ಬೆಂಗಳೂರಿನ ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣದ ಹಕ್ಕನ್ನು ಖ್ಯಾತ ತಂತ್ರಜ್ಞಾನ ಸಂಸ್ಥೆ ಇನ್ಮೊಬಿ ಪಡೆದುಕೊಂಡಿದೆ. ಈ ಒಪ್ಪಂದದಿಂದ ಬಿಎಂಆರ್ಸಿಎಲ್ಗೆ ₹65 ಕೋಟಿ ಆದಾಯ ಲಭಿಸಲಿದ್ದು, ನಿಲ್ದಾಣವನ್ನು 'ಇನ್ಮೊಬಿ ಇಬ್ಬಲೂರು ಮೆಟ್ರೋ ನಿಲ್ದಾಣ' ಎಂದು ಕರೆಯಲಾಗುತ್ತದೆ. ಇದು ಐಟಿ ಕಾರಿಡಾರ್ನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲಿದೆ.
ಬೆಂಗಳೂರು (ನ.05): ಬೆಂಗಳೂರಿನ ಹೊರ ವರ್ತುಲ ರಸ್ತೆ (ORR) ಮೆಟ್ರೋ ಕಾರಿಡಾರ್ನಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರಮುಖ ಇಂಟರ್ಚೇಂಜ್ ನಿಲ್ದಾಣವಾದ 'ಇಬ್ಬಲೂರು ಮೆಟ್ರೋ ನಿಲ್ದಾಣ'ದ ನಾಮಕರಣದ ಹಕ್ಕು (Naming Rights) ಖ್ಯಾತ ತಂತ್ರಜ್ಞಾನ ಸಂಸ್ಥೆ 'ಇನ್ಮೊಬಿ' (InMobi) ಪಾಲಾಗಿದೆ. ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮತ್ತು ಇನ್ಮೊಬಿ ಸಂಸ್ಥೆ ನಡುವೆ ಅಧಿಕೃತ ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಬಿದ್ದಿದೆ.
ಈ ಮಹತ್ವದ ಒಪ್ಪಂದದ ಪ್ರಕಾರ, ಇನ್ಮುಂದೆ ಈ ನಿಲ್ದಾಣವನ್ನು ಅಧಿಕೃತವಾಗಿ 'ಇನ್ಮೊಬಿ ಇಬ್ಬಲೂರು ಮೆಟ್ರೋ ನಿಲ್ದಾಣ' (InMobi Ibbaluru Metro Station) ಎಂದು ಕರೆಯಲಾಗುತ್ತದೆ. ನಿಲ್ದಾಣದ ನಾಮಕರಣ ಹಕ್ಕು ಮತ್ತು ನಿರ್ಮಾಣ ವೆಚ್ಚದ ಪಾಲುದಾರಿಕೆಯ ಭಾಗವಾಗಿ ಬಿಎಂಆರ್ಸಿಎಲ್ಗೆ ಬರೋಬ್ಬರಿ ₹65 ಕೋಟಿ ಆದಾಯ ಲಭಿಸಲಿದೆ.
ಐಟಿ ಉದ್ಯೋಗಿಗಳಿಗೆ ಸಂಚಾರ ಭಾಗ್ಯ:
ಹೊರ ವರ್ತುಲ ರಸ್ತೆಯ ನೀಲಿ ಮಾರ್ಗ (Blue Line) ಮತ್ತು ಕೆಂಪು ಮಾರ್ಗಗಳ (Red Line) ನಡುವಿನ ಪ್ರಮುಖ ಇಂಟರ್ಚೇಂಜ್ ನಿಲ್ದಾಣವಾಗಿ ಇಬ್ಬಲೂರು ಅಭಿವೃದ್ಧಿಗೊಳ್ಳುತ್ತಿದೆ. ಈ ಕಾರಿಡಾರ್ನ ಎರಡೂ ಬದಿಗಳಲ್ಲಿ ನೂರಾರು ಐಟಿ ಹಾಗೂ ಮಲ್ಟಿನಾಷನಲ್ ಕಂಪನಿಗಳಿದ್ದು, ಸಾವಿರಾರು ಟೆಕ್ಕಿಗಳು ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಈ ನಿಲ್ದಾಣ ಪೂರ್ಣಗೊಂಡರೆ ಐಟಿ ಕಾರಿಡಾರ್ನ ಟ್ರಾಫಿಕ್ ಸಮಸ್ಯೆಗೆ ದೊಡ್ಡ ಮಟ್ಟದ ಮುಕ್ತಿ ಸಿಗಲಿದೆ.
