ಬೆಂಗಳೂರಿನಲ್ಲಿ ಅಕ್ರಮ ಭೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ 50.26 ಕೋಟಿ ಮೌಲ್ಯದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.\
ಬೆಂಗಳೂರು (ಜು.12): ರಾಜಧಾನಿಯಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಚರಣೆ ಮುಂದುವರಿದಿದೆ. ಶುಕ್ರವಾರ ಒಂದೇ ದಿನ 50.26 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸಲಾಗಿದೆ. ನಗರದಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಕಟ್ಟೆ, ಗೋಮಾಳ, ಬಂಡಿದಾರಿ, ಸ್ಮಶಾನ, ಕಾಲುದಾರಿ, ಸರ್ಕಾರಿ ಒಣಿ, ಖರಾಬು, ಗುಂಡುತೋಪು, ಹುಲ್ಲುಬನ್ನಿ, ಕೆರೆ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಮಾಡಲಾಗಿದೆ.
ಎಲ್ಲಿಲ್ಲಿ ಒತ್ತುವರಿ ತೆರವು?: ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್.ಪುರ ಹೋಬಳಿಯ ಕುಂದಲಹಳ್ಳಿ ಗ್ರಾಮದ ಸ.ನಂ. 17ರ ಸರ್ಕಾರಿ ಕಟ್ಟೆ ತೆರವು ಮಾಡಲಾಗಿದೆ.ಅಂದಾಜು 6 ಕೋಟಿ ಮೌಲ್ಯದ ಒಟ್ಟು 0-20 ಗುಂಟೆ ಜಾಗ ಒತ್ತುವರಿ ಮಾಡಿಕೊಳ್ಳಲಾಗಿತ್ತು. ಅದರೊಂದಿಗೆ ಬಿದರಹಳ್ಳಿ ಹೋಬಳಿಯ ಯರ್ರಪ್ಪನಹಳ್ಳಿ ಗ್ರಾಮದ ಸ.ನಂ. 71 ರಲ್ಲಿ ಅಂದಾಜು 1 ಕೋಟಿ ಮೌಲ್ಯದ 0-10 ಗುಂಟೆ ಜಮೀನು ಒತ್ತುವರಿ ತೆರವುಗೊಳಿಸಲಾಗಿದೆ.
ಬಿದರಹಳ್ಳಿ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದ ಸ.ನಂ. 114 ರ ಬಂಡಿದಾರಿ ಒತ್ತುವರಿ ತೆರವು ಮಾಡಲಾಗಿದೆ. ಅಂದಾಜು 0.50 ಲಕ್ಷದ 0-02 ಗುಂಟೆ ಜಮೀನು ಒತ್ತುವರಿ ಆಗಿತ್ತು.
ಅದರೊಂದಿಗೆ ಆನೇಕಲ್ ತಾಲೂಕಿನ ಕಸಬಾ-1 ಹೋಬಳಿಯ ತೆಲಗರಹಳ್ಳಿ ಗ್ರಾಮದ ಸ.ನಂ 34 ರ ಸ್ಮಶಾನ ತೆರವು ಮಾಡಲಾಗಿದೆ. ವಿಸ್ತೀರ್ಣ 0.25 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.30 ಲಕ್ಷಗಳಾಗಿರುತ್ತದೆ. ಅತ್ತಿಬೆಲೆ-2 ಹೋಬಳಿಯ ಚಂದಾಪುರ ಗ್ರಾಮದ ಕಾಲುವೆ ಕಾಲುದಾರಿ ಒಟ್ಟು ಒತ್ತುವರಿ ತೆರವುಗೊಳಿಸಲಾಗಿದ್ದು, ಇದರ ವಿಸ್ತೀರ್ಣ 0.06 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.20 ಲಕ್ಷಗಳಾಗಿರುತ್ತದೆ.
ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ತಗಚಗುಪ್ಪೆ ಸ.ನಂ 31/1, 31/2 ರ ಸರ್ಕಾರಿ ಒಣಿ ಒಟ್ಟು ಒತ್ತುವರಿ ತೆರವು ಮಾಡಲಾಗಿದೆ. ಇದರ ವಿಸ್ತೀರ್ಣ 0.26 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.90 ಲಕ್ಷಗಳಾಗಿರುತ್ತದೆ. ತಾವರೆಕೆರೆ ಹೋಬಳಿಯ ಅಜ್ಜನಹಳ್ಳಿ ಗ್ರಾಮದ ಸ.ನಂ 26 ರ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಲಾಗಿದೆ. ವಿಸ್ತೀರ್ಣ 0.31 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 1.19 ಕೋಟಿಗಳಾಗಿರುತ್ತದೆ.
ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದ ಸ.ನಂ 32ರ ಗುಂಡುತೋಪು ಒತ್ತುವರಿ ತೆರವು ಮಾಡಲಾಗಿದೆ. ವಿಸ್ತೀರ್ಣ 0.10 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.80 ಲಕ್ಷಗಳಾಗಿರುತ್ತದೆ. ದಾಸನಪುರ ಹೋಬಳಿಯ ಬೆಟ್ಟಹಳ್ಳಿ ಗ್ರಾಮದ ಸ.ನಂ 17 ರ ಹುಲ್ಲುಬನ್ನಿ ಒಟ್ಟು ಒತ್ತುವರಿ ತೆರವು ಮಾಡಲಾಗಿದೆ. ವಿಸ್ತೀರ್ಣ 1 ಎಕರೆಯಾಗಿದ್ದು, ಅಂದಾಜು ಮೌಲ್ಯ ರೂ 3.00 ಕೋಟಿಗಳಾಗಿರುತ್ತದೆ.
ಯಶವಂತಪುರ ಹೋಬಳಿಯ ಮತ್ತಹಳ್ಳಿ ಗ್ರಾಮದ ಸ.ನಂ 42ರ ಗೋಮಾಳ ಒಟ್ಟು ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇದರ ವಿಸ್ತೀರ್ಣ 1 ಎಕರೆ 0.10 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 3.15 ಕೋಟಿಗಳಾಗಿರುತ್ತದೆ.
ಯಲಹಂಕ ತಾಲೂಕಿನ ಹೆಸರಘಟ್ಟ-2 ಹೋಬಳಿಯ ಕಾಕೋಳು ಗ್ರಾಮದ ಸ.ನಂ 44 ರ ಕರೆ ಒಟ್ಟು ಒತ್ತುವರಿ ತೆರವು ಮಾಡಲಾಗಿದೆ. ವಿಸ್ತೀರ್ಣ 11 ಎಕರೆ 0.22 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 33.22 ಕೋಟಿಗಳಾಗಿರುತ್ತದೆ.
