ಬೆಂಗಳೂರು(ನ. 06): ನಗರದ ವಸತಿ ಪ್ರದೇಶಗಳಲ್ಲಿನ ಅಕ್ರಮ ವಾಣಿಜ್ಯ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುವವರ ವಿರುದ್ಧ ಸಾರ್ವಜನಿಕರು ಸಲ್ಲಿಸಿದ 120 ದೂರುಗಳನ್ನು ಮಂಗಳವಾರ ಬಿಬಿಎಂಪಿ ಆಯುಕ್ತರಿಗೆ ಹಸ್ತಾಂತರಿಸಿದ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರನ್ನು ರಾಜೀವ್‌ ಚಂದ್ರಶೇಖರ್‌ ಭೇಟಿ ಮಾಡಿದರು. ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಯಿಂದ ಉಂಟಾಗುವ ಸಮಸ್ಯೆ ಕುರಿತು ತಮಗೆ ನಗರದ ವಿವಿಧ ನಿವಾಸಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸಾರ್ವಜನಿಕರು ಸಲ್ಲಿಕೆ ಮಾಡಿದ್ದ 120 ದೂರುಗಳನ್ನು ಆಯುಕ್ತರಿಗೆ ಈ ವೇಳೆ ಹಸ್ತಾಂತರಿಸಿದ್ದಾರೆ.

'10ರೊಳಗೆ ಬೆಂಗಳೂರಿನ ಶೇ.90 ರಸ್ತೆಗಳು ಗುಂಡಿ ಮುಕ್ತ'...

ಅಲ್ಲದೇ ಸಾರ್ವಜನಿಕ ದನಿ ಆಡಳಿತ ವರ್ಗಕ್ಕೆ ತಲುಪಬೇಕು ಎಂಬುದು ತಮ್ಮ ಉದ್ದೇಶವಾಗಿದೆ. ಹಾಗಾಗಿ, ಸಲ್ಲಿಕೆಯಾಗಿರುವ ದೂರುಗಳ ಬಗ್ಗೆ ತ್ವರಿತವಾಗಿ ಕ್ರಮವಹಿಸುವಂತೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌, ದೂರುಗಳ ಬಗ್ಗೆ ಸೂಕ್ತ ತನಿಖೆ ಮಾಡಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಜತೆಗೆ ವಸತಿ ಪ್ರದೇಶದಲ್ಲಿ ಉದ್ದಿಮೆ ಪರವಾನಿಗೆ ನೀಡುವುದಕ್ಕೆ ಅವಕಾಶವಿಲ್ಲ. ಆದರೂ ನಗರದ ಹಲವು ವಸತಿ ಪ್ರದೇಶದಲ್ಲಿ ಹೋಟಲ್‌, ಔಷಧಿ ಅಂಗಡಿ, ತರಕಾರಿ ವ್ಯಾಪಾರ ನಡೆಯುತ್ತಿದೆ. ಇದರಿಂದ ಬಿಬಿಎಂಪಿಗೆ ಆದಾಯ ನಷ್ಟಉಂಟಾಗುತ್ತಿದೆ. ಅದನ್ನು ತಡೆಗಟ್ಟುವುದರ ಜತೆಗೆ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅತ್ಯವಶ್ಯಕವಾದ ಹಣ್ಣು, ಸಣ್ಣ ಹೋಟೆಲ್‌,ಆಸ್ಪತ್ರೆ, ಔಷಧಿ, ದಿನಸಿ ಅಂಗಡಿಗಳಿಗೆ ಮಾತ್ರ ವಸತಿ ಪ್ರದೇಶದಲ್ಲಿ ಪರವಾನಿಗೆ ನೀಡುವ ಸಂಬಂಧಿಸಿದಂತೆ ‘ವಲಯ ನಿಯಂತ್ರಣ ಕಾಯ್ದೆ’ಗೆ ತಿದ್ದುಪಡಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ವಸತಿ ಪ್ರದೇಶ ಜನರಿಗೆ ತೊಂದರೆ ಉಂಟು ಮಾಡುವ ಶಾಪಿಂಗ್‌ ಮಾಲ್‌, ರೆಸ್ಟೋರೆಂಟ್‌, ದೊಡ್ಡ ಕಾಂಪ್ಲೆಕ್ಸ್‌ ಸೇರಿದಂತೆ ಇನ್ನಿತರ ಉದ್ದಿಮೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ತಮಾಷೆಯೇ ಅಲ್ಲರೀ! ಕಛೇರಿ ಕೆಲಸಕ್ಕೂ ಹೆಲ್ಮೇಟ್

ವಸತಿ ಪ್ರದೇಶಗಳಲ್ಲಿ ಅವಶ್ಯಕತೆ ಇರುವ ಔಷಧಿ ಅಂಗಡಿ, ಹೋಟೆಲ್‌, ತರಕಾರಿ ಮಳಿಗೆಗಳು ಸೇರಿದಂತೆ ನಿವಾಸಿಗಳಿಗೆ ಅವಶ್ಯಕವಾಗಿರುವ ಮಳಿಗೆಗಳಿಗೆ ಉದ್ದಿಮೆ ಪರವಾನಗಿಯನ್ನು 5 ವರ್ಷಕ್ಕೊಮ್ಮೆ ನೀಡುವ ಚಿಂತನೆ ಮಾಡಲಾಗಿದೆ. ಬೈಲಾ ತಿದ್ದುಪಡಿ ಸಂಬಂಧಿಸಿದಂತೆ ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಾಧ್ಯವಾದಷ್ಟುತ್ವರಿತವಾಗಿ ತಿದ್ದುಪಡಿಯನ್ನು ಕೌನ್ಸಿಲ್‌ನಲ್ಲಿ ಮಂಡಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಹೇಳಿದ್ದಾರೆ.