ಶ್ರವಣ್ ಟಿಕೂ ಅವರು ಸರ್ಜಾಪುರ ರಸ್ತೆಯಲ್ಲಿರುವ 2BHK ಅಪಾರ್ಟ್‌ಮೆಂಟ್‌ನಲ್ಲಿ ಎರಡು ವರ್ಷ ವಾಸ ಮಾಡಿ ಬಳಿಕ ದೊಡ್ಡ ನಿವಾಸಕ್ಕೆ ತೆರಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಅವರ ಬಾಡಿಗೆ ಅವಧಿಯಲ್ಲಿ, ಅವರು ಎಂದಿಗೂ ಮನೆ ಮಾಲೀಕರೊಂದಿಗೆ ನೇರವಾಗಿ ಸಂವಹನ ನಡೆಸಲಿಲ್ಲ ಎಂದಿದ್ದಾರೆ. 

ಬೆಂಗಳೂರು (ಜೂ.14): ಉದ್ಯಾನನಗರಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ದೊಡ್ಡ ಸವಾಲಾದರೆ, ಬಾಡಿಗೆ ಮನೆಗೆ ಕೊಟ್ಟ ಮುಂಗಡ ಹಣವನ್ನು ಮನೆ ಮಾಲೀಕರಿಂದ ವಾಪಾಸ್‌ ಪಡೆದುಕೊಳ್ಳುವುದು ಅದಕ್ಕಿಂತ ದೊಡ್ಡ ಸಾಹಸ. ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ಸಂಸ್ಥಾಪಕ ಹಾಗೂ ಐಐಟಿ ಪದವೀಧ ಶ್ರವಣ್‌ ಟಿಕೋ ಎನ್ನುವವರು ಲಿಂಕ್ಡಿನ್‌ನಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದು, ಭಾರತದ ಟೆಕ್‌ ರಾಜಧಾನಿಯಲ್ಲಿ ಬಾಡಿಗೆದಾರರು ಹಾಗೂ ಮನೆ ಮಾಲೀಕ ನಡುವೆ ಹಣಕಾಸು ವಿಚಾರದ ಮನಸ್ತಾಪಗಳ ಬಗ್ಗೆ ಮಾಹಿತಿ ನಡಿದ್ದಾರೆ. ಬೆಂಗಳೂರಿನಲ್ಲಿ ಒಂದು ಮನೆಯಿಂದ ಇನ್ನೊಂದು ಮನೆಗೆ ಶಿಫ್ಟ್‌ ಆಗುವ ಕಷ್ಟವನ್ನು ತಿಳಿಸಿದ್ದಾರೆ. ತನ್ನ ಮನೆ ಮಾಲೀಕರು ಮನೆಗಾಗಿ ನೀಡಿದ್ದ 1.5 ಲಕ್ಷ ರೂ. ಭದ್ರತಾ ಠೇವಣಿಯಲ್ಲಿ ಭಾರೀ ಹಣವನ್ನು ಕಡಿತ ಮಾಡಿದ್ದರು ಎಂದಿದ್ದಾರೆ.

ಸರ್ಜಾಪುರ ರಸ್ತೆಯಲ್ಲಿನ 2ಬಿಎಚ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ಎರಡು ವರ್ಷಗಳ ಕಾಲ ವಾಸವಿದ್ದೆ. ಆ ಬಳಿಕ ದೊಡ್ಡ ನಿವಾಸಕ್ಕೆ ತಾವು ಶಿಫ್ಟ್‌ ಆಗಿದ್ದಾಗಿ ತಿಳಿಸಿದ್ದಾರೆ. ಆದರೆ, ಬಾಡಿಗೆ ಮನೆಯಲ್ಲಿದ್ದಷ್ಟು ವರ್ಷಗಳ ಕಾಲ ತಾವು ಎಂದಿಗೂ ನೇರವಾಗಿ ಮನೆಯ ಮಾಲೀಕರೊಂದಿಗೆ ಮಾತನಾಡಿಯೇ ಇದ್ದಿರಲಿಲ್ಲ ಎಂದಿದ್ದಾರೆ. 'ನಾನು ಮನೆಯ ಒಳಗೆ ಹೊಕ್ಕ ನಂತರ ಹಾಗೂ ಎರಡು ವರ್ಷಗಳ ಕಾಲ ಅವರೊಂದಿಗೆ ನಾನು ನೇರವಾಗಿ ಮಾತನಾಡಿಯೇ ಇಲ್ಲ. ಏನು ಕಾರಣವಿರಬಹುದು? ಆಕೆಗೆ ಕೇವಲ ಕನ್ನಡ ಮಾತ್ರವೇ ಬರುತ್ತಿತ್ತು' ಎಂದಿದ್ದಾರೆ. ಎರಡು ವರ್ಷಗಳ ಕಾಲ ನಮ್ಮ ನಡುವಿನ ಸಂವಹನವನ್ನು ಮಾಡಿದ್ದು ಬಿಲ್ಡಿಂಗ್‌ನ ಮ್ಯಾನೇಜರ್‌ ಎಂದು ಶ್ರವಣ್‌ ಬರೆದುಕೊಂಡಿದ್ದಾರೆ.

