Asianet Suvarna News Asianet Suvarna News

Aravind Limbavali ದರ್ಪ ಪ್ರಕರಣ: ಸುರ್ಜೆವಾಲಾ ಟೀಕೆಗೆ ಲಿಂಬಾವಳಿ ಗರಂ, ಟ್ವಿಟ್ಟರ್‌ನಲ್ಲಿ ವಾರ್‌

Aravind Limbavali misbehave updates: ಮಾಜಿ ಸಚಿವ, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರು ಮಹಿಳೆಯ ಜೊತೆ ಅನುಚಿತ ವರ್ತನೆ ಮಾಡಿದ ಸಂಬಂಧ ಕಾಂಗ್ರೆಸ್‌ ನಾಯಕ ರಂದೀಪ್‌ ಸುರ್ಜೆವಾಲಾ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಲಿಂಬಾವಳಿ, ಕಾಂಗ್ರೆಸ್‌ ಕಾರ್ಯಕರ್ತೆ ಮೊದಲು ಒತ್ತುವರಿ ತೆರವುಗೊಳಿಸಲಿ ಎಂದಿದ್ದಾರೆ.

Aravind Limbavali reacts to Randeep Surjewala asks lady to vacate encroached land
Author
First Published Sep 3, 2022, 3:32 PM IST

ಬೆಂಗಳೂರು:ಅರವಿಂದ ಲಿಂಬಾವಳಿ ತಮ್ಮ ಕ್ಷೇತ್ರದಲ್ಲಿ ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ನಂತರ, ಕಾಂಗ್ರೆಸ್‌ ನಾಯಕ ರಂದೀಪ್‌ ಸಿಂಗ್‌ ಸುರ್ಜೆವಾಲಾ ಟ್ವಿಟ್ಟರ್‌ನಲ್ಲಿ ಟೀಕಿಸಿದ್ದಾರೆ. ಕನ್ನಡದಲ್ಲೇ ಟ್ವೀಟ್‌ ಮಾಡಿರುವ ಸುರ್ಜೆವಾಲಾ, "ಸ್ತ್ರೀ ಉದ್ಧಾರಕರಂತೆ ಕೇವಲ ಬೂಟಾಟಿಕೆಯ ಮಾತಾಡುವ ಬಿಜೆಪಿಗರೇ, ನಿಮ್ಮ ಪಕ್ಷದ ಅರವಿಂದ ಲಿಂಬಾವಳಿಯವರು ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡ ರೀತಿ ಅಕ್ಷಮ್ಯ. ಇಂಥ ಮಹಿಳಾ ವಿರೋಧಿ ನಡೆಯ ವಿರುದ್ಧ ಮಾತಾಡುವ ಧೈರ್ಯ ತೋರುತ್ತೀರಾ? ಅರವಿಂದ ಲಿಂಬಾವಳಿಯವರು ಆ ಹೆಣ್ಣಿನ ಕ್ಷಮೆ ಕೇಳುತ್ತಾರ?," ಎಂದು ಪ್ರಶ್ನಿಸಿದ್ದಾರೆ. 

ಇದಕ್ಕೆ ಉತ್ತರಿಸಿರುವ ಅರವಿಂದ ಲಿಂಬಾವಳಿ, ಕ್ಷಮೆ ಕೇಳಲು ಸಿದ್ಧ ಆದರೆ ನಿಮ್ಮ ಪಕ್ಷದ ಕಾರ್ಯಕರ್ತೆ ಹಲವಾರು ವರ್ಷಗಳಿಂದ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಮಾಡಲು ಹೇಳುವಿರಾ ಎಂದು ಪ್ರತ್ಯುತ್ತರ ನೀಡಿದ್ಧಾರೆ. "ಈ ಬಗ್ಗೆ ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ. ಆದರೆ ನಿಮ್ಮ ಪಕ್ಷದ ಇದೇ ಕಾರ್ಯಕರ್ತೆ ರೂತ್ ಸಗಾಯ್ ಮೇರಿ ಎಷ್ಟೋ ವರ್ಷಗಳಿಂದ ರಾಜಕಾಲುವೆ ಒತ್ತುವರಿ ಮಾಡಿ, ಜನರಿಗೆ ಸಮಸ್ಯೆಯುಂಟು ಮಾಡಿದ್ದಾರಲ್ಲ, ಅದನ್ನು ಖಾಲಿ ಮಾಡಲು ಹೇಳಿ. ನಿಮ್ಮ ಕಾರ್ಯಕರ್ತೆಯ ಮೊಂಡುತನವನ್ನು ಇಲ್ಲಿಗೇ ನಿಲ್ಲಿಸಲು ಹೇಳಿ," ಎಂದು ಟ್ವೀಟ್‌ ಮಾಡಿದ್ದಾರೆ. 

