ಬೆಂಗಳೂರಿನಿಂದ ಮೈಸೂರಿಗೆ ಪ್ರವಾಸ ಬಂದಿದ್ದ ವಿಕಾಸ್‌ ಗೌಡ ಅರ್ಧ ದಾರಿಯಲ್ಲೇ ಪ್ರವಾಸಿಗನ ಬಿಟ್ಟು ಹೋದ ಓಲಾ ಚಾಲಕ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡ ವಿಕಾಸ್ ಗೌಡ

ಬೆಂಗಳೂರು: ಓಲಾ ಕ್ಯಾಬ್‌ ಬುಕ್ ಮಾಡಿ ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ವ್ಯಕ್ತಿಯೋರ್ವನನ್ನು ಓಲಾ ಚಾಲಕ ಮಧ್ಯದಲ್ಲೇ ಬಿಟ್ಟು ಹೋದ ಘಟನೆ ನಡೆದಿದೆ. ಬೆಂಗಳೂರಿನ ವಿಕಾಸ್ ಗೌಡ ಎಂಬವರು ತಮಗಾದ ಈ ಕರಾಳ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ಬುಕ್ ಮಾಡುವಾಗ ಮತ್ತು ಅದರಲ್ಲಿ ಪ್ರಯಾಣಿಸಿದ ಅನೇಕರಿಗೆ ಹಲವು ರೀತಿಯ ಕಹಿ ಅನುಭವಗಳಾಗಿದೆ. ಅಗತ್ಯ ಸಮಯದಲ್ಲಿ ನಿರಾಕರಿಸುವುದರಿಂದ ಹಿಡಿದು ಪಾವತಿ ಸಂಬಂಧಿತ ಸಮಸ್ಯೆಗಳವರೆಗೆ ಅನೇಕರು ತಮ್ಮ ಕಹಿ ಘಟನೆಗಳನ್ನು ಹೇಳಿಕೊಂಡಿದ್ದಾರೆ. ಈಗ ಬೆಂಗಳೂರಿನ ವಿಕಾಸ್ ಗೌಡ ಎಂಬ ಟ್ವಿಟರ್ ಬಳಕೆದಾರರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 

ವೆಚ್ಚ ಎಷ್ಟೇ ಇರಲಿ ಓಲಾ ಕ್ಯಾಬ್ ಬುಕ್ ಮಾಡುವುದನ್ನು ನಿಲ್ಲಿಸಿ ಎಂದು ವಿಕಾಸ್‌ ಗೌಡ ಮನವಿ ಮಾಡಿದ್ದಾರೆ. ತಮ್ಮ ಆತ್ಮೀಯರ ಪೋಷಕರೊಂದಿಗೆ ಮೈಸೂರಿಗೆ ಹಿಂದಿರುಗಲು ಓಲಾ ಕ್ಯಾಬ್‌ ಬುಕ್ ಮಾಡಿದ್ದೆ. ಆದರೆ ಒಂದೂವರೆ ಗಂಟೆ ಪ್ರಯಾಣದ ನಂತರ ದಾರಿ ಮಧ್ಯೆ ಕೆಲ ರೌಡಿಗಳು ತಮ್ಮ ದ್ವಿಚಕ್ರ ವಾಹನಗಳಲ್ಲಿ ಬಂದು ಕ್ಯಾಬ್‌ ಅಡ್ಡ ಹಾಕಿದರು. ಅಲ್ಲದೇ ಅವರು ಓಲಾ ಡ್ರೈವರ್‌ಗೆ ತಮ್ಮ ಹಿಂದಿನ ಕಂತುಗಳನ್ನು ಆ ಕ್ಷಣದಲ್ಲಿಯೇ ಪಾವತಿಸುವಂತೆ ಬೆದರಿಕೆ ಹಾಕಿದರು. ಇಲ್ಲದಿದ್ದರೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಹೇಳಿದರು. ಅಲ್ಲದೇ ನಾನು ಹಾಗೂ ನಮ್ಮ ಕುಟುಂಬದವರನ್ನು ಮಧ್ಯದಲ್ಲಿಯೇ ಕೆಳಗಿಳಿಯುವಂತೆ ಕೇಳಿದ ಅವರು ಬೇರೆ ವಾಹನ ನೊಡಿಕೊಳ್ಳುವಂತೆ ಹೇಳಿದರು ಎಂದು ವಿಕಾಸ್‌ ಗೌಡ ಹೇಳಿದ್ದಾರೆ. 

