ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಎಂದು ಘೋಷಿಸಿ, ಕಾರಣ ಬಿಚ್ಚಿಟ್ಟ ದೆಹಲಿ ಯುವತಿ, ದೆಹಲಿಗಿಂತ ಬೆಂಗಳೂರು ರಾಷ್ಟ್ರ ರಾಜಧಾನಿಯಾಗಲು ಹೆಚ್ಚು ಅರ್ಹ ಎಂದಿದ್ದಾರೆ. ತಲೆತಗ್ಗಿಸುವುದಕ್ಕಿಂತ ಬೆಂಗಳೂರು ರಾಜಧಾನಿಯಾಗಲಿ ಎಂದಿದ್ದಾರೆ.
ಬೆಂಗಳೂರು (ಡಿ.25) ಭಾರತದ ರಾಜಧಾನಿ ದೆಹಲಿ. ದೆಹಲಿ ಬದಲು ಬೇರೆ ನಗರ ರಾಜಧಾನಿಯಾಗಬೇಕು ಎಂಬ ವಾದ ಹಲವು ಬಾರಿ ಕೇಳಿ ಬಂದಿದೆ. ಇದೀಗ ದೆಹಲಿಗಿಂತ ಬೆಂಗಳೂರು ದೇಶದ ರಾಜಧಾನಿಯನ್ನಾಗಿ ಮಾಡುವುದು ಹೆಚ್ಚು ಸೂಕ್ತ ಎಂದು ದೆಹಲಿ ಯವತಿ ಹೇಳಿದ್ದಾರೆ. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಪರ ವಿರೋಧಗಳು ಕೇಳಿಬಂದಿದೆ. ದೆಹಲಿಯಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ಯುವತಿ 2 ತಿಂಗಳ ಬಳಿಕ ಪೋಷಕರ ಭೇಟಿಗಾಗಿ ದೆಹಲಿ ತೆರಳಿದಾಗ ವಿಡಿಯೋ ಮೂಲಕ ಯುವತಿ ವಿಶೇಷ ಆಗ್ರಹ ಮುಂದಿಟ್ಟಿದ್ದಾಳೆ. ದೆಹಲಿಯಿಂದ ನಾವು ತಲೆ ತಗ್ಗಿಸಬೇಕಾಗಿ ಬಂದಿದೆ ಎಂದಿದ್ದಾಳೆ.
ರಾಜಧಾನಿಯಾಗಲು ಬೆಂಗಳೂರು ಯಾಕೆ ಸೂಕ್ತ?
ದೆಹಲಿ ಯುವತಿ ಸಿಮ್ರಿಧಿ ಮಖಿಜಾ ಕಳೆದ 2 ತಿಂಗಳಿನಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಇದರ ನಡುವೆ ಪೋಷಕರ ಭೇಟಿಯಾಗಲು ದೆಹಲಿಗೆ ಮರಳಿದ ಸಿಮ್ರಿಧಿಗೆ ಒಂದು ದಿನ ಕಳೆಯುವುದು ಕಷ್ಟವಾಗಿದೆ ಎಂದಿದ್ದಾಳೆ. ನಾನು ದೆಹಲಿಯವಳಾಗಿ ಈ ಮಾತು ಹೇಳುತ್ತಿದ್ದೇನೆ. ಬೆಂಗಳೂರಿನಲ್ಲಿ ದೆಹಲಿಗಿಂತ ಉತ್ತಮ ಗಾಳಿ ಇದೆ. ಉಸಿರಾಡಲು ಯೋಗ್ಯ ವಾತಾವರಣವಿದೆ. ದೆಹಲಿಗಿಂತ ಹೆಚ್ಚಿನ ಸುರಕ್ಷತೆ ಬೆಂಗಳೂರಿನಲ್ಲಿದೆ.ಇನ್ನು ಎಲ್ಲರನ್ನು ಆಹ್ವಾನಿಸುವ ಉಲ್ಲಾಸದಾಕ ವಾತಾವರಣವಿದೆ. ಹೀಗಾಗಿ ಬೆಂಗಳೂರನ್ನು ರಾಷ್ಟ್ರದ ರಾಜಧಾನಿ ಎಂದು ಘೋಷಿಸಿ ಎಂದಿದ್ದಾಳೆ.
ದೆಹಲಿ ಸಮಸ್ಯೆ ಏನು?
