ಬೆಂಗಳೂರಿನ ಬೀದಿ ನಾಯಿಗಳಿಗೆ ದಿನನಿತ್ಯ ಚಿಕನ್ ಬಿರಿಯಾನಿ ಒದಗಿಸಲು ಬಿಬಿಎಂಪಿ 2.80 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದೆ. 5000 ನಾಯಿಗಳಿಗೆ 367 ಗ್ರಾಂ ಚಿಕನ್ ರೈಸ್ ನೀಡಲಾಗುವ ಈ ಯೋಜನೆ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು (ಜು. 10): ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇದೀಗ ದೇಶದಲ್ಲೇ ಮೊದಲ ಬಾರಿಗೆ ಬೀದಿ ನಾಯಿಗಳಿಗೆ ದಿನನಿತ್ಯ ಬಾಡೂಟ ಒದಗಿಸಲು ಮುಂದಾಗಿದ್ದು, ಈ ಬಗ್ಗೆ ಸ್ಪಷ್ಟ ಯೋಜನೆಯೊಂದಿಗೆ ಟೆಂಡರ್ ಕೂಡ ಕರೆದಿದೆ. ಜನತೆಗೆ ಸಮರ್ಪಕ ಮೂಲಸೌಕರ್ಯಗಳಾದ ರಸ್ತೆ, ಆಹಾರ, ನೀರು, ವಸತಿ ವ್ಯವಸ್ಥೆ ಕಲ್ಪಿಸದಿದ್ದರೂ, ಬೀದಿ ನಾಯಿಗಳಿಗೆ ಪ್ರತಿದಿನ ಹೊಟ್ಟೆತುಂಬಾ ಚಿಕನ್ ಬಿರಿಯಾನಿ ನೀಡಲು ಬಿಬಿಎಂಪಿ 2.80 ಕೋಟಿ ರೂ. ವೆಚ್ಚದ ಯೋಜನೆ ಜಾರಿಗೆ ತರುವತ್ತ ಹೆಜ್ಜೆ ಹಾಕಿದೆ.
ಪಾಲಿಕೆ ತಯಾರಿಸಿರುವ ಆಹಾರ ತಯಾರಿ ಪ್ಯಾಕೇಜು ಈ ಕೆಳಗಿನಂತಿದೆ:
- ಪ್ರತಿನಾಯಿಗೆ ಪ್ರತಿದಿನ 367 ಗ್ರಾಂ ಚಿಕನ್ ರೈಸ್ ಪೂರೈಕೆ
- ಪ್ರತಿ ನಾಯಿಗೆ ಆಹಾರದ ಮೇಲೆ ರೂ. 22.42 ವೆಚ್ಚ ಮಾಡಲು ಮುಂದಾಗಿದೆ.
- ಒಂದು ನಾಯಿಗೆ ದಿನಕ್ಕೆ 750 ಕ್ಯಾಲೊರಿ ಪೂರೈಸುವ ತಜ್ಞರ ಸಮತೋಲನದ ಮೆನು:
- 100 ಗ್ರಾಂ ರೈಸ್ (ಕಾರ್ಬೋಹೈಡ್ರೇಟ್‌ಗಾಗಿ)
- 150 ಗ್ರಾಂ ಚಿಕನ್ (ಪ್ರೋಟೀನ್‌ಗಾಗಿ)
- 10 ಗ್ರಾಂ ಎಣ್ಣೆ (ಕೊಬ್ಬಿಗಾಗಿ)
- 100 ಗ್ರಾಂ ತರಕಾರಿ (ವಿಟಮಿನ್‌ಗಾಗಿ)
- 5 ಗ್ರಾಂ ಉಪ್ಪು ಹಾಗೂ 2.5 ಗ್ರಾಂ ಅರಿಶಿಣ
ಬಿಬಿಎಂಪಿಯ 8 ವಲಯಗಳಲ್ಲಿ ನಿತ್ಯ ಬಾಡೂಟ:
- ಬೆಂಗಳೂರು ನಗರದ ಬಿಬಿಎಂಪಿ 8 ವಲಯಗಳಲ್ಲಿ ಪ್ರತಿದಿನ 600 ರಿಂದ 700 ನಾಯಿಗಳಿಗೆ ಊಟ ನೀಡಲಾಗುತ್ತದೆ.
- ಒಟ್ಟು 5,000 ನಾಯಿಗಳಿಗೆ ಮಾತ್ರ ಪ್ರಸ್ತುತ ಯೋಜನೆ ಜಾರಿ ಆಗಲಿದೆ.
- ಆರಂಭದಲ್ಲಿ 125 ಸ್ಥಳಗಳನ್ನು ಗುರುತಿಸಿ, ಅಲ್ಲಿಯೇ ಆಹಾರ ಪೂರೈಕೆ.
- ಇದಕ್ಕಾಗಿ ಖಾಸಗಿ ಸಂಸ್ಥೆಗೆ ಟೆಂಡರ್ ಕರೆದ ಬಿಬಿಎಂಪಿ.
- ಈ ಸಂಸ್ಥೆ ಎಲ್ಲಾ 125 ಸ್ಥಳಗಳಲ್ಲಿ ನಿತ್ಯ ಆಹಾರ ಪೂರೈಕೆ ಮಾಡಬೇಕಾಗುತ್ತದೆ.
ನಗರದಲ್ಲಿವೆ 2.80 ಲಕ್ಷ ಬೀದಿ ನಾಯಿಗಳು – 5000ಕ್ಕೆೆ ಮಾತ್ರ ಬಾಡೂಟ:
ಬೆಂಗಳೂರು ನಗರದಲ್ಲಿ ಒಟ್ಟು 2.80 ಲಕ್ಷ ಬೀದಿ ನಾಯಿಗಳಿದ್ದು, ಈ ಯೋಜನೆಯು ಕೇವಲ 5,000 ನಾಯಿಗಳಿಗೆ ಮಾತ್ರ ಲಭ್ಯವಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ, ಯೋಜನೆಯ ವ್ಯಾಪ್ತಿ ಮತ್ತು ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆ ಎದ್ದಿದೆ. ಬಿಬಿಎಂಪಿಯ ಈ ಬಾಡೂಟ ಯೋಜನೆ ಮಾನವೀಯತೆಯ ವಿಶಿಷ್ಟ ಪ್ರಯೋಗವೋ ಅಥವಾ ತೆರಿಗೆದಾರರ ಹಣದ ದುರುಪಯೋಗವೋ ಎಂಬ ಚರ್ಚೆಗೆ ದಾರಿ ಹಾಕಿದೆ. ಬಿಬಿಎಂಪಿಯ ಈ ನಿರ್ಧಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಹಲವು ಸಂಘಟನೆಗಳು ಹಾಗೂ ನಾಗರಿಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. 'ಜನರ ಹೊಟ್ಟೆಗೆ ಹಿಟ್ಟಿಲ್ಲ, ನಾಯಿಗಳಿಗೆ ಚಿಕನ್ ಬಿರಿಯಾನಿ ಭಾಗ್ಯ' ಎಂದು ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.
