜಾತಿಗಳನ್ನು ಒಡೆದು ಆಳುವ ಪ್ರಯತ್ನ ಮಾಡುತ್ತಿದ್ದಾರೆ. ರಾಷ್ಟ್ರದಲ್ಲಿ ಅತಿವೃಷ್ಟಿ, ಅನಾವೃಷ್ಟಿಉಂಟಾಗಿ ನರಳುತ್ತಿದ್ದರೆ ಅಮೆರಿಕಕ್ಕೆ ಹೋಗಿ ಎಲ್ಲವೂ ಚೆನ್ನಾಗಿದೆ ಎಂದು ಸುಳ್ಳು ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ಭವಿಷ್ಯ ಊಹಿಸಲೂ ಸಾಧ್ಯವಾಗುತ್ತಿಲ್ಲ:

ಇದೇ ರೀತಿ ಹೋದರೆ ದೇಶ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ದೇಶ ಸಂಕಷ್ಟದಲ್ಲಿರುವುದರಿಂದ ರಾಷ್ಟ್ರೀಯ ಪಕ್ಷ ಹಾಗೂ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವಾಗಿ ಕಾಂಗ್ರೆಸ್ ಹೋರಾಟಕ್ಕೆ ನಿಂತಿದೆ. ನೆಹರು ಅವರಿಂದ ಮನಮೋಹನ್‌ ಸಿಂಗ್‌ವರೆಗೆ ನಮ್ಮ ನಾಯಕರು ಮಾಡಿದ ಆರ್ಥಿಕ, ಸಾಮಾಜಿಕ ಬದಲಾವಣೆಯಿಂದ ದೇಶ ಸಾಕಷ್ಟು ಅಭಿವೃದ್ಧಿ ಹೊಂದಿತ್ತು.ಇದೀಗ ಯುವಕರು, ರೈತರು, ಮಹಿಳೆಯರು ಕಷ್ಟದಲ್ಲಿದ್ದಾರೆ. ಆದರೂ ಮೋದಿ ಸಮಸ್ಯೆಗಳ ಬಗ್ಗೆಮಾತನಾಡುತ್ತಿಲ್ಲ ಎಂದು ದೂರಿದರು. 

ಜನ ಕೇಂದ್ರದ ವಿರುದ್ಧ ತಿರುಗಿಬಿದ್ದಿದ್ದಾರೆ: 

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಕೇಂದ್ರ ಸರ್ಕಾರದ ನೀತಿಗಳು ಜನ ವಿರೋಧಿಯಾಗಿರುವುದರಿಂದ ಪ್ರತಿಯೊಬ್ಬರೂ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೀಗಾಗಿಯೇ ಜನಪರವಾಗಿ ನಾವು ಹೋರಾಟ ಕೈಗೆತ್ತಿಕೊಂಡಿದ್ದೇವೆ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ಆರ್‌ಸಿಇಪಿ ಸೇರಿದಂತೆ ಅನೇಕ ನೀತಿಗಳು ಜಾರಿಯಾದರೆ ಗ್ರಾಮೀಣ ಜನರು ತಮ್ಮ ಬದುಕನ್ನು ಕಳೆದುಕೊಳ್ಳಲಿದ್ದಾರೆ. ಹಾಗಾಗಿ, ನಾವು ಜಾಗೃತರಾಗಬೇಕು ಎಂದು ಕರೆ ನೀಡಿದರು. 

ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಮಾಜಿ ಸಚಿವರಾದ ರಾಮಲಿಂಗರೆಡ್ಡಿ, ಉಮಾಶ್ರೀ, ರಾಣಿ ಸತೀಶ್, ಮಾಜಿ ಸಂಸದರಾದವಿ.ಎಸ್. ಉಗ್ರಪ್ಪ, ಧ್ರುವನಾರಾಯಣ, ಕಾಂಗ್ರೆಸ್‌ ನಾಯಕರಾದ ವಿ.ಆರ್. ಸುದರ್ಶನ್ ಸೇರಿದಂತೆ ಹಲವರು ಭಾಗಿಯಾಗಿದ್ದರು. 

ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರಪತಿಗೆ ಪತ್ರ 

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ರಾಜ್ಯ ಕಾಂಗ್ರೆಸ್ ನಾಯಕರು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೀಡಿದ್ದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಕೂಡಲೇ ಮಧ್ಯಪ್ರವೇಶ ಮಾಡಿ ಕೇಂದ್ರವನ್ನು ನಿಯಂತ್ರಿಸಿ ದೇಶವನ್ನು ಮತ್ತೆ ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡಬೇಕು ಎಂದು ಕೋರಿದ್ದಾರೆ.