Scroll to load tweet…

ಈ ಗಲಾಟೆ ನಡೆಯುತ್ತಿರುವಾಗ, ಕ್ಯಾಬ್ ಕಂಪನಿ ಒದಗಿಸಿದ ತುರ್ತು ಸಹಾಯವಾಣಿ ಸಂಖ್ಯೆಗೆ ವಿಕಾಸ್ ನಿರಂತರವಾಗಿ ಸಂಪರ್ಕ ಮಾಡಲು ಯತ್ನಿಸಿದರು ಆದರೆ ಅದು ವ್ಯರ್ಥವಾಗಿದೆ. ಅಲ್ಲದೇ ಕಸ್ಟಮರ್ ಕೇರ್ ಏಜೆಂಟ್, ಪರಿಸ್ಥಿತಿಯನ್ನು ಪರಿಹರಿಸುವ ಬದಲು ಮತ್ತೊಂದು ಕ್ಯಾಬ್ ಅನ್ನು ಬುಕ್ ಮಾಡಿ ತನ್ನ ಪ್ರಯಾಣವನ್ನು ಮುಂದುವರೆಸುವಂತೆ ಸಲಹೆ ನೀಡಿದರು.

ಗ್ರಾಹಕರ ದೂರು ಇತ್ಯರ್ಥಪಡಿಸದಿದ್ದರೆ ಕಠಿಣ ಕ್ರಮ: ಓಲಾ, ಊಬರ್‌ಗೆ ಸರ್ಕಾರದ ವಾರ್ನಿಂಗ್

ಇಷ್ಟೇ ಅಲ್ಲದೇ ಈ ಕೆಟ್ಟ ಅನುಭವದ ನಂತರವೂ ತಮಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಯಿತು. ಇದು ಓಲಾ ಕ್ಯಾಬ್ ಅವರ ತುರ್ತು ಪ್ರತಿಕ್ರಿಯೆ ತಂಡ ಗ್ರಾಹಕರೊಂದಿಗೆ ವ್ಯವಹರಿಸುವ ರೀತಿ. ಈ ಎಲ್ಲಾ ಅಹಿತಕರ ಘಟನೆಗಳ ನಂತರ, ಮಹಿಳೆಯರು, ಕುಟುಂಬಗಳು ಮತ್ತು ಸಾಮಾನ್ಯ ಜನರಿಗೆ ನಮ್ಮ ಕ್ಯಾಬ್ ಸವಾರಿಗಳನ್ನು ಸುರಕ್ಷಿತವಾಗಿಸುವುದರಿಂದ ನಾವು ಬಹಳ ದೂರದಲ್ಲಿದ್ದೇವೆ ಎಂದು ವಿಕಾಸ್ ಬರೆದಿದ್ದಾರೆ. 

Ola EV ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ರಿವರ್ಸಗೇರ್‌ ಎಡವಟ್ಟು, ವೃದ್ಧನ ತಲೆಗೆ 10 ಹೊಲಿಗೆ!
ಘಟನೆಗೆ ಸಂಬಂಧಿಸಿದಂತೆ ಓಲಾ ಕ್ಯಾಬ್ಸ್ (Ola cabs) ಪ್ರತಿಕ್ರಿಯಿಸಿದ್ದು, ಕಾಮೆಂಟ್‌ಗಳ ವಿಭಾಗದಲ್ಲಿ ಕ್ಷಮೆಯಾಚಿಸಿದೆ. ನೀವು ಮತ್ತು ನಿಮ್ಮ ಕುಟುಂಬದವರು ಸುರಕ್ಷಿತವಾಗಿ ಮನೆಗೆ ತಲುಪಿದ್ದೀರಿ ಎಂದು ನಾವು ಭಾವಿಸುತ್ತೇವೆ. ಇದು ಎಷ್ಟು ಅಸಮಾಧಾನವನ್ನು ಉಂಟು ಮಾಡುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ನೀವು ಈಗಾಗಲೇ ಅಗತ್ಯವಿರುವ ವಿವರಗಳನ್ನು ಹಂಚಿಕೊಂಡಿರುವುದರಿಂದ, ಯಾವುದೇ ವಿಳಂಬವಿಲ್ಲದೆ ಸಂಬಂಧಿತ ತಂಡವು ಸಹಾಯದೊಂದಿಗೆ ನಿಮ್ಮನ್ನು ತಲುಪುತ್ತದೆ ಎಂದು ಅವರು ಬರೆದಿದ್ದಾರೆ. ಆದರೆ, ಓಲಾ ಕ್ಷಮೆಯನ್ನು ಒಪ್ಪಲು ನೆಟ್ಟಿಗರು ನಿರಾಕರಿಸಿದ್ದಾರೆ. ಅನೇಕರು ತಮ್ಮದೇ ಆದ ಭಯಾನಕ ಅನುಭವಗಳನ್ನು ಕಾಮೆಂಟ್‌ನಲ್ಲಿ ಹಂಚಿಕೊಂಡಿದ್ದಾರೆ.