ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಮಿಂಚಿನ ಸಂಚಾರ ನಡೆಸುವುದರೊಂದಿಗೆ, ಎಸ್-ವ್ಯಾಸ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿ, ಯೋಗದ ಮಹತ್ವ ಮತ್ತು ಜಾಗತಿಕ ಪ್ರಭಾವದ ಕುರಿತು ಮಾತನಾಡಿದರು.

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಿಂಚಿನ ಸಂಚಾರ ನಡೆಸಿದ್ದು, ನಗರದ ಹೊರವಲಯದ ಜಿಗಣಿಯಲ್ಲಿರುವ 'ಪ್ರಶಾಂತ ಕುಟೀರ'ಕ್ಕೆ ಭೇಟಿ ನೀಡಿದ ಪ್ರಧಾನಿ, ಅಲ್ಲಿನ S-VYASA (ಎಸ್-ವ್ಯಾಸ) ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಆಡಳಿತ ಭವನ ಹಾಗೂ GAIL (ಗೇಲ್) ಸಂಸ್ಥೆಯ ಸಂಕುಚಿತ ಜೈವಿಕ ಅನಿಲ (CBG) ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನಿಗೆ ವಿಶೇಷ ಸನ್ಮಾನ!

ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಪ್ರಧಾನಿ ಮೋದಿ ಅವರಿಗೆ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ನೀಡಿ ವಿಭಿನ್ನ ಹಾಗೂ ವಿಶೇಷವಾಗಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸುಧಾ ಯಾದವ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ಕರ್ನಾಟಕದ ಪುಣ್ಯಭೂಮಿ ಮತ್ತು ಡಾ. ರಾಜ್‌ಕುಮಾರ್ ಸ್ಮರಣೆ

ಶಿಲಾನ್ಯಾಸ ನೆರವೇರಿಸಿದ ಬಳಿಕ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕ ಮತ್ತು ಬೆಂಗಳೂರಿನ ಯೋಗ ಪರಂಪರೆ ಕೊಂಡಾಡಿದರು. ಕರ್ನಾಟಕದ ಈ ಪುಣ್ಯಭೂಮಿ ಯೋಗದ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಹಲವಾರು ಯೋಗ ಜ್ಞಾನಿಗಳು ಜನ್ಮ ತಾಳಿದ್ದಾರೆ. ಕಲಾ ಕ್ಷೇತ್ರದ ದಿಗ್ಗಜರು ಕೂಡ ಯೋಗವನ್ನು ಅತ್ಯಂತ ಗೌರವದಿಂದ ಆರಾಧಿಸಿದ್ದಾರೆ, ಅದಕ್ಕೆ ವರನಟ ಡಾ. ರಾಜ್‌ಕುಮಾರ್ ಅವರೇ ಜೀವಂತ ಸಾಕ್ಷಿ, ಎಂದು ಮೋದಿ ಸ್ಮರಿಸಿದರು. ಸಾಧಾರಣ ಯೋಗ ಕೇಂದ್ರವಾಗಿ ಆರಂಭವಾದ ಸಂಸ್ಥೆ ಇಂದು ಇಷ್ಟು ದೊಡ್ಡ ವಿಶ್ವವಿದ್ಯಾಲಯವಾಗಿ ಬೆಳೆದು ನಿಂತಿದೆ ಎಂದರೆ ಅದಕ್ಕೆ ನಿಮ್ಮೆಲ್ಲರ ಪ್ರೇರಣೆ ಮತ್ತು ಪರಿಶ್ರಮವೇ ಕಾರಣ. ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಎಸ್-ವ್ಯಾಸ ಪರಿವಾರಕ್ಕೆ ನನ್ನ ಹೃದಯಪೂರ್ವಕ ಶುಭಾಶಯಗಳು, ಎಂದು ಪ್ರಧಾನಿ ಹೇಳಿದರು.

ಹೆಚ್.ವಿ. ಶೇಷಾದ್ರಿ ಹಾಗೂ ವಿವೇಕಾನಂದರ ಆದರ್ಶಗಳ ಸ್ಮರಣೆ!

