ಬೆಂಗಳೂರು [ನ.07]:  ಮುಂದಿನ 100 ದಿನದಲ್ಲಿ ನಗರದ ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿ. ಕಸ ನಿರ್ವಹಣೆ ವಿಚಾರದಲ್ಲಿ 3 ತಿಂಗ ಳಲ್ಲಿ ಮಹತ್ವದ ಬದಲಾವಣೆ. 2021ರ ವೇಳೆಗೆ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಪೂರ್ಣ. 2022 ರ ಹೊತ್ತಿಗೆ ಐದು ಪ್ರತ್ಯೇಕ ಐಟಿ ಹಬ್‌ಗಳ ಸ್ಥಾಪನೆ. 2023ರೊಳಗೆ ಏರ್  ಪೋರ್ಟ್‌ಗೆ ಮೆಟ್ರೋ ರೈಲು ಮಾರ್ಗ ಪೂರ್ಣ. ಸಂಚಾರ ದಟ್ಟಣೆ ನಿಯಂತ್ರಿಸಿ, ಮಾಲಿನ್ಯ ಪ್ರಮಾಣ ವನ್ನು ಶೇ.50 ಇಳಿಸಲು ಕ್ರಮ. ಬಾಡಿಗೆ ಆಧಾರಲ್ಲಿ ಬಿಎಂಟಿಸಿಗೆ 6000 ಹೊಸ ಬಸ್‌ಗಳ ಸೇರ್ಪಡೆ.

ಪ್ರಯಾಣಿಕರನ್ನು ಸೆಳೆಯಲು ಬಿಎಂಟಿಸಿ ಬಸ್ ಪ್ರಯಾಣ ದರ ಇಳಿಕೆ. ದಟ್ಟಣೆಯುಳ್ಳ ಪ್ರಮುಖ 12 ರಸ್ತೆಗಳಲ್ಲಿ ಬಸ್ ಹಾಗೂ ಸೈಕಲ್‌ಗೆ ಪ್ರತ್ಯೇಕ ಪಥ... ಮುಖ್ಯಮಂತ್ರಿಯಾಗಿ ಮಂಗಳವಾರವಷ್ಟೇ 100 ದಿನಗಳನ್ನು ಪೂರೈಸಿರುವ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ರಾಜಧಾನಿ ಬೆಂಗಳೂರಿಗೆ ನೀಡಿರುವ ಸಾಲು ಸಾಲು ಬಂಪರ್ ಘೋಷಣೆಗಳು ಇವು. 

2018 ರ ವಿಧಾನಸಭೆ ಚುನಾವಣೆ ವೇಳೆ ಬಿಡುಗಡೆ  ಮಾಡಿದ್ದ ‘ನವ ಬೆಂಗಳೂರಿಗೆ ನಮ್ಮ ವಚನ’ ಪ್ರಣಾಳಿಕೆಯಲ್ಲಿನ ಕೆಲ ಪ್ರಮುಖ ಯೋಜನೆಗಳನ್ನೇ ಘೋಷಿಸಿರುವ ಯಡಿಯೂರಪ್ಪ, ರಾಜಧಾನಿಯ ಅಭಿವೃದ್ಧಿ, ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಂಡು, ಸಾಮೂಹಿಕ ಸಾರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂದಿನ ನೂರು ದಿನಗಳಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಘನ ತ್ಯಾಜ್ಯ ವಿಲೇವಾರಿಯಲ್ಲಿ ಶೇ.50 ರಷ್ಟು  ಹಣ ಅಕ್ರಮವಾಗಿ ಪೋಲಾಗುತ್ತಿದೆ. ಇದನ್ನು ತಡೆದು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುವುದು. ಸಾರ್ವಜನಿಕ ಸಾರಿಗೆಗೆ  ಪ್ರೋತ್ಸಾಹ ನೀಡಲು ‘ಬೆಂಗಳೂರು ಮೊಬಿಲಿಟಿ ಮ್ಯಾನೇಜ್‌ಮೆಂಟ್ ಅಥಾರಿಟಿ’ (ಬಿಎಂಎಂಎ- ಬೆಂಗಳೂರು ಸಂಚಾರ ನಿರ್ವಹಣೆ ಪ್ರಾಧಿಕಾರ) ಸ್ಥಾಪನೆ ಮಾಡಲಾಗುವುದು ಎಂದಿದ್ದಾರೆ. 

ಬುಧವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಗರ ಯೋಜನೆ ತಜ್ಞರು, ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬಿಎಂಆರ್‌ಸಿಎಲ್ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ಘೋಷಣೆಗಳನ್ನು ಮಾಡಿದರು. 12ಕಡೆ ಬಸ್, ಸೈಕಲ್ ಲೈನ್ ಮುಂದಿನ ಮೂರು ತಿಂಗಳಲ್ಲಿ ಬೆಂಗಳೂರಿನ ಸಮಗ್ರ ಬದಲಾವಣೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಪ್ರಮುಖವಾಗಿ ನಗರದಲ್ಲಿ ಸ್ವಂತ ವಾಹನಗಳ ಬಳಕೆ ತಗ್ಗಿಸಿ ಸಾರ್ವಜನಿಕ ಸಾರಿಗೆಗೆ ಹೆಚ್ಚು ಪ್ರೋತ್ಸಾಹ ನೀಡಿ ವಾಯುಮಾಲಿನ್ಯ ಪ್ರಮಾಣ ವನ್ನು ಶೇ.50  ರಷ್ಟು ಕಡಿಮೆಗೊಳಿಸಲಾಗುವುದು.

ಬೆಂಗಳೂರು ಮೊಬಿಲಿಟಿ ಮ್ಯಾನೆಜ್‌ಮೆಂಟ್ ಅಥಾರಿಟಿ (ಬಿಎಂಎಂಎ) ಸ್ಥಾಪಿಸುವುದಕ್ಕೆ ತೀರ್ಮಾನಿಸಲಾಗಿದ್ದು, ದಟ್ಟಣೆಯುಳ್ಳ 12 ಪ್ರಮುಖ ರಸ್ತೆಗಳಲ್ಲಿ ಬಸ್ ಹಾಗೂ ಸೈಕಲ್‌ಗಳಿಗೆ ಪ್ರತ್ಯೇಕ ಬಸ್ ಲೈನ್ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು
ಯಡಿಯೂರಪ್ಪ ಹೇಳಿದರು. 

6000 ಬಾಡಿಗೆ ಬಸ್ ರಸ್ತೆಗೆ ಪ್ರಸ್ತುತ ಬಿಎಂಟಿಸಿಯಲ್ಲಿ 6,500 ಬಸ್‌ಗಳಿದ್ದು, ಹೆಚ್ಚುವರಿಯಾಗಿ 6 ಸಾವಿರ ಬಸ್‌ಗಳನ್ನು ಸೇರ್ಪಡೆಗೊಳಿಸಬೇಕೆಂದು ತೀರ್ಮಾನಿಸಲಾಗಿದೆ. ಬಸ್‌ಗಳನ್ನು ಸರ್ಕಾರ ಖರೀದಿ ಮಾಡುವುದಿಲ್ಲ. ಬದಲಿಗೆ ಬಸ್ ತಯಾರಿಕಾ ಕಂಪನಿಗಳಿಂದ ಬಾಡಿಗೆ ರೂಪದಲ್ಲಿ ಪಡೆಯಲಾಗುತ್ತದೆ. ಹೊಸ ಬಸ್ ಖರೀದಿಗೆ 5 ರಿಂದ6  ಕೋಟಿ ರು. ಬೇಕಾಗಲಿದೆ. 

ಇಷ್ಟೊಂದು ಪ್ರಮಾಣದ ಹಣ ಹೂಡಿಕೆ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, 600 ಕೋಟಿ ರು. ವೆಚ್ಚದಲ್ಲಿ ಬಸ್‌ಗಳನ್ನು ಬಾಡಿಗೆ ರೂಪದಲ್ಲಿ ಪಡೆಯುತ್ತಿದ್ದೇವೆ. ಆ ಪೈಕಿ 3 ಸಾವಿರ ಎಲೆಕ್ಟ್ರಿಕ್ ಬಸ್‌ಗಳಿರಲಿವೆ ಎಂದು ತಿಳಿಸಿದರು.