ಒಪ್ಪಂದಕ್ಕೆ ಗಣ್ಯರ ಸಹಿ:
ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪಿ.ಸಿ. ಜಾಫರ್ (IAS) ಮತ್ತು ಇನ್ಮೊಬಿ ಸಂಸ್ಥೆಯ ಜಾಗತಿಕ ಹಿರಿಯ ಉಪಾಧ್ಯಕ್ಷೆ ಹಾಗೂ ಮುಖ್ಯ ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ಡಾ. ಸುಬಿ ಚತುರ್ವೇದಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು. 'ಭಾರತದ ಮೊದಲ ಡಬಲ್ ಯೂನಿಕಾರ್ನ್ ಕಂಪನಿಯಾದ ಇನ್ಮೊಬಿಯನ್ನು ಮೆಟ್ರೋ ಅಭಿವೃದ್ಧಿಯಲ್ಲಿ ಪಾಲುದಾರರಾಗಿ ಸ್ವಾಗತಿಸಲು ಹರ್ಷವೆನಿಸುತ್ತದೆ. ಈ ₹65 ಕೋಟಿಯ ಒಪ್ಪಂದವು ಮೆಟ್ರೋ ಮೂಲಸೌಕರ್ಯಕ್ಕೆ ನೆರವಾಗುವುದರ ಜೊತೆಗೆ ಬಿಎಂಆರ್ಸಿಎಲ್ನ ಪ್ರಯಾಣಿಕೇತರ (Non-fare revenue) ಆದಾಯಕ್ಕೂ ದೊಡ್ಡ ಬಲ ನೀಡಲಿದೆ.
ನವೀನ್ ತಿವಾರಿ (ಸಂಸ್ಥಾಪಕ ಮತ್ತು ಸಿಇಒ, ಇನ್ಮೊಬಿ): ನಮ್ಮ ಸಂಸ್ಥೆಗೆ ಜಾಗತಿಕ ಕನಸುಗಳನ್ನು ಕಾಣಲು ಮತ್ತು ಬೆಳೆಯಲು ವಿಶ್ವಾಸ ನೀಡಿದ್ದೇ ಬೆಂಗಳೂರು. ನಮ್ಮನ್ನು ಬೆಳೆಸಿದ ಈ ನಗರಕ್ಕೆ ಮೆಟ್ರೋ ಸಾರಿಗೆಯಂತಹ ಮೂಲಸೌಕರ್ಯದ ಮೂಲಕ ಮರಳಿ ಕೊಡುಗೆ ನೀಡುತ್ತಿರುವುದು ನಮ್ಮ ಜವಾಬ್ದಾರಿ ಹಾಗೂ ಹೆಮ್ಮೆಯ ಸಂಗತಿ. ಬಿಎಂಆರ್ಸಿಎಲ್ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಹಾಗೂ ಮೂಲಸೌಕರ್ಯ ವೆಚ್ಚ ಭರಿಸಲು ಪ್ರಮುಖ ಖಾಸಗಿ ಸಂಸ್ಥೆಗಳೊಂದಿಗೆ ಕೈಜೋಡಿಸುತ್ತಿದೆ.
ಈಗಾಗಲೇ ಮೂರು ನಿಲ್ದಾಣಗಳಿಗೆ ಇಂತಹ ಒಪ್ಪಂದಗಳು ನಡೆದಿವೆ:
ಬೆಳ್ಳಂದೂರು ಮೆಟ್ರೋ ನಿಲ್ದಾಣ: ಪ್ರೆಸ್ಟೀಜ್ ಗ್ರೂಪ್ (Prestige Group)
ಕಡುಬೀಸನಹಳ್ಳಿ ಮೆಟ್ರೋ ನಿಲ್ದಾಣ: ಎಂಬಸಿ ಗ್ರೂಪ್ (Embassy Group)
ಡಿಆರ್ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ನಿಲ್ದಾಣ: ಬಾಗಮನೆ ಗ್ರೂಪ್ (Bagmane Group)
ಇಬ್ಬಲೂರು ಮೆಟ್ರೋ ನಿಲ್ದಾಣ: ಇನ್ಮೊಬಿ (InMobi)
ಸಾರ್ವಜನಿಕ ಸಾರಿಗೆ ಅಭಿವೃದ್ಧಿಯಲ್ಲಿ ಕಾರ್ಪೊರೇಟ್ ವಲಯದ ಈ ಸಹಭಾಗಿತ್ವವು ನಗರದ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಮೆಟ್ರೋ ಜಾಲವನ್ನು ತ್ವರಿತವಾಗಿ ವಿಸ್ತರಿಸಲು ಸಹಕಾರಿಯಾಗಲಿದೆ.






