Bengaluru: ಕೋಳಿ ಕೂಗುತ್ತಿದೆ ನಿದ್ದೆ ಬರುತ್ತಿಲ್ಲ: ಪೊಲೀಸರಿಗೆ ವಿಚಿತ್ರ ದೂರು
ಬೆಂಗಳೂರಿನ ಜೆ.ಪಿ. ನಗರದ 8ನೇ ಹಂತದ ನಮ್ಮ ಮನೆಯ ಪಕ್ಕದಲ್ಲಿರುವ ಮನೆಯಲ್ಲಿ ಹಗಲು-ರಾತ್ರಿ ಕೋಳಿಗಳು ಕೂಗುತ್ತಿದ್ದು, ಅದರಿಂದ ನಿದ್ದೆ ಮಾಡಲಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಬೆಂಗಳೂರು (ಡಿ.18): ಪೊಲೀಸ್ ಠಾಣೆಗೆ ಯಾವ್ಯಾವ ರೀತಿಯ ದೂರುಗಳು ಬರುತ್ತವೆ ಗೊತ್ತೇ ಆಗುವುದಿಲ್ಲ. ಕೆಲವು ದೂರುಗಳನ್ನು ಕೇಳಿದ ಪೊಲೀಸರಿ ಆಶ್ವರ್ಯಕ್ಕೆ ಒಳಗಾಗಿದ್ದೂ ಇದೆ. ಅದೇ ರೀತಿ ಬೆಂಗಳೂರಿನ ಜೆ.ಪಿ. ನಗರದ 8ನೇ ಹಂತದ ಮನೆಯಲ್ಲಿ ಕೋಳಿಗಳು ಕೂಗುತ್ತಿದ್ದು, ಅದರಿಂದ ನಿದ್ದೆ ಮಾಡಲಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಈ ಪೊಲೀಸ್ ಪ್ರಕರಣ ದಾಖಲಿಸಿರುವುದನ್ನು ನೋಡಿದರೆ ಎಂಥವರಿಗೂ ನಗು ಬಾರದೇ ಇರದು. ಕೆಲವರು ಆಶ್ಚರ್ಯವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ, ಇಂತಹ ಪ್ರಕರಣವನ್ನು ದಾಖಲಿಸುವಾಗ ಸುತ್ತಲಿನ ನಿವಾಸಿಗಳು ಹಾಗೂ ದೂರುದಾರರು ಎಷ್ಟು ಸಮಸ್ಯೆ ಅನುಭವಿಸಿದ್ದಾರೆ ಎನ್ನುವುದನ್ನೂ ನಾವು ನೋಡಬೇಕಾಗುತ್ತದೆ. ಅದೇ ಬೆಂಗಳೂರಿನ ಜೆ.ಪಿ. ನಗರದ 8ನೇ ಹಂತದ ಮನೆಯ ಮಹಡಿಯಲ್ಲಿ ಶೆಡ್ ಮಾಡಿಕೊಂಡು ಕೋಳಿ ಮತ್ತು ಬಾತುಕೋಳಿಗಳನ್ನು ಸಾಕಣೆ ಮಾಡಲಾಗುತ್ತಿದೆ.
ಕೋಳಿ ಎಂದು ಹೊಟೇಲ್‌ಗಳಿಗೆ ಪಾರಿವಾಳಗಳ ಮಾಂಸ ಪೂರೈಕೆ
ಪ್ರತಿನಿತ್ಯ ಹಗಲು- ರಾತ್ರಿಯೆನ್ನದೇ ಕೋಳಿಗಳು ಕೂಗುತ್ತಿದ್ದು, ಸುತ್ತಲಿನ ನಿವಾಸಿಗಳಿಗೆ ನಿದ್ದೆ ಇಲ್ಲದಂತಾಗಿದೆ. ಕೂಡಲೇ ಕೋಳಿ ಸಾಕಣೆ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ nemo ಎಂಬ ಖಾತೆಯಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಜೊತೆಗೆ ಟ್ವೀಟ್ ಅನ್ನು ಡಿಸಿಪಿ ದಕ್ಷಿಣ ವಿಭಾಗ ಮತ್ತು ತಲಘಟ್ಟಪುರ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
