ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ಹಳದಿ ಮತ್ತು ನೀಲಿ ಮೆಟ್ರೋ ಮಾರ್ಗಗಳನ್ನು ಸಂಪರ್ಕಿಸಲು ಬಿಎಂಆರ್‌ಸಿಎಲ್ ನಗರದ ಮೊದಲ 'ಟ್ರಾವೆಲೇಟರ್' ಸ್ಥಾಪಿಸುತ್ತಿದೆ. ₹55.48 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ 250 ಮೀಟರ್ ಉದ್ದದ ಸ್ಕೈವಾಕ್, ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಮಾದರಿಯ ಚಲಿಸುವ ಪ್ಲಾಟ್‌ಫಾರ್ಮ್ ಸೌಲಭ್ಯ ಒದಗಿಸಲಿದೆ. ನೀಲಿ ಮಾರ್ಗ ಮುಕ್ತಗೊಂಡ ನಂತರ ಇದು ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.

ಬೆಂಗಳೂರಿನ ಸಾರಿಗೆ ಕಾರಿಡಾರ್‌ನ ಪ್ರಮುಖ ಕೇಂದ್ರವಾದ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯವೊಂದು ಸಿಗಲಿದೆ. ಹಳದಿ ಮಾರ್ಗ ಮತ್ತು ನಿರ್ಮಾಣ ಹಂತದಲ್ಲಿರುವ ನೀಲಿ ಮಾರ್ಗದ ನಿಲ್ದಾಣಗಳನ್ನು ಪರಸ್ಪರ ಸಂಪರ್ಕಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಗರದ ಮೊದಲ 'ಟ್ರಾವೆಲೇಟರ್' ಸ್ಥಾಪಿಸಲು ಮುಂದಾಗಿದೆ. ಆಟೋಮ್ಯಾಟಿಕ್ ನಡಿಗೆ ಮಾರ್ಗ ಹಾಗೂ ಅದರ ಪಕ್ಕದ ಸಾಗಣೆ ಹಾದಿಯ ನಿರ್ಮಾಣಕ್ಕಾಗಿ ಬಿಎಂಆರ್‌ಸಿಎಲ್ ₹55.48 ಕೋಟಿ ಮೌಲ್ಯದ ಗುತ್ತಿಗೆಯನ್ನು 'ಮಿಲನ್ ರೋಡ್ ಬಿಲ್ಡ್‌ಟೆಕ್ ಎಲ್‌ಎಲ್‌ಪಿ' ಸಂಸ್ಥೆಗೆ ವಹಿಸಿದೆ.

ಸಂಕೀರ್ಣ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಅತ್ಯಾಧುನಿಕ ಪರಿಹಾರ

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಹಳದಿ ಮತ್ತು ನೀಲಿ ಮಾರ್ಗದ ನಿಲ್ದಾಣಗಳು ಹೊರ ವರ್ತುಲ ರಸ್ತೆಯ ಎರಡೂ ಬದಿಗಳಲ್ಲಿ ಪ್ರತ್ಯೇಕವಾಗಿ ನೆಲೆಗೊಂಡಿವೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗವು ಈಗಾಗಲೇ ಕಾರ್ಯನಿರ್ವಹಣೆಗೆ ಸಿದ್ಧವಾಗುತ್ತಿದ್ದರೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗದ ಕಾಮಗಾರಿ ತೀವ್ರಗತಿಯಲ್ಲಿ ಸಾಗಿದೆ.

ಪ್ರಸ್ತುತ ಯೋಜಿಸಿರುವ 250 ಮೀಟರ್ ಎತ್ತರದ ಸ್ಕೈವಾಕ್ ಇಲ್ಲದಿದ್ದರೆ, ಒಂದು ಮಾರ್ಗದಿಂದ ಇನ್ನೊಂದು ಮಾರ್ಗಕ್ಕೆ ಮೆಟ್ರೋ ಬದಲಾಯಿಸುವ ಪ್ರಯಾಣಿಕರು ನಿಲ್ದಾಣದಿಂದ ಕೆಳಗಿಳಿದು, ಕಷ್ಟಕರವಾದ ರಸ್ತೆ ದಾಟಿ ಮತ್ತೊಂದು ನಿಲ್ದಾಣವನ್ನು ತಲುಪಬೇಕಾಗುತ್ತಿತ್ತು. ಈ ಸಂಚಾರದ ಗೊಂದಲ ಹಾಗೂ ಅಪಾಯವನ್ನು ತಪ್ಪಿಸಲು ಬಿಎಂಆರ್‌ಸಿಎಲ್ ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿ ನೇರ ಸಂಪರ್ಕ ನೀಡುವ ಸ್ಕೈವಾಕ್ ಶೈಲಿಯ ಟ್ರಾವೆಲೇಟರ್ ವಿನ್ಯಾಸಗೊಳಿಸಿದೆ.

