ಬೆಸ್ಕಾಂ ವ್ಯಾಪ್ತಿಯ 20 ಪಟ್ಟಣಗಳಲ್ಲಿ ತಂತ್ರಾಂಶ ಉನ್ನತೀಕರಣ ಕಾಮಗಾರಿಯಿಂದಾಗಿ ಆನ್‌ಲೈನ್ ಸೇವೆಗಳು ಸ್ಥಗಿತಗೊಳ್ಳಲಿವೆ. ಸೆಪ್ಟೆಂಬರ್ 15ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 17ರ ಮಧ್ಯರಾತ್ರಿಯವರೆಗೆ ಆನ್‌ಲೈನ್ ಬಿಲ್ ಪಾವತಿ ಸೇರಿದಂತೆ ಎಲ್ಲಾ ಡಿಜಿಟಲ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರು (ಸೆ.15): ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ - BESCOM) ವ್ಯಾಪ್ತಿಯ ಗ್ರಾಹಕರಿಗೆ ಪ್ರಮುಖ ಸೂಚನೆಯೊಂದು ಹೊರಬಿದ್ದಿದೆ. ಬೆಸ್ಕಾಂ ವ್ಯಾಪ್ತಿಗೆ ಒಳಪಡುವ ಒಟ್ಟು 20 ಪಟ್ಟಣಗಳಲ್ಲಿ ತಂತ್ರಾಂಶ (ಸಾಫ್ಟ್‌ವೇರ್) ಉನ್ನತೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಮುಂದಿನ ಎರಡು ದಿನಗಳ ಕಾಲ ಎಲ್ಲಾ ರೀತಿಯ ಆನ್‌ಲೈನ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ.
ಇಂದು (ಸೆಪ್ಟೆಂಬರ್ 15) ಮಧ್ಯರಾತ್ರಿಯಿಂದಲೇ ಈ ನಿರ್ಬಂಧ ಜಾರಿಗೆ ಬರಲಿದ್ದು, ಸೆಪ್ಟೆಂಬರ್ 17ರ ಮಧ್ಯರಾತ್ರಿಯವರೆಗೆ ಆನ್‌ಲೈನ್ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ತನ್ನ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಯಾವೆಲ್ಲಾ ಸೇವೆಗಳು ಸ್ಥಗಿತಗೊಳ್ಳಲಿವೆ?
ಈ ಎರಡು ದಿನಗಳ ಅವಧಿಯಲ್ಲಿ ಗ್ರಾಹಕರಿಗೆ ಕೆಳಕಂಡ ಪ್ರಮುಖ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ:
ಆನ್‌ಲೈನ್ ಬಿಲ್ ಪಾವತಿ: ವೆಬ್‌ಸೈಟ್ ಅಥವಾ ಯುಪಿಐ ಆ್ಯಪ್‌ಗಳ ಮೂಲಕ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗುವುದಿಲ್ಲ.
ಹೊಸ ವಿದ್ಯುತ್ ಸಂಪರ್ಕ: ನೂತನ ಗೃಹ ಅಥವಾ ವಾಣಿಜ್ಯ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆ.
ಹೆಸರು ವರ್ಗಾವಣೆ (Name Transfer): ಮೀಟರ್ ಮಾಲೀಕತ್ವ ಬದಲಾವಣೆ ಪ್ರಕ್ರಿಯೆ.
ಲೋಡ್ ಹೆಚ್ಚಳ/ಕಡಿತ: ಹೆಚ್ಚುವರಿ ಲೋಡ್ ಮಂಜೂರಾತಿ ಅಥವಾ ಲೋಡ್ ಬದಲಾವಣೆ ಸೇವೆಗಳು.
ಬೆಸ್ಕಾಂ ಪೋರ್ಟಲ್ ಮೂಲಕ ಸಿಗುವ ಇತರ ನಾಗರಿಕ ಆನ್‌ಲೈನ್ ಸೇವೆಗಳು.
ಸೇವೆ ಸ್ಥಗಿತಗೊಳ್ಳಲಿರುವ 20 ಪಟ್ಟಣಗಳ ಪಟ್ಟಿ ಇಲ್ಲಿದೆ:
ಬೆಸ್ಕಾಂ ವ್ಯಾಪ್ತಿಯ ಈ ಕೆಳಗಿನ ಪಟ್ಟಣಗಳಲ್ಲಿ ಆನ್‌ಲೈನ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ:
- ಬಾಗೇಪಲ್ಲಿ
- ದೇವನಹಳ್ಳಿ
- ಗುಡಿಬಂಡೆ
- ಮಾಗಡಿ
- ಮಾಲೂರು
- ನೆಲಮಂಗಲ
- ಶ್ರೀನಿವಾಸಪುರ
- ವಿಜಯಪುರ
- ಚನ್ನಗಿರಿ
- ಚಿಕ್ಕನಾಯಕನಹಳ್ಳಿ
- ಗುಬ್ಬಿ
- ಹೊಳಲ್ಕೆರೆ
- ಹೊನ್ನಾಳಿ
- ಹೊಸದುರ್ಗ
- ಜಗಳೂರು
- ಕೊರಟಗೆರೆ
- ಮಧುಗಿರಿ
- ಮೊಳಕಾಲ್ಮೂರು
- ಪಾವಗಡ
- ತುರುವೇಕೆರೆ
ಸ್ಥಗಿತಕ್ಕೆ ಕಾರಣವೇನು?
ಕೇಂದ್ರ ಸರ್ಕಾರದ ನೆರವಿನ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (IPDS - ಹಂತ-2) ಅಡಿಯಲ್ಲಿ ಗ್ರಾಹಕರಿಗೆ ಮತ್ತಷ್ಟು ವೇಗದ ಮತ್ತು ಅತ್ಯಾಧುನಿಕ ಡಿಜಿಟಲ್ ಸೇವೆಗಳನ್ನು ಒದಗಿಸಲು ಹೊಸ ಐಟಿ ಅಪ್ಲಿಕೇಶನ್ ಅನ್ನು ಅಳವಡಿಸಲಾಗುತ್ತಿದೆ. ಪ್ರಸ್ತುತ ಬಳಕೆಯಲ್ಲಿರುವ ಸಾಫ್ಟ್‌ವೇರ್ ಅನ್ನು ಅಪ್‌ಗ್ರೇಡ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ವರ್ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಹಕರು ಈ ತಾಂತ್ರಿಕ ಅಡಚಣೆಯನ್ನು ಗಮನದಲ್ಲಿಟ್ಟುಕೊಂಡು ಸಹಕರಿಸಬೇಕು ಹಾಗೂ ಆನ್‌ಲೈನ್ ಸೇವೆಗಳಿಗಾಗಿ ಸೆಪ್ಟೆಂಬರ್ 18ರ ನಂತರ ಪ್ರಯತ್ನಿಸಬೇಕು ಎಂದು ಬೆಸ್ಕಾಂ ಸಾರ್ವಜನಿಕರಲ್ಲಿ ಮನವಿ ಮಾಡಿದೆ.


