ಪ್ರಯಾಣಿಕರ ದಟ್ಟಣೆ ತಪ್ಪಿಸಲು ಅಕ್ಟೋಬರ್ 3ರಂದು ನಮ್ಮ ಮೆಟ್ರೋ ರೈಲು ಸೇವೆಯನ್ನು ತಡರಾತ್ರಿಯವರೆಗೂ ವಿಸ್ತರಿಸಿ ಬಿಎಂಆರ್‌ಸಿಎಲ್ ಆದೇಶಿಸಿದೆ. ಮೆಜೆಸ್ಟಿಕ್‌ನಿಂದ ಎಲ್ಲಾ ದಿಕ್ಕುಗಳಿಗೆ ಕೊನೆಯ ರೈಲು ತಡರಾತ್ರಿ 12:55ಕ್ಕೆ ಹೊರಡಲಿದ್ದು, ಜನದಟ್ಟಣೆ ತಪ್ಪಿಸಲು ಕ್ಯೂಆರ್ ಟಿಕೆಟ್ ಅಥವಾ ಸ್ಮಾರ್ಟ್ ಕಾರ್ಡ್ ಬಳಸಲು ಸೂಚಿಸಲಾಗಿದೆ.

ಬೆಂಗಳೂರು (ಅ.02): ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಹತ್ವದ ಸಿಹಿಸುದ್ದಿ ನೀಡಿದೆ. ಪ್ರಯಾಣಿಕರ ನಿರೀಕ್ಷಿತ ದಟ್ಟಣೆಯನ್ನು ತಪ್ಪಿಸಲು ಹಾಗೂ ಸಾರ್ವಜನಿಕರ ಸುಗಮ ಸಂಚಾರದ ಅನುಕೂಲಕ್ಕಾಗಿ ಅಕ್ಟೋಬರ್ 3 ರಂದು ನಮ್ಮ ಮೆಟ್ರೋ ರೈಲು ಸೇವೆಯನ್ನು ತಡರಾತ್ರಿಯವರೆಗೂ ವಿಸ್ತರಿಸಿ ಆದೇಶ ಹೊರಡಿಸಿದೆ.

ವಿವಿಧ ಮಾರ್ಗಗಳ ಕೊನೆಯ ರೈಲು ಹೊರಡುವ ಸಮಯ:

  • ನೇರಳೆ ಮಾರ್ಗ (Purple Line):
  • ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣದಿಂದ: ರಾತ್ರಿ 12:00 ಗಂಟೆಗೆ
  • ಚಲ್ಲಘಟ್ಟ ನಿಲ್ದಾಣದಿಂದ: ರಾತ್ರಿ 12:20 ಗಂಟೆಗೆ
  • ಹಸಿರು ಮಾರ್ಗ (Green Line):
  • ಮಾದಾವರ ನಿಲ್ದಾಣದಿಂದ: ರಾತ್ರಿ 12:15 ಗಂಟೆಗೆ
  • ಸಿಲ್ಕ್ ಇನ್‌ಸ್ಟಿಟ್ಯೂಟ್ ನಿಲ್ದಾಣದಿಂದ: ರಾತ್ರಿ 12:20 ಗಂಟೆಗೆ
  • ಹಳದಿ ಮಾರ್ಗ (Yellow Line):
  • ಆರ್‌.ವಿ. ರಸ್ತೆ ನಿಲ್ದಾಣದಿಂದ: ತಡರಾತ್ರಿ 1:15 ಗಂಟೆಗೆ
  • ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣದಿಂದ: ರಾತ್ರಿ 11:55 ಗಂಟೆಗೆ

ಮೆಜೆಸ್ಟಿಕ್‌ನಿಂದ ಕೊನೆಯ ಸಂಪರ್ಕ ರೈಲು:

ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾದ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್)ದಿಂದ ಎಲ್ಲಾ ದಿಕ್ಕುಗಳಿಗೆ ತೆರಳುವ ಕೊನೆಯ ಸಂಪರ್ಕ ರೈಲು (Connecting Train) ತಡರಾತ್ರಿ 12:55ಕ್ಕೆ ಹೊರಡಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಕಿವಿಮಾತು:

ಮೆಟ್ರೋ ನಿಲ್ದಾಣಗಳ ಟಿಕೆಟ್ ಕೌಂಟರ್‌ಗಳಲ್ಲಿ ಉಂಟಾಗುವ ಜನದಟ್ಟಣೆಯನ್ನು ತಪ್ಪಿಸಲು ಪ್ರಯಾಣಿಕರು ಮುಂಚಿತವಾಗಿಯೇ ಕ್ಯೂಆರ್ (QR) ಟಿಕೆಟ್, ಸ್ಮಾರ್ಟ್ ಕಾರ್ಡ್ ಅಥವಾ ಎನ್‌ಸಿಎಂಸಿ (NCMC) ಕಾರ್ಡ್‌ಗಳನ್ನು ಬಳಸುವಂತೆ ಕೋರಲಾಗಿದೆ. ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಮೆಟ್ರೋ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸಬೇಕೆಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.