2 ವರ್ಷದ ಮಗ ಬೇಗ ಏಳುತ್ತಿದ್ದಾನೆ: ಇನ್ನು ನಮ್ಮ ಮನೆಯಲ್ಲಿ 2 ವರ್ಷದ ಚಿಕ್ಕ ಮಗುವಿದೆ. ನಾವು ರಾತ್ರಿ ಮನೆಯಲ್ಲಿ ಮಲಗುವುದು ತಡವಾಗುತ್ತದೆ. ಬೆಳಗ್ಗೆ ತಡವಾಗಿ ಏಳುತ್ತೇವೆ. ಆದರೆ, ಬೆಳ್ಳಂಬೆಳಗ್ಗೆ 4 ಗಂಟೆಗೆ ಕೋಳಿಗಳು ಕೂಗುವುದರಿಂದ ಈ ಶಬ್ದಕ್ಕೆ ಮನೆಯಲ್ಲಿರುವ 2 ವರ್ಷದ ಮಗು ಬೇಗನೇ ಎದ್ದೇಳುತ್ತದೆ. ಇನ್ನು ಮಗುವನ್ನು ಮಲಗಿಸಲು ಹರಸಾಹಸಪಡಬೇಕಾಗುತ್ತದೆ. ನಮಗೂ ನಿದ್ದೆ ಇಲ್ಲದೇ ಬಳಲುವಂತಾಗಿದೆ. ಬೆಳಗ್ಗೆ ಮಾತ್ರವಲ್ಲದೆ ಮಧ್ಯಾಹ್ನ ಮತ್ತು ಸಂಜೆ ವೇಳೆಯೂ ಕೋಳಿಗಳು ಕೂಗುತ್ತಿವೆ. ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಇದನ್ನೂ ಓದಿ: 'ನಿದ್ದೆ ಬರ್ತಿಲ್ಲಾ ಸಾರ್' ಅಂತಾ 112ಕ್ಕೆ ಕರೆ ಮಾಡಿದ್ದ ಮುಬಾ'ರಾಕ್'; ಸಮಸ್ಯೆ ಕೇಳಿ ಪೊಲೀಸರೇ 'ಶಾಕ್'!
ವಸತಿ ಪ್ರದೇಶದಲ್ಲಿ ಮಿನಿ ಕೋಳಿ ಫಾರ್ಮ್: ಇನ್ನು ಮನೆಯ ಮೇಲೆ ಕೋಳಿಗಳನ್ನು ಸಾಕಣೆ ಮಾಡಲೆಂದೇ ಶೆಡ್ ನಿರ್ಮಿಸಿಕೊಂಡಂತಿದೆ. ಬೆಂಗಳೂರಿನ ಜನವಸತಿ ಪ್ರದೇಶಗಳಲ್ಲಿ ಇಂತಹ ಫಾರ್ಮ್‌ಗಳನ್ನು ನಿರ್ಮಾಣ ಮಾಡಲು ಅನುಮತಿ ಇದೆಯೇ ಎಂದು ಕೆಲವರು ಟ್ವಿಟರ್‌ಗೆ ಕಮೆಂಟ್ ಮೂಲಕ ಪ್ರತಿಕ್ರಿಯೆ ಮಾಡಿದ್ದಾರೆ. ನಾಯಿಗಳು ಹಾಗೂ ಪಕ್ಷಿಗಳನ್ನು ಮಾರಾಟ ಮಾಡಲು ಮಳಿಗೆ ತೆರೆಯಲು ಕೂಡ ಬಿಬಿಎಂಪಿ ವತಿಯಿಂದ ಮತ್ತು ಪಶು ಸಂಗೋಪನಾ ಇಲಾಖೆಯಿಂದ ಅನುಮತಿ ಪಡೆಯಬೇಕು. ಆದರೆ, ಯಾವುದೇ ಅನುಮತಿ ಇಲ್ಲದೇ ಕೋಳಿ ಸಾಕಣೆ ಮಾಡುವುದು ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು: ಬೆಂಗಳೂರು ನಗರ ಪೊಲೀಸರು ಕೂಡ ಈ ದೂರನ್ನು ಗಂಭೀರವಾಗಿಯೇ ಪರಿಗಣಿಸಿದ್ದು, ಡಿಸಿಪಿ ದಕ್ಷಿಣ ವಿಭಾಗ ಮತ್ತು ತಲಘಟ್ಟಪುರ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈಗಾಗಲೇ ನಾಯಿಗಳು ಬೊಗಳುತ್ತಿವೆ ನಿದ್ದೆ ಬರುತ್ತಿಲ್ಲ ಎನ್ನುವ ದೂರುಗಳನ್ನು ನೋಡಿದ್ದ ಪೊಲೀಸರು ಬಹುತೇಕ ಪ್ರಕರಣಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಈಗ ಕೋಳಿ ಕೂಗುವ ಸಮಸ್ಯೆಯನ್ನು ಪರಿಗಣಿಸಿದ್ದು, ಈ ಸಮಸ್ಯೆಗೆ ಪರಿಹಾರ ಒದಗಿಸಲಿದ್ದಾರೆಯೇ ಎಂಬುದನ್ನು ನಾವು ಕಾದುನೋಡಬೇಕಿದೆ. ಇನ್ನು ಒಂದು ಪ್ರಕರಣವನ್ನು ಪೊಲೀಸರು ಬಗೆಹರಿಸಿದಲ್ಲಿ ಇಂತಹ ನೂರಾರು ದೂರುಗಳು ಬರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.