Asianet Suvarna News Asianet Suvarna News

Bengaluru: ಐಟಿ ಉದ್ಯೋಗಿಗಳೇ ಬೀದಿ ನಾಯಿಗಳ ಕಾಟದಿಂದ ಎಚ್ಚರ

ಬೆಂಗಳೂರಿನ ಐಟಿ ಟೆಕ್‌ ಕಾರಿಡಾರ್‌ ಪ್ರದೇಶಗಳಾದ ಹಾಗೂ ಗ್ರಾಮೀಣ ಪ್ರದೇಶದ ಕಾರಿಡಾರ್‌ಗಳನ್ನು ಹೊಂದಿದ ಬೊಮ್ಮನಹಳ್ಳಿ, ಮಹದೇವಪುರ ಮತ್ತು ಆರ್.ಆರ್.ನಗರ ವಲಯಗಳಲ್ಲಿ ನಾಯಿಗಳ ದಾಳಿ ಮತ್ತು ಕಡಿತ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೇಳಿದೆ.

Bengaluru IT employees beware of stray dog Attack sat
Author
First Published Dec 8, 2022, 11:17 AM IST

ಬೆಂಗಳೂರು (ಡಿ.8): ಸಿಲಿಕಾನ್‌ ಸಿಟಿ ಬೆಂಗಳೂರಿನ ಐಟಿ ಟೆಕ್‌ ಕಾರಿಡಾರ್‌ ಪ್ರದೇಶಗಳಾದ ಹಾಗೂ ಗ್ರಾಮೀಣ ಪ್ರದೇಶದ ಕಾರಿಡಾರ್‌ಗಳನ್ನು ಹೊಂದಿದ ಬೊಮ್ಮನಹಳ್ಳಿ, ಮಹದೇವಪುರ ಮತ್ತು ಆರ್.ಆರ್.ನಗರ ವಲಯಗಳಲ್ಲಿ ನಾಯಿಗಳ ದಾಳಿ ಮತ್ತು ಕಡಿತ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1.3 ಕೋಟಿಗೂ ಅಧಿಕ ಜನಸಂಖ್ಯೆ (Population) ಇದ್ದು, ದಿನದ 24 ಗಂಟೆಗೂ ಕಾರ್ಯನಿರ್ವಹಿಸುವ ಸ್ಥಳವಾಗಿದೆ. ಇಲ್ಲಿ ಹಗಲು-ರಾತ್ರಿ (Day-night) ಎನ್ನದೇ ಕೆಲಸ ಮಾಡುವ ವರ್ಗಗಳು ತಮ್ಮ ಕಾರ್ಯವನ್ನು ಪ್ರತಿನಿತ್ಯ ನಿರ್ವಹಿಸುತ್ತಿವೆ. ಆದರೆ, ತಡರಾತ್ರಿಯ ವೇಳೆ ಕೆಲಸಕ್ಕೆ ಹೋಗುವುದು ಹಾಗೂ ಕೆಲಸದಿಂದ ಮನೆಗೆ ಹಿಂದಿರುಗುವಾಗ ನಿರ್ಜನ ಪ್ರದೇಶಗಳಲ್ಲಿ ಬೀದಿ ನಾಯಿಗಳು ವಾಹನಗಳನ್ನು ಅಟ್ಟಾಡಿಸಿಕೊಂಡು ಬಂದು ಕಚ್ಚಲು (bite) ಆಕ್ರಮಣ ಮಾಡುವ ಘಟನೆಗಳು ನಡೆಯುತ್ತಿವೆ.  ಈ ಘಟನೆಗಳು ಅನೇಕ ಉದ್ಯೋಗಸ್ಥರು (Employees) ತೊಂದರೆ ಅನುಭವಿಸುತ್ತಿದ್ದಾರೆ.

