ಬೆಂಗಳೂರು (ನ.12): ನಮ್ಮ ಬೆಂಗಳೂರು ಪ್ರತಿಷ್ಠಾನವು ನಗರದ ಅಕ್ರಮ ಕಟ್ಟಡಗಳ ವಿರುದ್ಧ ಆಂದೋಲನ ಹುಟ್ಟುಹಾಕಿದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ನಗರದಲ್ಲಿನ ಅಕ್ರಮ ಕಟ್ಟಡಗಳ ಬಗ್ಗೆ ಸಮೀಕ್ಷೆ ನಡೆಸಲು ಮಂದಾಗಿದ್ದಾರೆ. 

ಅಷ್ಟೇ ಅಲ್ಲ, ಈ ಸಮೀಕ್ಷೆ ಕಾರ್ಯವನ್ನು 60 ದಿನದೊಳಗೆ ಪೂರ್ಣಗೊಳಿಸಿ, ಅಕ್ರಮ ಎಂದು ಕಂಡು ಬಂದ ಕಟ್ಟಡಗಳನ್ನು ಬಿಬಿಎಂಪಿ ವತಿಯಿಂದಲೇ ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.

ಇಂದಿರಾ ನಗರದ 1ನೇ ಹಂತದ ಬಿನ್ನಮಂಗಲದಲ್ಲಿ ಮಣಿ ಕುಮರನ್ ಎಂಬು ವರು ನಕ್ಷೆ ಉಲ್ಲಂಘಿಸಿ ನಿರ್ಮಿಸುತ್ತಿದ್ದ ನಿರ್ಮಾಣ ಹಂತದ ಕಟ್ಟಡದ ಸ್ಥಳಕ್ಕೆ ಸೋಮವಾರ ಮೇಯರ್ ಗೌತಮ್‌ಕುಮಾರ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. 

ಈ ವೇಳೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಉಲ್ಲಂಘಿಸಿ ನಿರ್ಮಾಣಗೊಳ್ಳುವ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಧಿಕಾರಿಗಳನ್ನು ಹಾದಿ ತಪ್ಪಿಸುವುದಲ್ಲದೇ ಬಲವಾಗಿ ಉಲ್ಲಂಘನೆ ಪ್ರಶ್ನಿಸಿ ಕ್ರಮಕ್ಕೆ ಮುಂದಾದರೆ ಕೋರ್ಟ್ ಮೊರೆ ಹೋಗುತ್ತಾರೆ. ಹೀಗಾಗಿ ಕಾನೂನು ಬಾಹಿರ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳಲು ತೀರ್ಮಾನಿಸಿ ದ್ದೇವೆ. 60 ದಿನಗಳಲ್ಲಿ ಆಯಾ ವಲಯದ ಜಂಟಿ ಆಯುಕ್ತರ ನೇತೃತ್ವದಲ್ಲಿ ಸರ್ವೆ ನಡೆಸಿ ಅಕ್ರಮ ಎಂದು ಸಾಬೀತಾದ ಕಟ್ಟಡಗಳನ್ನು ಬಿಬಿಎಂಪಿ ವತಿಯಿಂದಲೇ ತೆರವು ಮಾಡಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದಲ್ಲದೆ ಇನ್ನು ಮುಂದೆ ಅಕ್ರಮ ಕಟ್ಟಡಗಳು ತಲೆ ಎತ್ತದಂತೆಯೂ ಮುನ್ನೆಚ್ಚರಿಕೆ ವಹಿಸಲಾಗು ವುದು. ನಿಯಮ ಉಲ್ಲಂಘಿಸದಂತೆ ಕಟ್ಟಡ ಮಾಲಿಕರಿಗೆ ನಕ್ಷೆ ಮಂಜೂರಾತಿ ವೇಳೆಯಲ್ಲಿ ಎಚ್ಚರಿಕೆ ನೀಡಲಾಗುವುದು. ನಿರ್ಮಾಣ ಹಂತದಲ್ಲೂ ಸ್ಥಳ ಪರಿಶೀಲನೆ ನಡೆಸಿ ನಕ್ಷೆ ಮಂಜೂರಾತಿ ಉಲ್ಲಂಘನೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಕಟ್ಟಡ ತೆರವಿಗೆ ಕಾನೂನು ಹೋರಾಟ: ಇಂದಿರಾ ನಗರದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಲಾಗು ತ್ತಿರುವ ಮಣಿಕುಮರನ್ ಎಂಬುವರಿಗೆ ಸೇರಿದ ಕಟ್ಟಡ ಪರಿಶೀಲನೆ ಮಾಡಿದ್ದೇನೆ. ಬಿಬಿಎಂಪಿ ನೀಡಿದ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವುದು ಪತ್ತೆಯಾ ಗಿದೆ. ಅಲ್ಲದೆ ವಸತಿ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದಾರೆ. ಈಗಾಗಲೇ ನಮ್ಮ ಅಧಿಕಾರಿಗಳು ಕಟ್ಟಡ ತೆರವಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ಕಟ್ಟಡ ಮಾಲಿಕರು ನ್ಯಾಯಾಲಯದಿಂದ ತಡೆಯಾಜ್ಞೆ ತೆಗೆದುಕೊಂಡು ಬಂದಿದ್ದು, ತಡೆಯಾಜ್ಞೆ ತೆರವುಗೊಳಿಸಲು ಕಾನೂನು ಹೋರಾಟಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.