ಬೆಂಗಳೂರು ಜಲಮಂಡಳಿಯು ಕಾವೇರಿ 5ನೇ ಹಂತದ ಕೊಳವೆ ಮಾರ್ಗದ ತುರ್ತು ದುರಸ್ತಿಗಾಗಿ ಜುಲೈ 31, 2026 ರಂದು 15 ಗಂಟೆಗಳ ಕಾಲ ನೀರು ಪೂರೈಕೆ ಸ್ಥಗಿತಗೊಳಿಸಲಿದೆ. ನಗರದ ಉತ್ತರ, ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಭಾಗದ ಹಲವು ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ನೀರನ್ನು ಶೇಖರಿಸಿಟ್ಟುಕೊಳ್ಳಲು ಸೂಚಿಸಲಾಗಿದೆ.
ಬೆಂಗಳೂರು (ಜು.28): ಬೆಂಗಳೂರಿನ ನಿವಾಸಿಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅತ್ಯಂತ ಪ್ರಮುಖ ಮುನ್ನೆಚ್ಚರಿಕೆಯ ಸೂಚನೆಯೊಂದನ್ನು ನೀಡಿದೆ. ಕಾವೇರಿ ನೀರು ಸರಬರಾಜು ಯೋಜನೆ 5ನೇ ಹಂತದ (Cauvery Water Supply Scheme Stage 5) ಪ್ರಮುಖ ಕೊಳವೆ ಮಾರ್ಗದಲ್ಲಿ ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ, ದಿನಾಂಕ: 31-07-2026 (ಶುಕ್ರವಾರ) ಬೆಳಿಗ್ಗೆ 06-00 ಗಂಟೆಯಿಂದ ರಾತ್ರಿ 09-00 ಗಂಟೆಯವರೆಗೆ ಒಟ್ಟು 15 ಗಂಟೆಗಳ ಕಾಲ ನಗರದ ಹಲವು ಪ್ರಮುಖ ಭಾಗಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ (Water Supply) ವ್ಯತ್ಯಯ ಉಂಟಾಗಲಿದೆ.
ನೀರು ಪೂರೈಕೆ ಬಂದ್‌ಗೆ ಕಾರಣವೇನು?
ಬಿಡಬ್ಲ್ಯೂಎಸ್‌ಎಸ್‌ಬಿ ನೀಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಕಾವೇರಿ 5ನೇ ಹಂತದ 3000 ಮಿ.ಮೀ. ವ್ಯಾಸದ ಬೃಹತ್ ಕೊಳವೆ ಮಾರ್ಗದಲ್ಲಿನ ಸ್ಕೌರ್ ವಾಲ್ವ್ (Scour Valve) ಸೋರಿಕೆಯಾಗುತ್ತಿದ್ದು, ಇದನ್ನು ತಡೆಗಟ್ಟುವ ಸಲುವಾಗಿ ತುರ್ತು ನಿರ್ವಹಣಾ ಕಾಮಗಾರಿಯನ್ನು (Emergency Maintenance Work) ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲರೇಚಕ ಯಂತ್ರಗಾರಗಳ (Pumping Stations) ಕಾರ್ಯಾಚರಣೆಯನ್ನು 15 ಗಂಟೆಗಳ ಕಾಲ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ.
ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಪ್ರದೇಶಗಳ ಸಂಪೂರ್ಣ ಪಟ್ಟಿ:
ಜಲಮಂಡಳಿಯ ಮಾಹಿತಿ ಪ್ರಕಾರ, ಕಾವೇರಿ 5ನೇ ಹಂತದ ವ್ಯಾಪ್ತಿಗೆ ಒಳಪಡುವ ಈ ಕೆಳಗಿನ ಎಲ್ಲಾ ನಗರ ಹಾಗೂ ಉಪನಗರ ಪ್ರದೇಶಗಳಲ್ಲಿ ಜು.31ರ ಶುಕ್ರವಾರದಂದು ಕಾವೇರಿ ನೀರು ಸರಬರಾಜು ಇರುವುದಿಲ್ಲ.