ಅಪಘಾತ ಪ್ರಕರಣಗಳು ಅಧಿಕ: ಬೀದಿ ನಾಯಿಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಮುಂದಾಗುವಾಗ ದ್ವಿಚಕ್ರ ವಾಹನ (Bike Riders) ಸವಾರರು ಅಪಘಾತಕ್ಕೀಡಾಗುವ ಘಟನೆಗಳು ವರದಿಯಾಗುತ್ತಿವೆ. ಅಂತಹ ಸಂದರ್ಭಗಳಲ್ಲಿ ವಾಹನ ಸವಾರರು ನಾಯಿಗಳ ಕಡಿತಕ್ಕೆ ಒಳಗಾಗುವ ಹಾಗೂ ಅಪಘಾತಗೊಳ್ಳುವ ಪ್ರಕರಣ ಹೆಚ್ಚಾಗುತ್ತಿವೆ ಎಂದು ತಿಳಿದುಬಂದಿದೆ. ಅದರಲ್ಲಿಯೂ ಐಟಿ ಕಾರಿಡಾರ್‌ ಪ್ರದೇಶಗಳಾದ ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯಗಳಲ್ಲಿ ಈ ಪ್ರಕರಣ ಅಧಿಕವಾಗಿವೆ ಎನ್ನುವುದು ಐಟಿ ಉದ್ಯೋಗಿಗಳನ್ನು ತೀವ್ರ ಆತಂಕಕ್ಕೆ ದೂಡುತ್ತಿದೆ. ಪ್ರತಿನಿತ್ಯ ಎರಡನೇ ಶಿಫ್ಟ್‌ ಮುಗಿಸಿಕೊಂಡು ಬರುವವರು ಹಾಗೂ ರಾತ್ರಿ ಪಾಳಿಗೆ ಕೆಲಸಕ್ಕೆ ಹೋಗುವವರು ಮನೆಗೆ ಬಂದಾಕ್ಷಣ ನಿಟ್ಟುಸಿರು ಬಿಡುತ್ತಿದ್ದಾರೆ.

ಬೀದಿನಾಯಿ ದಾಳಿ ಮಾಡಿದರೆ ಆಹಾರ ನೀಡುವವರೇ ಹೊಣೆ: ಸುಪ್ರೀಂಕೋರ್ಟ್‌

1.5 ಲಕ್ಷ ಬೀದಿ ನಾಯಿಗಳು ವಾಸ: ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಪಶುಸಂಗೋಪನಾ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ಪಿ.ರವಿಕುಮಾರ್ ಮಾತನಾಡಿ, ಹಲವು ಪ್ರದೇಶಗಳಲ್ಲಿ ಬೀದಿನಾಯಿಗಳ ಆಕ್ರಮಣ ಆತಂಕಕಾರಿ ಅಂಶವಾಗಿದ್ದರೂ, 2019ರ ನಂತರದಲ್ಲಿ ಬೀದಿ ನಾಯಿ ಕಡಿತದ ಪ್ರಕರಣಗಳು ಶೇ.60 ರಷ್ಟು ಕಡಿಮೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. 2018ರ ನಂತರದಿಂದ ಬಿಬಿಎಂಪಿ ಬೀದಿ ನಾಯಿಗಳಿಗೆ ಆಂಟಿ ರೇಬೀಸ್ ಲಸಿಕೆ (ARV) ಹಾಗೂ ಪ್ರಾಣಿಗಳ ಜನನ ನಿಯಂತ್ರಣವನ್ನು (ಎಬಿಸಿ) ತೀವ್ರಗೊಳಿಸಿದೆ. ಈವರೆಗೆ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳಿದ್ದು, ಈಗ ನಗರದ ಬೀದಿನಾಯಿಗಳ ಸಂಖ್ಯೆ 1.5 ಲಕ್ಷಕ್ಕೆ ಇಳಿಕೆಯಾಗಿದೆ. ಇನ್ನು ಸಾಕು ನಾಯಿಗಳ ಸಂಖ್ಯೆಯೂ ಸುಮಾರು 1.5 ಲಕ್ಷ ಆಗಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶ ಗಡಿಗಳಲ್ಲಿ ನಾಯಿಗಳ ಹಾವಳಿ: ಬಿಬಿಎಂಪಿ ವ್ಯಾಪ್ತಿಗೆ ಹೊಂದಿಕೊಂಡಿರುವ ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಗ್ರಾಮ ಪಂಚಾಯಿತಿ ಗಡಿಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲಿ ಎಆರ್ ವಿ ಮತ್ತು ಎಬಿಸಿ ಮಾಡದ ಕಾರಣ ನಾಯಿಗಳ ದಾಳಿ ಹೆಚ್ಚಾಗುತ್ತಿವೆ. ಈ ನಾಯಿಗಳು ಕೆಲವು ವೇಳೆ ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯಗಳ ಆವರಣದೊಳಗೆ ಬರುತ್ತವೆ. ಆಗ ನಾಯಿ ದಾಳಿಗೆ ಒಳಗಾಗುವ ಸಾರ್ವಜನಿಕರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಗ್ರಾಮೀಣ ಪ್ರದೇಶಗಳು ಹತ್ತಿರವಿರುವ ಬಿಬಿಎಂಪಿ ವಲಯಗಳಾದ ದಕ್ಷಿಣ, ಮಹದೇವಪುರ, ಆರ್.ಆರ್. ನಗರ ಮತ್ತು ಬೊಮ್ಮನಹಳ್ಳಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚು ಎಂದು ಪಾಲಿಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಿತ್ಯ ಸರಾಸರಿ 70 ಜನರಿಗೆ ಬೀದಿ ನಾಯಿ ಕಡಿತ!

