ಬಿಬಿಎಂಪಿ ಆಸ್ತಿ ತೆರಿಗೆ ಬಾಕಿದಾರರಿಗೆ ಬಡ್ಡಿ ಮನ್ನಾ ಮಾಡಿದರೂ ನಿರೀಕ್ಷಿತ ಗುರಿ ತಲುಪಿಲ್ಲ. ಹೀಗಾಗಿ, ಮುಂದಿನ ವರ್ಷ 5,600 ಕೋಟಿ ರೂ. ತೆರಿಗೆ ವಸೂಲಿಗೆ ಬಿಬಿಎಂಪಿ ಮುಂದಾಗಿದೆ. ಸುಸ್ತಿದಾರರ ಆಸ್ತಿ ಸೀಜ್ ಹಾಗೂ ಹರಾಜು ಹಾಕಲು ಕ್ರಮ ಕೈಗೊಳ್ಳಲಾಗುವುದು.

ಬೆಂಗಳೂರು: ಆಸ್ತಿ ತೆರಿಗೆ ಬಾಕಿದಾರರಿಗೆ ಬಡ್ಡಿ ಹಾಗೂ ದಂಡ ಮನ್ನಾ ಮಾಡುವ ಒನ್ ಟೈಮ್ ಸೆಟಲೈಂಟ್ (ಒಟಿಎಸ್) ಯೋಜನೆ ಜಾರಿಗೆ ತಂದರೂ ನಿಗದಿತ ₹5,210 ಕೋಟಿ ತಲುಪಲು ಸಾಧ್ಯವಾಗದ ಬಿಬಿಎಂಪಿ ಇದೀಗ ಮುಂದಿನ ಆರ್ಥಿಕ ವರ್ಷದಲ್ಲಿ 5,600 ಕೋಟಿ ಆಸ್ತಿ ತೆರಿಗೆ ವಸೂಲಿಗೆ ನಿರ್ಧರಿಸಿದೆ. ಒಟಿಎಸ್ ಯೋಜನೆಯಡಿ ಎರಡು ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರು ಇಂದಿಗೂ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ, ಹೀಗಾಗಿ ಪಾಲಿಕೆ ಆಸ್ತಿ ತೆರಿಗೆ ಸುಸ್ತಿದಾರರ ಸ್ಥಿರಾಸ್ತಿಗಳನ್ನು ಸೀಜ್ ಮಾಡುವ ಜೊತೆಗೆ ಹರಾಜು ಹಾಕಲು ಕ್ರಮ ಕೈಗೊಂಡಿದೆ. ಇಷ್ಟಾದರೂ ಬಿಬಿಎಂಪಿಯು 2024-25ನೇ ಸಾಲಿನಲ್ಲಿ 5.210 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲು ಸಾಧ್ಯವಾಗಿಲ್ಲ. ಆದರೆ ಮುಂಬರುವ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಹೆಚ್ಚುವರಿ 400 ಕೋಟಿ ಸೇರಿಸಿಕೊಂಡು 5,600 ಕೋಟಿ ಆಸ್ತಿ ತೆರಿಗೆ ವಸೂಲಿ ಗುರಿ ಹಾಕಿಕೊಳ್ಳುತ್ತಿದೆ. 