ಉತ್ತರ ಹಾಗೂ ಈಶಾನ್ಯ ಬೆಂಗಳೂರು ಭಾಗಗಳು:
ಅನಂತಪುರ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ, ಹಾರೋಹಳ್ಳಿ, ಕೆಂಚನಹಳ್ಳಿ, ಗೋವಿಂದಪುರ, ವಾಸುದೇವಪುರ, ಮಂಚೇನಹಳ್ಳಿ, ಕಟ್ಟಿಗೇನಹಳ್ಳಿ, ಶ್ರೀನಿವಾಸಪುರ, ಬೆಳ್ಳಳ್ಳಿ, ತಿರುಮೆನಹಳ್ಳಿ, ಚೊಕ್ಕನಹಳ್ಳಿ, ದಾಸರಹಳ್ಳಿ, ರಾಚೇನಹಳ್ಳಿ, ಥಣೀಸಂದ್ರ, ಚಳ್ಳೆಕೇರೆ, ಹೊರಮಾವು ಆಗರ, ಅಮಾನಿ, ಬೈರತಿಖಾನೆ, ಗೆದ್ದಲಹಳ್ಳಿ, ಕೊತ್ತನೂರು ನಾರಾಯಣಪುರ, ಕೊತ್ತನೂರು, ಎನ್ ನಾಗೇನಹಳ್ಳಿ, ಕೈಲಾಸನ ಹಳ್ಳಿ, ಬೈರತಿ, ಬಿಳಿಶಿನಹಳ್ಳಿ, ಕಲ್ಕರೆ, ಹೊರಮಾವು, ಕೆ. ಚೆನ್ನಸಂದ್ರ, ವಾರಣಾಸಿ.
ಪೂರ್ವ ಹಾಗೂ ಐಟಿ ಕಾರಿಡಾರ್ (IT Corridor) ಭಾಗಗಳು:
ಬಳಗೆರೆ, ಬೆಳ್ಳಂದೂರು ಅಮಾನಿಕೆರೆ, ಬೆಳತ್ತೂರು, ಬೆನ್ನಸಂದ್ರ, ದೇವರಬೀಸನಹಳ್ಳಿ, ಗುಂಜೂರು, ಅಗದೂರು, ಕಾಡಬೀಸನಹಳ್ಳಿ, ಕಾಯಮ್ಮನ ಅಗ್ರಹಾರ, ಕಾಡೋಗೋಡಿ ಪ್ಲಾಂಟೇಶನ್, ಕಾಣೇಕಂಡ್ಯ, ಕುಂಬೇನ ಅಗ್ರಹಾರ, ನಾಗೋಂಡಹಳ್ಳಿ, ಪಣತ್ತೂರು, ರಾಮಗೊಂಡನಹಳ್ಳಿ, ಸಿದ್ದಾಪುರ, ಸೋರಹುಣಸೆ, ತುಬರಹಳ್ಳಿ, ವರ್ತೂರು, ಅಂಬಲಿಪುರ, ಬೆಳ್ಳಂದೂರು, ಅರಳೂರು, ಜುನಸಂದ್ರ, ಕೈಕೊಂಡನಹಳ್ಳಿ, ಕಸವನಹಳ್ಳಿ, ಕೂಡಲು, ಪರಪ್ಪನ ಅಗ್ರಹಾರ, ಬೋಗನಹಳ್ಳಿ, ಚಿಕ್ಕಬೆಳ್ಳಂದೂರು, ದೊಡ್ಡಕನ್ನಹಳ್ಳಿ, ನಾಗನಾಥಪುರ.
