ಬೆಂಗಳೂರಿನಲ್ಲಿ ಕಾವೇರಿ ನೀರು ಬರದಿದ್ದರೂ ಪೈಪ್‌ನಲ್ಲಿ ಬರುವ ಗಾಳಿಯ ಒತ್ತಡಕ್ಕೆ ವಾಟರ್ ಮೀಟರ್ ತಿರುಗಿ ದುಬಾರಿ ಬಿಲ್ ಬರುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಶ್ರೀನಗರದ ಮನೆಯೊಂದರಲ್ಲಿ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಜಲಮಂಡಳಿಯ ಎಡವಟ್ಟಿನ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಅ.04): ಬೆಂಗಳೂರಿನಲ್ಲಿ ಜನಸಾಮಾನ್ಯರಿಗೆ ಒಂದಲ್ಲ ಒಂದು ರೀತಿಯ ಸಂಕಷ್ಟಗಳು ತಪ್ಪಿದ್ದಲ್ಲ. ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯ ಎಡವಟ್ಟು ಗ್ರಾಹಕರನ್ನು ಬೆಚ್ಚಿಬೀಳಿಸಿದೆ. ಕಾವೇರಿ ನೀರಿನ ಪೈಪ್‌ನಲ್ಲಿ ಹನಿ ನೀರೂ ಬರದಿದ್ದರೂ, ಕೇವಲ ಪೈಪ್‌ನಲ್ಲಿ ಬರುವ ಗಾಳಿಯ ಒತ್ತಡಕ್ಕೇ ಮೀಟರ್ ಗಿರಗಿರನೆ ತಿರುಗಿ ದುಪ್ಪಟ್ಟು ಬಿಲ್ ಬರುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಶ್ರೀನಗರದ ಮುನ್ನೇಶ್ವರ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು, ಮನೆ ಮಾಲೀಕರೊಬ್ಬರು ಜಲಮಂಡಳಿಯ ಈ ಕರ್ಮಕಾಂಡವನ್ನು ವಿಡಿಯೋ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.

ಬಿಲ್ ದುಪ್ಪಟ್ಟಾಗಿದ್ದೇಗೆ? ಅಸಲಿ ಸತ್ಯ ಪತ್ತೆ:

ಸಂಬಂಧಪಟ್ಟ ಮನೆಯ ಮಾಲೀಕರಿಗೆ ಕಳೆದ ಎರಡ್ಮೂರು ತಿಂಗಳಿನಿಂದ ನಿರೀಕ್ಷೆಗೂ ಮೀರಿ ದುಬಾರಿ ನೀರಿನ ಬಿಲ್ ಬರುತ್ತಿತ್ತು. ಈ ಹಿಂದೆ ಪ್ರತಿ ತಿಂಗಳು ₹300 ರಿಂದ ₹400 ಬರುತ್ತಿದ್ದ ಬಿಲ್, ಏಕಾಏಕಿ ₹800 ರಿಂದ ₹1,000ಕ್ಕೆ ಏರಿಕೆಯಾಗಿತ್ತು. ಇತ್ತೀಚೆಗಷ್ಟೇ ಜಲಮಂಡಳಿ ಸಿಬ್ಬಂದಿ ಹೊಸ ಮೀಟರ್ ಅಳವಡಿಸಿದ್ದರು. ಬಿಲ್ ದಿಢೀರ್ ಏರಿಕೆಯಾಗಿದ್ದಕ್ಕೆ ಅನುಮಾನಗೊಂಡ ಮನೆ ಮಾಲೀಕರು, ನೀರು ಬಿಡುವ ಸಮಯದಲ್ಲಿ ಮೀಟರ್ ಬಳಿ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಆಗ ಕಣ್ಣಿಗೆ ಬಿದ್ದ ದೃಶ್ಯ ಕಂಡು ಅವರು ದಂಗಾಗಿದ್ದಾರೆ. ನಲ್ಲಿಯಲ್ಲಿ ಕಾವೇರಿ ನೀರು ಹನಿಯೂ ಬರುತ್ತಿರಲಿಲ್ಲ, ಬದಲಾಗಿ ಪೈಪ್‌ಲೈನ್‌ನಲ್ಲಿ ಬರೀ ಗಾಳಿ ಶಬ್ದದೊಂದಿಗೆ ನುಗ್ಗುತ್ತಿತ್ತು. ಆಶ್ಚರ್ಯವೆಂದರೆ, ನೀರು ಬರದಿದ್ದರೂ ಈ ಗಾಳಿಯ ರಭಸಕ್ಕೆ ಹೊಸ ಮೀಟರ್ ಅತಿ ವೇಗವಾಗಿ ಓಡುತ್ತಿತ್ತು!

View post on Instagram
 

ಸಾರ್ವಜನಿಕರ ತೀವ್ರ ಆಕ್ರೋಶ:

'ನೀರಿನ ಬದಲಿಗೆ ಬರೀ ಗಾಳಿ ಕೊಟ್ಟು ಜಲಮಂಡಳಿ ಜನರಿಂದ ಹಣ ವಸೂಲಿ ಮಾಡುತ್ತಿದೆ. ಪೈಪ್‌ನಲ್ಲಿ ನೀರಿಲ್ಲದಿದ್ದರೂ ಮೀಟರ್‌ನಲ್ಲಿ ಯುನಿಟ್‌ಗಳು ಏರುತ್ತಿರುವುದರಿಂದ ಸಾರ್ವಜನಿಕರು ವಿನಾಕಾರಣ ಸಾವಿರಾರು ರೂಪಾಯಿ ಬಿಲ್ ಕಟ್ಟುವಂತಾಗಿದೆ. ಜಲಮಂಡಳಿ ಇಂತಹ ತಾಂತ್ರಿಕ ಲೋಪಗಳನ್ನು ತಕ್ಷಣ ಸರಿಪಡಿಸಬೇಕು ಹಾಗೂ ಏರ್ ವಾಲ್ವ್‌ಗಳನ್ನು (Air Release Valves) ಅಳವಡಿಸಬೇಕು' ಎಂದು ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.