ಮನೆ ಮಾಲೀಕರು ಈ ಹಿಂದೆ ಇದೇ ರೀತಿಯ ವಿಷಯಗಳಲ್ಲಿ ಬಾಡಿಗೆದಾರರನ್ನು ಕಿರುಕುಳ ನೀಡುತ್ತಿದ್ದರು ಎಂಬ "ವದಂತಿಗಳನ್ನು" ಕೇಳಿದ್ದೆ. ಆದರೆ, ಇದಕ್ಕೆ ನಾನು ಮಾನಸಿಕವಾಗಿ ನಾನು ಸಿದ್ಧವಾಗಿಯೂ ಇದೆ. ಈ ಎಚ್ಚರಿಕೆಯ ಹೊರತಾಗಿಯೂ, ಮುಂಗಡ ಹಣ ವಾಪಾಸ್‌ ಕೊಟ್ಟಿದ್ದ ರೀತಿ ನನಗೆ ದಿಗ್ಭ್ರಮೆ ತಂದಿತ್ತು ಎಂದಿದ್ದಾರೆ.

'ಕೊನೆಯಲ್ಲಿ ನನಗಾಗಿ ಒಂದು ಏಟು ಕಾದಿತ್ತು. ಪೇಟಿಂಗ್‌ ಚಾರ್ಜ್‌ 55 ಸಾವಿರ, ಇತರ ವೆಚ್ಚಗಳು-25 ಸಾವಿರ' ಎಂದು ಶ್ರವಣ್‌ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಈ ವೆಚ್ಚಗಳ ವಿವರ ಹಾಗೂ ಬಿಲ್‌ ಕೇಳಿದಾಗ, ಮನೆ ಮಾಲೀಕರ ಪ್ರತಿಕ್ರಿಯೆ ಪಾರದರ್ಶಕವಾಗಿರಲಿಲ್ಲ ಎಂದಿದ್ದಾರೆ. ಇದ್ದ ಎರಡು ವರ್ಷಗಳಲ್ಲಿ ಮನೆಯ ಒಳಗೆ ಯಾವುದೇ ಹಾನಿ ಆಗಿರಲಿಲ್ಲ. ಅವರು ಹೇಳಿದ್ದ ಹಾನಿಗಳು ಅಸಂಬದ್ಧವಾಗಿದ್ದವು. ಲಿಫ್ಟ್‌ ಬಳಸಿದ್ದಕ್ಕಾಗಿ ನನಗೆ 2 ಸಾವಿರ ರೂಪಾಯಿ ಶುಲ್ಕವನ್ನೂ ವಿಧಿಸಿದ್ದರು ಎಂದಿದ್ದಾರೆ.