2025-26ನೇ ಸಾಲಿನ ಬಜೆಟ್‌ನಲ್ಲಿ ₹5,600 ಕೋಟಿ ಸಂಗ್ರಹಿಸಲು ಬೆಸ್ಕಾಂ ಮೂಲಕ ವಾಣಿಜ್ಯ ಕಟ್ಟಡಗಳ ಮಾಹಿತಿ ಪಡೆದುಕೊಳ್ಳಲು ಮುಂದಾಗಿದೆ. ಬೆಸ್ಕಾಂನಿಂದ ವಾಣಿಜ್ಯ ಪರ ವಸತಿ ಕಟ್ಟಡ ಎಂದು ನಮೂದಿಸಿ ಆಸ್ತಿ ತೆರಿಗೆ ಕಡಿಮೆ ಪಾವತಿ ಮಾಡುತ್ತಿದ್ದಾರೆ. ಈ ಬಗ್ಗೆ ಬೆಸ್ಕಾಂ ನಿಂದ ಅಂಕಿ ಅಂಶ ಪಡೆದುಕೊಂಡು ತೆರಿಗೆ ವಸೂಲಿ ಮಾಡಲಾಗುವುದು. ಜತೆಗೆ ಆಸ್ತಿ ತೆರಿಗೆ ವ್ಯಾಪ್ತಿಗೆ ಬಾರದ 2-3 ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಸೀಜ್, ಹರಾಜಿನಿಂದ ₹1 ಸಾವಿರ ಕೋಟಿ 
2024-25ನೇ ಸಾಲಿನಲ್ಲಿ ಓಟಿಎಸ್ ಯೋಜನೆ, ಶೇ. 5ರಷ್ಟು ರಿಯಾಯಿತಿ ಹಾಗೂ ಸುಸ್ತಿದಾರರ ಸುಮಾರು 9 ಸಾವಿರ ಆಸ್ತಿಗಳನ್ನು ಸೀಜ್ ಮಾಡಿ 83 ಸಾವಿರ ಆಸ್ತಿ ಮಾಲೀಕರ ಬ್ಯಾಂಕ್ ಖಾತೆಯನ್ನು ಬಿಬಿಎಂಪಿಯ ಖಾತೆಗೆ ಅಟ್ಯಾಚ್ ಮಾಡಲಾಗಿತ್ತು. 600ಕ್ಕೂ ಅಧಿಕ ಆಸ್ತಿಗಳನ್ನು ಹರಾಜಿಗೂ ಕ್ರಮ ಕೈಗೊಂಡಿತ್ತು. ಕಳೆದ ಫೆಬ್ರವರಿ ಅಂತ್ಯಕ್ಕೆ ಸುಮಾರು ₹3500 ಕೋಟಿ ಆಸ್ತಿ ತೆರಿಗೆ ವಸೂಲಿ ಆಗಿತ್ತು, ಈ ವರ್ಷ 4500 ಕೋಟಿ ವಸೂಲಿ ಆಗಿದೆ. 

ಗುರಿ ಸಾಧನೆ ವಿಫಲ
ಬಿಬಿಎಂಪಿ ಬಜೆಟ್‌ನಲ್ಲಿ ಘೋಷಣೆ ಮಾಡಿದ ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ಒಂದೇ ಒಂದು ಬಾರಿಯೂ ಸಾಧಿಸಿಲ್ಲ, ಇದು 2024-25 ಸಾಲಿನಲ್ಲಿಯೂ ಮುಂದುವರೆಯುವ ನಿರೀಕ್ಷೆ ಇದೆ. ಪ್ರಸಕ್ತ ವರ್ಷದ ಗುರಿ ಸಾಧನೆಗೆ ಇನ್ನೂ 720 ಕೋಟಿ ರು. ಅಗತ್ಯವಿದೆ. 30 ದಿನದಲ್ಲಿ ಆ ಪ್ರಮಾಣದ ತೆರಿಗೆ ಸಂಗ್ರಹ ಅಸಾಧ್ಯ ಎನ್ನಲಾಗುತ್ತಿದೆ. ಮುಂದಿನ ವರ್ಷ ಬೆಸ್ಕಾಂನಿಂದ ಪಡೆದ ಮಾಹಿತಿ ಆಧರಿಸಿ ಹಾಗೂ ಹೊಸ ಆಸ್ತಿಗಳಿಂದ ಸುಮಾರು ಒಂದು ಸಾವಿರ ಕೋಟಿ ರು. ವರೆಗೆ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹಿಸಬಹುದಾಗಿದೆ. ಇದರಿಂದಾಗಿ 5600 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಸಾಧಿಸಬಹುದು ಎಂದು ಮಾಹಿತಿ ನೀಡಿದ್ದಾರೆ.