ದೆಹಲಿ ಗ್ಯಾಸ್ ಛೇಂಬರ್ ರೀತಿ ಎನಿಸುತ್ತಿದೆ. ಉಸಿರಾಡಲು ಸಾಧ್ಯವಾಗುತ್ತಿಲ್ಲ. ಉಸಿರಾಟದ ಸಮಸ್ಯೆಗಳು ಬರುತ್ತಿದೆ. ಅಂತಾರಾಷ್ಟ್ರೀಯ ವ್ಯಕ್ತಿಗಳು, ಅತಿಥಿಗಳು ಬಂದಾಗ ದೆಹಲಿ ಬಂದು ಉಸಿರಾಡಲು ಕಷ್ಟಪಟ್ಟು ನಮ್ಮ ದೇಶ ತಲೆ ತಗ್ಗಿಸುವುದಕ್ಕಿಂತ ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಮಾಡಿದರೆ ಈ ಸಮಸ್ಯೆಗಳೇ ಇರುವುದಿಲ್ಲ. ದೆಹಲಿ ಪರಿಸ್ಥಿತಿ ಹೀಗಿರುವಾಗ ಇನ್ನೂ ಯಾಕೆ ರಾಜಧಾನಿಯಾಗಿ ಉಳಿದುಕೊಂಡಿದೆ ಅನ್ನೋದೇ ಅರ್ಥವಾಗುತ್ತಿಲ್ಲ. ರಾತ್ರಿ 10 ಗಂಟೆ ಒಬ್ಬಳೆ ಬೆಂಗಳೂರು ರಸ್ತೆಯಲ್ಲಿ ಗೆಳತಿಯನ್ನು ಬೇಟಿ ಮಾಡಿ ಮನೆಗೆ ಹಿಂದಿರುಗಿದ್ದೇನೆ. ಸಣ್ಣ ದೂರ, ರಸ್ತೆಗಳು ದೆಹಲಿಗಿಂತ ಹೆಚ್ಚು ಸುರಕ್ಷಿತವಾಗಿ ಕಾಣಿಸುತ್ತಿದೆ. ಬೆಂಗಳೂರಿನ ರಸ್ತೆಗಳು ಪಾದಾಚಾರಿಗಳಿಗೂ ಅವಕಾಶ ನೀಡಿದೆ. ಬೆಂಗಳೂರು ಎಲ್ಲಾ ರೀತಿಯಿಂದಲೂ ಉತ್ತಮ ವಾತಾವರಣ ಹೊಂದಿದೆ ಎಂದು ಸಿಮ್ರಿಧಿ ಹೇಳಿದ್ದಾರೆ.
ಸಿಮ್ರಿಧಿ ವಿಡಿಯೋಗೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಹಲವರು ಸಿಮ್ರಿಧಿ ಪರ ನಿಂತುಕೊಂಡಿದ್ದಾರೆ. ಇತ್ತ ಹಲವರು ಸಿಮ್ರಿಧಿ ವಿರುದ್ಧ ಪ್ರತಿಕ್ರಿಯೆ ನೀಡಿದ್ದಾರೆ. ರಾಜಧಾನಿಯನ್ನು ಬೇರೆ ನಗರಕ್ಕೆ ವರ್ಗಾವಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿ ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಮಾಡಿ ಎಂದು ಹೊಸ ಆಗ್ರಹ ವ್ಯಕ್ತಪಡಿಸುವ ಬದಲು, ದೆಹಲಿಯನ್ನು ಉತ್ತಮವಾಗಿಸಲು ಯಾಕೆ ಆಗ್ರಹಿಸಬಾರದು, ದೆಹಲಿಯಲ್ಲಿ ಯೋಗ್ಯ ವಾತಾವರಣ ಸೃಷ್ಟಿಸಲು ಯಾಕೆ ಒತ್ತಾಯಿಸಬಾರದು ಎಂದು ಪ್ರಶ್ನಿಸಿದ್ದಾರೆ. ದೆಹಲಿಯಲ್ಲಿಂದ ಮತ್ತೊಂದು ನಗರಕ್ಕೆ ರಾಜಧಾನಿ ಸ್ಥಳಾಂತರ ಮಾಡುವುದು ಇದಕ್ಕೆ ಪರಿಹಾರವಲ್ಲ. ಬೆಂಗಳೂರು ಅರ್ಧ ಹಾಳಾಗಿದೆ. ಪೂರ್ತಿ ಹಾಳು ಮಾಡುವ ಸಲಹೆ ನೀಡಬೇಡಿ ಎಂದು ಸೂಚಿಸಿದ್ದಾರೆ.