ದೀರ್ಘಕಾಲದ ಚರ್ಚೆಗಳ ನಂತರ, ತನ್ನ 1.5 ಲಕ್ಷ ಠೇವಣಿಯಲ್ಲಿ ಕೇವಲ 68 ಸಾವಿರ ರೂಪಾಯಿ ಮಾತ್ರ ವಾಪಾಸ್‌ ಪಡೆದಿದ್ದೇನೆ ಎಂದು ಶ್ರವಣ್‌ ಹೇಳಿದ್ದಾರೆ. 'ಏನೆಲ್ಲಾ ಖರೀದಿ ಮಾಡಿದ್ದೀರಿ ಎನ್ನುವುದರ ಇನ್‌ವಾಯ್ಸ್‌ ನೀಡುವಂತೆ ಅವರಿಗೆ ತಿಳಿಸಿದ್ದೆ. ಆದರೆ, ಅದಕ್ಕಾಗಿ ಅವರು ನೀಡಿದ್ದ ಕೈಬರಹದ ಹಾಳೆ ಮಾತ್ರ. ಇದರಿಂದಾಗಿ ಕೊನೆಯಲ್ಲಿ ನನಗೆ ನನ್ನ ಠೇವಣಿಯ ಶೇ.40ರಷ್ಟು ಮಾತ್ರವೇ ವಾಪಾಸ್‌ ಸಿಕ್ಕಿತು' ಎಂದು ಹೇಳಿದ್ದಾರೆ.'

ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಸಂಪೂರ್ಣ ಶ್ರದ್ಧೆ ವಹಿಸದೇ ಇದ್ದದ್ದು ತಮ್ಮ ತಪ್ಪು ಎಂದೂ ಶ್ರವಣ್‌ ಹೇಳಿದ್ದಾರೆ. ಆದರೆ, ವಾಸ್ತವ ವಿಚಾರ ಏನೆಂದರೆ ಬೆಂಗಳೂರಿನಲ್ಲಿ ಮನೆ ಮಾಲೀಕರ ಜೊತೆ ವ್ಯವಹಾರ ಮಾಡುವುದು ಅತ್ಯಂತ ನಿರಾಸೆ ತರುವ ವಿಚಾರ ಎಂದಿದ್ದಾರೆ. ಎಲ್ಲಾ ಮನೆ ಮಾಲೀಕರು ಹೀಗೇ ಇದ್ದಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ನಿಮ್ಮ ಸ್ನೇಹಿತರು ಹಠಾತ್ ಬಾಡಿಗೆ ಹೆಚ್ಚಳ, ತಡೆಹಿಡಿಯಲಾದ ಠೇವಣಿಗಳು ಮತ್ತು ಇನ್ನೂ ಹೆಚ್ಚಿನವುಗಳೊಂದಿಗೆ ಹೋರಾಡುತ್ತಿರುವುದನ್ನು ನೀವು ಕೇಳಿದಾಗ... ನಿಮಗೆ ಇದರ ಅರಿವಾಗಲಿದೆ. ಭಾರತದ ಭವಿಷ್ಯದ ನಗರವೆಂದು ತೋರುವ ಬೆಂಗಳೂರಿನಲ್ಲಿ ಜೀವನವನ್ನು ಕಟ್ಟಲು ತಮ್ಮ ಊರುಗಳನ್ನು ತೊರೆದವರಿಗೆ ಉತ್ತಮ ರಕ್ಷಣೆ ಮತ್ತು ಬೆಂಬಲ ಇರಬೇಕು." ಎಂದು ಬರೆದಿದ್ದಾರೆ.

"ಬದಲಾವಣೆ ಬರಲಿ ಎಂದು ನಾನು ಭಾವಿಸುತ್ತೇನೆ. ಸಹಾಯ ಸಿಗಲಿ ಎಂದು ನಾನು ಭಾವಿಸುತ್ತೇನೆ. ಮತ್ತು ಇದರ ಬಗ್ಗೆ ಏನಾದರೂ ಮಾಡಬಲ್ಲ ಜನರನ್ನು ಇದು ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಬೆಂಗಳೂರಿನ ಭೂಮಾಲೀಕರು ಬೆದರಿಕೆಯಾಗಿ ಪರಿಣಮಿಸುತ್ತಿದ್ದಾರೆ" ಎಂಬ ಬಲವಾದ ಮನವಿಯೊಂದಿಗೆ ಅವರು ತಮ್ಮ ಪೋಸ್ಟ್ ಅನ್ನು ಮುಗಿಸಿದ್ದಾರೆ.