ವಿಮಾನ ನಿಲ್ದಾಣ ಮಾದರಿಯ ಚಲಿಸುವ ಪ್ಲಾಟ್‌ಫಾರ್ಮ್

ಈ ಯೋಜನೆಗೆ ಅತ್ಯಾಧುನಿಕ 'ಟ್ರಾವೆಲೇಟರ್' ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ವಿಮಾನ ನಿಲ್ದಾಣಗಳು, ಬೃಹತ್ ಶಾಪಿಂಗ್ ಮಾಲ್‌ಗಳು ಮತ್ತು ಅಂತರರಾಷ್ಟ್ರೀಯ ರೈಲ್ವೆ ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ವ್ಯವಸ್ಥೆಯಲ್ಲಿ, ಪ್ರಯಾಣಿಕರು ಚಲಿಸುವ ಪ್ಲಾಟ್‌ಫಾರ್ಮ್‌ ಮೇಲೆ ನಿಂತರೆ ಸಾಕು, ಅದು ಅವರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸುರಕ್ಷಿತವಾಗಿ ಕರೆದೊಯ್ಯುತ್ತದೆ.

ಸಾಮಾನ್ಯವಾಗಿ ನಡೆದಾಡಲು ಬಯಸುವವರಿಗಾಗಿ ಟ್ರಾವೆಲೇಟರ್‌ನ ಪಕ್ಕದಲ್ಲೇ ಅಗಲವಾದ ಪಾದಚಾರಿ ಮಾರ್ಗವನ್ನೂ ರೂಪಿಸಲಾಗುತ್ತಿದೆ. ಎರಡು ನಿಲ್ದಾಣಗಳ ನಡುವಿನ ಅಂತರ ಹೆಚ್ಚಿರುವುದರಿಂದ ಮತ್ತು ನಡುವೆ ಪ್ರಮುಖ ರಸ್ತೆ ಹಾದುಹೋಗುವುದರಿಂದ ಈ ತಂತ್ರಜ್ಞಾನ ಅತ್ಯಗತ್ಯ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವಾಣ್ ತಿಳಿಸಿದ್ದಾರೆ.

