ಬೆಂಗಳೂರು [ಅ.15]:  ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ನಡೆದ ಪ್ರತಿಭಟನಾ ಅಧಿವೇಶನದಲ್ಲಿ ಮುಂದಿನ 8-10 ದಿನಗಳಲ್ಲಿ ಬೆಳೆ ಹಾನಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ ವಸತಿ ಸಚಿವ ವಿ. ಸೋಮಣ್ಣ ಅವರ ಭರವಸೆಯಿಂದಾಗಿ ಎಚ್‌.ಎಸ್‌. ದೊರೆಸ್ವಾಮಿ ಹಾಗೂ ವಿ.ಸೋಮಣ್ಣ ನಡುವೆ ವಾಗ್ವಾದ ನಡೆಯಿತು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ವಿ. ಸೋಮಣ್ಣ, ಮುಂದಿನ 8-10 ದಿನದಲ್ಲಿ ಬೆಳೆ ಹಾನಿಗಳಿಗೆ ಸೂಕ್ತ ಪರಿಹಾರ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ. ನಿಯಮಾವಳಿಗಳು ಏನೇ ಇದ್ದರೂ ಸರಿ. ರೈತರಿಗೆ ಸೂಕ್ತ ನ್ಯಾಯ ಒದಗಿಸುತ್ತೇವೆ ಎಂದರು.

ಮಧ್ಯಪ್ರವೇಶಿಸಿದ ಎಚ್‌.ಎಸ್‌. ದೊರೆಸ್ವಾಮಿ, ನ್ಯಾಯ ಒದಗಿಸಲು ಹಾಗೂ ಸೂಕ್ತ ಪರಿಹಾರ ಕೊಡಲು ಖಜಾನೆಯಲ್ಲಿ ಹಣ ಎಲ್ಲಿದೆ ಎಂದು ಪ್ರಶ್ನಿಸಿದರು. ಮಾತು ಮುಂದುವರೆಸಲು ಮುಂದಾದ ವಿ. ಸೋಮಣ್ಣ ಅವರನ್ನು ಮತ್ತೆ-ಮತ್ತೆ ಹಣ ಎಲ್ಲಿದೆ ಹೇಳಿ ಎಂದು ಏರುದನಿಯಲ್ಲಿ ಪ್ರಶ್ನೆ ಪುನರಾವರ್ತಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ಸಂತ್ರಸ್ತರ ವಸತಿ ನಿರ್ಮಾಣಕ್ಕೆ 1 ಸಾವಿರ ಕೋಟಿ ರು. ಹಣ ಬಿಡುಗಡೆ ಈಗಾಗಲೇ ಮಾಡಿದ್ದೇವೆ. ಖಜಾನೆಯಲ್ಲಿ ಹಣ ಇರುತ್ತದೆ. ನೀವು ಕೇಳಬೇಕಾದರೆ, ಅದನ್ನು ಹೇಗೆ ತಲುಪಿಸುತ್ತೀರಿ ಎಂದು ಕೇಳಿ ಅಷ್ಟೇ ಎಂದರು.

ನಿಮಗೆ ಅಷ್ಟುಅನುಮಾನ ಇದ್ದರೆ ನಾಳೆ ಬೆಳಗ್ಗೆಯೇ ವಿಧಾನಸೌಧದ ನನ್ನ ಕಚೇರಿ ಬನ್ನಿ. ಹಣ ಎಲ್ಲಿದೆ? ಹೇಗೆ ಬಿಡುಗಡೆ ಮಾಡುತ್ತೇವೆ ಎಂಬುದನ್ನು ಸಾಬೀತುಪಡಿಸುತ್ತೇನೆ ಎಂದು ಹೇಳಿದರು.