ನವದೆಹಲಿ [26]:  ಬೆಂಗಳೂರು ಮೆಟ್ರೋದ ಫೇಸ್‌ 2ಎ, 2ಬಿ ಮತ್ತು ಫೇಸ್‌2ರ ರೀಚ್‌6ರ ಅನುಮೋದನೆಗಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್‌ ಸಿಂಗ್‌ಪುರಿ ಅವರನ್ನು ಭೇಟಿಯಾಗಿ ಸಮಾಲೋಚಿಸಿದರು. ಸಚಿವರೊಂದಿಗಿನ ತಮ್ಮ 30 ನಿಮಿಷಗಳ ಭೇಟಿ ವೇಳೆ ಏರ್ಪೋರ್ಟ್‌ ಮಾರ್ಗದಿಂದ ಬೆಂಗಳೂರು ಮತ್ತು ಟೆಕಿಗಳಿಗೆ ಹೇಗೆ ಅನುಕೂಲ ಆಗುತ್ತದೆ ಎಂಬ ಕುರಿತು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

ಬೆಂಗಳೂರು ಮೆಟ್ರೋದ ಫೇಸ್‌ 2ಎ, 2ಬಿ ಮತ್ತು ಫೇಸ್‌2ರ ರೀಚ್‌ 6 ಬೆಂಗಳೂರಿನ ಪ್ರಮುಖ ತಂತ್ರಜ್ಞಾನ ಕೇಂದ್ರಗಳನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುತ್ತದೆ. ಬೆಂಗಳೂರಿನ ಹೆಚ್ಚಿನ ಸಾಫ್ಟ್‌ವೇರ್‌ ಉದ್ದಿಮೆಗಳು ಎಲೆಕ್ಟ್ರಾನಿಕ್‌ ಸಿಟಿ, ಸರ್ಜಾಪುರ, ಬೆಳ್ಳಂದೂರು, ವೈಟ್‌ಫೀಲ್ಡ್‌ ಮತ್ತು ಹೆಬ್ಬಾಳದಲ್ಲಿದ್ದ, ಈ ಪ್ರದೇಶಗಳಿಗೆ ಮೆಟ್ರೋ ಸಂಪರ್ಕವೇ ಇಲ್ಲ.

ಔಟರ್‌ ರಿಂಗ್‌ರೋಡ್‌ನಲ್ಲಿರುವ ಈ ಪ್ರದೇಶಗಳು ಬೆಂಗಳೂರಿನ ಐಟಿಯ ಶೇ.32ರಷ್ಟುಆದಾಯದ ಮೂಲವಾಗಿದೆ. ಈ 17 ಕಿ.ಮೀ. ಕಾರಿಡಾರ್‌ನಲ್ಲಿ 5.5 ಲಕ್ಷ ಉದ್ಯೋಗಿಗಳಿದ್ದಾರೆ. ಇಲ್ಲಿ ಸಂಚಾರ ದಟ್ಟಣೆಯ ಸಮಯದಲ್ಲಿ ವಾಹನಗಳ ಚಲನೆಯ ವೇಗ ಗಂಟೆಗೆ ಕೇವಲ 4 ಕಿ.ಮೀ. ಮಾತ್ರ ಇರುತ್ತದೆ ಎಂದು ತೇಜಸ್ವಿ ಸೂರ್ಯ ಸಚಿವರಿಗೆ ಮಾಹಿತಿ ನೀಡಿದರು.

ತೇಜಸ್ವಿ ಸೂರ್ಯ ಅವರ ಬೇಡಿಕೆಗೆ ಸ್ಪಂದಿಸಿರುವ ಹರ್ದೀಪ್‌ ಸಿಂಗ್‌ ಪುರಿ, ಯೋಜನೆ ಬಗ್ಗೆ ತಮ್ಮ ಸಚಿವಾಲಯ ಕೆಲ ಮಾಹಿತಿಯನ್ನು ರಾಜ್ಯ ಸರ್ಕಾರದಿಂದ ಕೇಳಿದ್ದು ರಾಜ್ಯ ಸರ್ಕಾರ ಅದನ್ನು ನೀಡಿದ ತಕ್ಷಣವೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಲಿಸಿ

ಏರ್ಪೋರ್ಟ್‌ಗೆ ಸಂಪರ್ಕ ಇಲ್ಲ:  ಸದ್ಯ ಬೆಂಗಳೂರಲ್ಲಿ 42 ಕಿ.ಮೀ.ಗಳ ಮೆಟ್ರೋ ಜಾಲವಿದ್ದು, ಗಂಟೆಗೆ 24,000 ಜನ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಆದರೆ ಇದು ನಗರದ ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿಲ್ಲ. ನಗರದಿಂದ 40 ಕಿ.ಮೀ. ದೂರದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕವೇ ಇಲ್ಲ. ಫೇಸ್‌2ಎ ಮತ್ತು 2ಬಿಯ ಮೆಟ್ರೋ ಬೆಂಗಳೂರಿನ ಎಲ್ಲ ಸಾಫ್ಟ್‌ವೇರ್‌ ಹಬ್‌ಗಳನ್ನು ಅಂದರೆ ನಗರದ ದಕ್ಷಿಣದಲ್ಲಿರುವ ಸೆಂಟ್ರಲ್‌ ಸಿಲ್‌್ಕ ಬೋರ್ಡನ್ನು ಉತ್ತರದಲ್ಲಿರುವ ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ. ಔಟರ್‌ರಿಂಗ್‌ ರೋಡ್‌ ಮತ್ತು ಏರ್‌ಪೋರ್ಟ್‌ ಲೈನ್‌ಗಳು ಒಟ್ಟು 51 ಕಿ.ಮೀ. ಉದ್ದವಿರಲಿದ್ದು 31 ನಿಲ್ದಾಣಗಳನ್ನು ಹೊಂದಿರಲಿದೆ. 2025ರ ಹೊತ್ತಿಗೆ 7.5 ಲಕ್ಷ ಪ್ರಯಾಣಿಕರನ್ನು ಇದು ಹೊಂದಲಿದೆ ಎಂದು ಸೂರ್ಯ ತಿಳಿಸಿದರು.

ಈ ಯೋಜನೆ ಬಗ್ಗೆ ಬಿಎಂಆರ್‌ಸಿಎಲ್‌ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಈಗಾಗಲೇ ಸಲ್ಲಿಸಿದೆ. ಕೇಂದ್ರ ಸಚಿವಾಲಯವು ರಾಜ್ಯ ಸರ್ಕಾರದಿಂದ ಕೆಲ ಮಾಹಿತಿ ಮತ್ತು ಭರವಸೆಗಳನ್ನು ಕೇಳಿದೆ. ಕರ್ನಾಟಕ ಸರ್ಕಾರ ಮತ್ತು ಬಿಎಂಆರ್‌ಸಿಎಲ್‌ ನಗರಾಭಿವೃದ್ಧಿ ಸಚಿವಾಲಯವು ರೂಪಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿದ್ದು, ಈ ಬಗೆಗಿನ ವಿವರವಾದ ಪ್ರತ್ಯುತ್ತರವನ್ನು ನ.10ರೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಭರವಸೆಯನ್ನು ತೇಜಸ್ವಿ ಸೂರ್ಯ ನೀಡಿದರು.

ಈ ಭೇಟಿ ವೇಳೆ ನಗರ ಸಾರಿಗೆ ನಿರ್ದೇಶಕರು ಮತ್ತು ಹಿರಿಯ ನಿರ್ದೇಶಕರು ಮತ್ತು ಕಾರ್ಯದರ್ಶಿಗಳನ್ನು ಕರೆಸಿಕೊಂಡಿದ್ದ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಅವರು ತೇಜಸ್ವಿ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ, ಚರ್ಚಿಸಲ್ಪಟ್ಟಅಂಶಗಳ ಬಗ್ಗೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನೂ ತೇಜಸ್ವಿಗೆ ನೀಡಿದರು. ಈ ಸಂದರ್ಭದಲ್ಲಿ ಮೆಟ್ರೋ ಯೋಜನೆಗೆ ಇನ್ನು ಮುಂದೆ ಯಾವುದೇ ಅಡೆತಡೆಗಳಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸಚಿವರಲ್ಲಿ ಸಂಸದ ಮನವಿ ಮಾಡಿದರು.