ತಮ್ಮ ಭಾಷಣದಲ್ಲಿ ಹಿರಿಯ ಚಿಂತಕ ಹೆಚ್.ವಿ. ಶೇಷಾದ್ರಿ ಅವರ ಜನ್ಮದಿನಾಚರಣೆಯನ್ನು ಸ್ಮರಿಸಿದ ಪ್ರಧಾನಿ ಮೋದಿ, "ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಕಾಯಕದಲ್ಲಿ ಶೇಷಾದ್ರಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜನರನ್ನು ಒಳಗೊಳ್ಳುವುದು ಮತ್ತು ದೇಶದ ಸೇವೆ ಮಾಡುವುದೇ ಅವರ ಪರಮ ಧ್ಯೇಯವಾಗಿತ್ತು. ಅವರ ಕಾರ್ಯವೈಖರಿ ದೇಶ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿದೆ, ಎಂದರು. ಮುಂದುವರಿದು ಮಾತನಾಡಿದ ಅವರು, "ಅಂದು ಸ್ವಾಮಿ ವಿವೇಕಾನಂದರು ಹಾಕಿಕೊಟ್ಟ ಆಧ್ಯಾತ್ಮಿಕ ಹಾದಿಯಿಂದಲೇ ಇಂದು ಪ್ರಶಾಂತ ಕುಟೀರದಂತಹ ಹಲವಾರು ಶ್ರೇಷ್ಠ ಕೇಂದ್ರಗಳು ಸ್ಥಾಪನೆಯಾಗಿವೆ. ಇಲ್ಲಿ ಕೇವಲ ಯೋಗ ಶಿಕ್ಷಣ ಮಾತ್ರವಲ್ಲದೆ, ವೈಜ್ಞಾನಿಕ ಸಂಶೋಧನೆ, ಆಯುರ್ವೇದ ಹಾಗೂ ಆಧುನಿಕ ವೈದ್ಯಕೀಯ (ಮಾಡರ್ನ್ ಮೆಡಿಕಲ್) ವಿಷಯಗಳನ್ನೂ ಕಲಿಸಲಾಗುತ್ತಿದೆ. ರೋಗ ರುಜಿನಗಳನ್ನು ನಿವಾರಣೆ ಮಾಡುವಲ್ಲಿ ಇಂತಹ ಸಂಸ್ಥೆಗಳ ಪಾತ್ರ ಅತ್ಯಂತ ದೊಡ್ಡದಿದೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯೋಗ ಇಂದು ಜಗತ್ತಿಗೆ ಭಾರತದ ಪ್ರವೇಶದ್ವಾರ!

ಯೋಗದ ಜಾಗತಿಕ ಮಹತ್ವದ ಕುರಿತು ಮಾತನಾಡಿದ ಮೋದಿ, "ಇಂದು ಭಾರತದ ಯೋಗವು ಆತ್ಮನಿರ್ಭರವಾಗಿ ಜಗತ್ತಿನೆದುರು ತಲೆ ಎತ್ತಿ ನಿಂತಿದೆ. ಇದೇ ಕಾರಣದಿಂದ ಇಂದು ಇಡೀ ವಿಶ್ವವೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಆಫ್ರಿಕಾ, ಸೌದಿ ಅರೇಬಿಯಾ ಸೇರಿದಂತೆ ಹಲವು ರಾಷ್ಟ್ರಗಳು ಯೋಗ ಮತ್ತು ಆಯುಷ್ ಕ್ಷೇತ್ರದ ಅಭಿವೃದ್ಧಿಗಾಗಿ ಭಾರತದ ಆಯುಷ್ ಮಂತ್ರಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿವೆ," ಎಂದು ತಿಳಿಸಿದರು. "ನಾನು ಪ್ರಪಂಚದ ಯಾವ ಮೂಲೆಯಲ್ಲೇ ಹೋದರೂ, ಜಗತ್ತಿನ ದೊಡ್ಡ ದೊಡ್ಡ ನಾಯಕರು ಮತ್ತು ಪರಿವಾರಗಳೊಂದಿಗೆ ಕುಳಿತು ಮಾತನಾಡುವಾಗ ಪ್ರತಿ ಬಾರಿಯೂ ಯೋಗದ ಕುರಿತು ಚರ್ಚೆ ಇದ್ದೇ ಇರುತ್ತದೆ. ಇಂದು ಯೋಗವು ಜಗತ್ತಿಗೆ ಭಾರತದ ಪ್ರವೇಶದ್ವಾರವಾಗಿ ಬದಲಾಗಿದೆ, ಎಂದು ಪ್ರಧಾನಿ ಮೋದಿ ಹೆಮ್ಮೆಯಿಂದ ನುಡಿದರು.