ವಾಯುವ್ಯ ಹಾಗೂ ಪಶ್ಚಿಮ ಬೆಂಗಳೂರು ಭಾಗಗಳು:
ಅಬ್ಬಿಗೆರೆ, ಚಿಕ್ಕಸಂದ್ರ, ಶೆಟ್ಟಹಳ್ಳಿ, ಕರಿಹೋಬನಹಳ್ಳಿ, ಅಂಧರಹಳ್ಳಿ, ಮ್ಯಾಡರಹಳ್ಳಿ, ದೊಡ್ಡಬಿದರಕಲ್ಲು, ಲಿಂಗಧೀರನಹಳ್ಳಿ, ಹೆರೋಹಳ್ಳಿ, ಹೊಸಹಳ್ಳಿ, ಉಲ್ಲಾಳ ಸೋಣ್ಣೆನಹಳ್ಳಿ, ಗಿಡದಕೋನೆನಹಳ್ಳಿ.
ದಕ್ಷಿಣ ಹಾಗೂ ನೈಋತ್ಯ ಬೆಂಗಳೂರು ಭಾಗಗಳು:
ವಸಂತಪುರ, ಗಾಣಾಕಲ್ಲು, ಹೆಮ್ಮಿಗೆಪುರ, ಸೋಮಪುರ, ವಾರಸಂದ್ರ, ಮನವರ್ತಕಾವಲು, ಲಿಂಗದೀರನಹಳ್ಳಿ, ಹೊಸಹಳ್ಳಿ, ಅರೇನಹಳ್ಳಿ, ವಡ್ಡರಪಾಳ್ಯ, ಉತ್ತರಹಳ್ಳಿ, ಸುಬ್ರಮಣ್ಯಪುರ, ಗುಬ್ಬಲಾಳ, ತುರಹಳ್ಳಿ, ಆಲಹಳ್ಳಿ, ಅಂಜನಾಪುರ, ಬಸಪುರ, ಬಸವನಪುರ, ಬೇಗೂರು, ಚಂದ್ರಶೇಖರಪುರ, ದೊಡ್ಡಕಲ್ಲಸಂದ್ರ, ಗೊಲ್ಲಹಳ್ಳಿ, ಗೊಟ್ಟಿಗೆರೆ, ಕಾಳೇನಾ ಅಗ್ರಹಾರ, ಕಂಬತ್ತಹಳ್ಳಿ, ಕಮ್ಮನಹಳ್ಳಿ, ಪಿಳ್ಳಗಾನಹಳ್ಳಿ, ರಘುವನಹಳ್ಳಿ, ತಲಘಟ್ಟಪುರ, ತಿಪ್ಪಸಂದ್ರ, ವಾಜರಹಳ್ಳಿ, ಯಲೇನಹಳ್ಳಿ, ಭರತೇನ ಅಗ್ರಹಾರ, ಚಿಕ್ಕತೇಗೂರು, ದೊಡ್ಡತೆಗೂರು ಹಾಗೂ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳು.
ಸಾರ್ವಜನಿಕರಿಗೆ ಜಲಮಂಡಳಿ ನೀಡಿದ ಮುನ್ನೆಚ್ಚರಿಕೆ:
ಜುಲೈ 31ರಂದು ಶನಿವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ಕಾವೇರಿ ನೀರು ಸರಬರಾಜು ಲಭ್ಯವಿರುವುದಿಲ್ಲವಾದ್ದರಿಂದ, ಮೇಲೆ ಹೆಸರಿಸಲಾದ ಎಲ್ಲಾ ಪ್ರದೇಶಗಳ ಸಾರ್ವಜನಿಕರು ಹಾಗೂ ಗೃಹಬಳಕೆದಾರರು ಮುಂಜಾಗ್ರತಾ ಕ್ರಮವಾಗಿ ದಿನನಿತ್ಯದ ಬಳಕೆಗೆ ಅಗತ್ಯವಿರುವಷ್ಟು ನೀರನ್ನು ಗುರುವಾರವೇ ಶೇಖರಿಸಿಟ್ಟುಕೊಳ್ಳಬೇಕು. ಹಾಗೂ ಕಾವೇರಿ ನೀರನ್ನು ಮಿತವಾಗಿ ಬಳಸಿ ಜಲಮಂಡಳಿಯೊಂದಿಗೆ ಸಹಕರಿಸಬೇಕಾಗಿ BWSSB ಕೋರಿದೆ.