ಈ ಪೋಸ್ಟ್‌ ಆನ್‌ಲೈನ್‌ನಲ್ಲಿ ಸಾವಿರಾರು ಯೂಸರ್‌ಗಳನ್ನು ಆಕರ್ಷಿಸಿದೆ. ಅವರಲ್ಲಿ ಹೆಚ್ಚಿನವರು ಭಾರತೀಯ ನಗರಗಳಲ್ಲಿ ಮನೆ ಮಾಲೀಕರೊಂದಿಗೆ ತಾವು ನಡೆಸಿದ್ದ ಹೋರಾಟವನ್ನು ಕಾಮೆಂಟ್‌ ಬಾಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

'ಕೇವಲ ಬೆಂಗಳೂರು ಮಾತ್ರವಲ್ಲ. ಚೆನ್ನೈನಲ್ಲಿ ನಾನಿದ್ದ ಬಾಡಿಗೆ ಮನೆಯ ಮಾಲೀಕರೊಂದಿಗೂ ನನಗೆ ಇದೇ ರೀತಿಯ ಹಗರಣವಾಗಿತ್ತು. ಮೆಟ್ರೋ ನಗರಗಳಲ್ಲಿ ಬಾಡಿಗೆ ಆದಾಯವು ರಿಯಲ್ ಎಸ್ಟೇಟ್ ಆದಾಯದ 50% ರಷ್ಟಿದ್ದರೂ, ಬಾಡಿಗೆದಾರರಿಗೆ ನ್ಯಾಯಯುತ ವೇದಿಕೆಯನ್ನು ಸೃಷ್ಟಿಸುವ ಯಾವುದೇ ನಿಯಮಗಳು ಭಾರತದಲ್ಲಿ ಇಲ್ಲ," ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

"ಬೆಂಗಳೂರಿನವರು ಶ್ರೇಷ್ಠರು, ಆದರೆ ಬೆಂಗಳೂರಿನ ಮನೆ ಮಾಲೀಕರು ಖಳನಾಯಕರು. ಅದೇ ಕಥೆ, ನನ್ನ ಠೇವಣಿ 4 ಲಕ್ಷ ರೂ., ನಾನು ಬೆವರು ಸುರಿಸಿ ಹಣವನ್ನು ವಾಪಸ್ ಕೇಳಲು ಹೆದರುತ್ತಿದ್ದೆ. ಕೊನೆಗೆ ನನ್ನ ಠೇವಣಿ ಹಣದಲ್ಲಿ 1 ಲಕ್ಷ ಕಟ್‌ ಮಾಡಿಕೊಂಡರು. ಈ ರೀತಿಯ ನಡವಳಿಕೆಯನ್ನು ನೋಡುವುದು ತುಂಬಾ ನೋವುಂಟುಮಾಡುತ್ತದೆ' ಎಂದು ಬರೆದಿದ್ದಾರೆ.

ಮೂರನೇ ಯೂಸರ್‌ ಒಬ್ಬರು ನೇರವಾಗಿ ಟಿಕೂ ಅವರನ್ನು ಉದ್ದೇಶಿಸಿ, "ಸಂಪೂರ್ಣವಾಗಿ ಒಪ್ಪುತ್ತೇನೆ, ಶ್ರವಣ್ ಟಿಕೂ! ಬೆಂಗಳೂರಿನಲ್ಲಿ ನನ್ನ ಮೊದಲ ಮನೆ ಮಾಲೀಕರು ಇದೇ ರೀತಿಯ ಕೆಲಸವನ್ನು ಮಾಡಿದ್ದರು ಎಂದು ನನಗೆ ನೆನಪಿದೆ. ಅವರು ನಮ್ಮ ಠೇವಣಿಯ 50% ಕಡಿತಗೊಳಿಸಿದ್ದರು! ಆಗ, ನನಗೆ ಇದಕ್ಕಿಂತ ಉತ್ತಮವಾದದ್ದೇನೂ ತಿಳಿದಿರಲಿಲ್ಲ. ಇತರ ಸ್ಥಳಗಳಲ್ಲಿ ವಾಸಿಸುವುದು ನನಗೆ ಹೆಚ್ಚು ಶ್ರದ್ಧೆಯಿಂದ ಇರಲು ಕಲಿಸಿದೆ. ಆದರೆ ಆ ಅನುಭವವು ಯಾವಾಗಲೂ ನನ್ನ ಮನಸ್ಸಿನಲ್ಲಿ ಎಚ್ಚರಿಕೆಯ ಕಥೆಯಾಗಿಯೇ ಉಳಿದಿದೆ" ಎಂದು ಹೇಳಿದರು.