ಬೆಂಗಳೂರಿನ ಇತರೆ ಇಂಟರ್‌ಚೇಂಜ್‌ಗಳಿಗಿಂತ ಸಂಪೂರ್ಣ ಭಿನ್ನ

ಸಿಲ್ಕ್ ಬೋರ್ಡ್‌ನ ಈ ಇಂಟರ್‌ಚೇಂಜ್ ವಿನ್ಯಾಸವು ನಗರದ ಇತರೆ ಪ್ರಮುಖ ಮೆಟ್ರೋ ಇಂಟರ್‌ಚೇಂಜ್‌ಗಳಿಗಿಂತ ವಿಭಿನ್ನವಾಗಿದೆ. ಮೆಜೆಸ್ಟಿಕ್ ನಲ್ಲಿ ನೇರಳೆ ಮತ್ತು ಹಸಿರು ಮಾರ್ಗಗಳು ಒಂದೇ ಭೂಗತ ನಿಲ್ದಾಣದ ವಿಭಿನ್ನ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಆರ್‌ವಿ ರಸ್ತೆಯಲ್ಲಿ ಹಸಿರು ಮತ್ತು ಹಳದಿ ಮಾರ್ಗದ ನಿಲ್ದಾಣಗಳು ಒಂದಕ್ಕೊಂದು ಪಕ್ಕದಲ್ಲೇ ನೆಲೆಗೊಂಡಿವೆ. ಎಂ.ಜಿ. ರಸ್ತೆಯಲ್ಲಿ ನೇರಳೆ ಮಾರ್ಗವು ಎತ್ತರಿಸಿದ ಮಾರ್ಗವಾಗಿದ್ದರೆ , ಪಿಂಕ್ ಲೈನ್ ಭೂಗತ ನಿಲ್ದಾಣವಾಗಿ ಸಂಪರ್ಕಗೊಳ್ಳುತ್ತದೆ. ಆದರೆ, ಸಿಲ್ಕ್ ಬೋರ್ಡ್‌ನಲ್ಲಿ ಎರಡು ಪ್ರತ್ಯೇಕ ಎತ್ತರಿಸಿದ ನಿಲ್ದಾಣಗಳ ನಡುವೆ ಬೃಹತ್ ಹೊರ ವರ್ತುಲ ರಸ್ತೆ ಇರುವುದರಿಂದ, ಮೇಲ್ಸೇತುವೆಯ ಮಾದರಿಯಲ್ಲಿ ದೃಶ್ಯ ಸೌಂದರ್ಯವನ್ನೂ ಹೆಚ್ಚಿಸುವಂತಹ ಟ್ರಾವೆಲೇಟರ್ ಸೌಲಭ್ಯ ಹೊಂದಿರುವ ಸ್ಕೈವಾಕ್ ಸಿದ್ಧಗೊಳ್ಳುತ್ತಿದೆ.

ಕಾರ್ಯಾಚರಣೆ ಯಾವಾಗ?

ನೀಲಿ ಮಾರ್ಗದ ನಿಲ್ದಾಣವು ಪ್ರಯಾಣಿಕರ ಸೇವೆಗೆ ಅಧಿಕೃತವಾಗಿ ಮುಕ್ತಗೊಂಡ ತಕ್ಷಣ ಈ ಟ್ರಾವೆಲೇಟರ್ ವ್ಯವಸ್ಥೆಯು ಸಾರ್ವಜನಿಕ ಬಳಕೆಗೆ ಸಿಗಲಿದೆ. ಅಲ್ಲಿಯವರೆಗೆ ಹಳದಿ ಮಾರ್ಗದ ನಿಲ್ದಾಣವು ಸಾಮಾನ್ಯ ರೀತಿಯಲ್ಲೇ ಕಾರ್ಯನಿರ್ವಹಿಸಲಿದ್ದು, ಒಪ್ಪಂದ ಪಡೆದಿರುವ ಮಿಲನ್ ರೋಡ್ ಬಿಲ್ಡ್‌ಟೆಕ್ ಸಂಸ್ಥೆಯು ನಿಗದಿತ ಸಮಯದೊಳಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಿದೆ.

ಏನಿದು ಟ್ರಾವೆಲೇಟರ್ ?

ಟ್ರಾವೆಲೇಟರ್ ಎಂದರೆ ಚಲಿಸುವ ಪಾದಚಾರಿ ಮಾರ್ಗ . ಇದು ಸಮತಲವಾಗಿ ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯುವ ಯಾಂತ್ರಿಕ ಪಟ್ಟಿಯಾಗಿದೆ. ಎಸ್ಕಲೇಟರ್‌ನಲ್ಲಿ ಮೆಟ್ಟಿಲುಗಳಿರುತ್ತವೆ ಇದು ಮಹಿಡಿ ಹತ್ತಲು ಸಹಾಯವಾಗುತ್ತದೆ. ಟ್ರಾವೆಲೇಟರ್ ಸಂಪೂರ್ಣವಾಗಿ ಸಾಗುವ ಪಟ್ಟಿಯಂತೆ ನೆಲಕ್ಕೆ ಸಮಾನವಾಗಿರುತ್ತದೆ.ವಿಮಾನ ನಿಲ್ದಾಣಗಳು, ಬೃಹತ್ ರೈಲ್ವೆ ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು ಮತ್ತು ಮೆಟ್ರೋ ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ಹೆಚ್ಚಿನ ದೂರ ನಡೆಯುವುದನ್ನು ತಪ್ಪಿಸಲು ಇದನ್ನು ಬಳಸಲಾಗುತ್ತದೆ.