ಮಾಸಿಕ 50 ನಾಯಿಗಳ ಕಡಿತ ದೂರು: ನಗರದ ವಿವಿಧ ಪ್ರದೇಶಗಳಿಂದ ಪ್ರತಿ ತಿಂಗಳು ಸರಾಸರಿ 40-50 ಬೀದಿನಾಯಿ ಕಚ್ಚುವಿಕೆ ದೂರುಗಳನ್ನು ಸ್ವೀಕರಿಸುತ್ತೇವೆ. ದಕ್ಷಿಣ, ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯಗಳ ವ್ಯಾಪ್ತಿಯಲ್ಲಿ ಬಿಬಿಎಂಪಿ ನೀತಿಗಳು ಮತ್ತು ಉಪಕ್ರಮಗಳಿಗೆ ಒಳಪಡದ ಗ್ರಾಮ ಪಂಚಾಯಿತಿಗಳೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಪ್ರದೇಶದಲ್ಲಿ ನಾಯಿ ಕಡಿತ ಪ್ರಕರಣ ಹೆಚ್ಚಾಗಿವೆ. 2022 ರಲ್ಲಿ, ಏಪ್ರಿಲ್ ನಿಂದ ಇಲ್ಲಿಯವರೆಗೆ, ಪಾಲಿಕೆಯ ಪಶು ಸಂಗೋಪನಾ ಇಲಾಖೆಯಿಂದ 52,635 ಬೀದಿ ನಾಯಿಗಳಿಗೆ ಲಸಿಕೆ ಹಾಕಲಾಗಿದೆ. ಬಿಬಿಎಂಪಿಯ ನಾಯಿಗಳ ಗಣತಿ ಸಮೀಕ್ಷೆಯ ಪ್ರಕಾರ, ಆರ್‌.ಆರ್‌.ನಗರದಲ್ಲಿ ಅತಿ ಹೆಚ್ಚು ಬೀದಿ ನಾಯಿಗಳು 52,968 ಹಾಗೂ ಮಹದೇವಪುರ ವಲಯದಲ್ಲಿ 46,333 ನಾಯಿಗಳಿವೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

Follow Us:
Download App:
  • android
  • ios