 

ಟ್ವೀಟ್‌ಗೂ ಮುನ್ನ ಸಮರ್ಥನೆ:

ಸಿ.ಎಂ.ರೌಂಡ್ಸ್ ಗೂ ಮುನ್ನ ಮಹಿಳೆಯೊಬ್ಬರ ಜೊತೆ ಅರವಿಂದ ಲಿಂಬಾವಳಿಗೆ ಮಾತಿನ ಚಕಮಕಿಯಾಗಿದ್ದಕ್ಕೆ ಅರವಿಂದ ಲಿಂಬಾವಳಿ ಸ್ಪಷ್ಟನೆ ನೀಡಿದ್ದಾರೆ. "ಅರೋಪಗಳು ಮಾಡ್ತಾರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ. ಒತ್ತುವರಿಯಾಗಿರುವ ಜಾಗ ಬಿಡಿ, ಜನರಿಗೆ ತೊಂದರೆಯಾಗುತ್ತಿದೆ. ಅದನ್ನು ತಪ್ಪಿಸಬೇಕು. ಟಿಜೆಡ್ ಅಪಾರ್ಟ್ಮೆಂಟ್ ಗೆ ನೀರು ತುಂಬಿರೋದೆ ಆ ಕಾಂಗ್ರೆಸ್ ಕಾರ್ಯಕರ್ತೆ ಸಗಾಯಿ ಮೇರಿಯಿಂದ. ಜನರಿಗೆ ತೊಂದರೆ ಕೊಡೊದೇ ನಿಮ್ಮ ಉದ್ದೇಶವಾ?" ಎಂದು ಲಿಂಬಾವಳಿ ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ: BJP MLA ಅರವಿಂದ ಲಿಂಬಾವಳಿ ದರ್ಪ; ಪ್ರಶ್ನಿಸಿದ್ದಕ್ಕೆ ಮಹಿಳೆ ಪೊಲೀಸರ ವಶಕ್ಕೆ

ಸ್ಥಳೀಯ ಬಿಜೆಪಿಗರಿಂದ ಲಿಂಬಾವಳಿ ಸಮರ್ಥನೆ:

ಮಹದೇವಪುರ ಬಿಜೆಪಿ ಮಂಡಲ ಅಧ್ಯಕ್ಷರಾದ ಮನೋಹರ್ ರೆಡ್ಡಿ ಮತ್ತು ಬಿಜೆಪಿ ಮುಖಂಡರು ಅರವಿಂದ ಲಿಂಬಾವಳಿ ಪರವಾಗಿ ಪತ್ರಿಕಾಗೋಷ್ಠಿ ನಡೆಸಿದರು. ರಾಜಕಾಲುವೆಗಳ ಒತ್ತುವರಿ ವೀಕ್ಷಣೆಗೆ ಮಾಡುವ ವೇಳೆ ಮಹಿಳೆ‌ ಸಗಾಯಿ ಮೇರಿ ಶಾಸಕ ಅರವಿಂದ ಲಿಂಬಾವಳಿಗೆ ಪ್ರಚೋದನೆ ನೀಡಿದರು. ಆ ಸಗಾಯಿ ಮೇರಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷೆಯಾಗಿದ್ದಾರೆ. ಅವರು ಬೇಕಂತಲೇ ಕ್ಯಾತೆ ತೆಗೆದಿದ್ದಾರೆ ಎಂದು ಬಿಜೆಪಿ ಮುಖಂಡರು ಕಾಂಗ್ರೆಸ್‌ ವಿರುದ್ಧ ಆರೋಪ ಮಾಡಿದ್ದಾರೆ. 

"ಸಗಾಯಿ ಮೇರಿ ರಾಜಕಾಲುವೆ ಒತ್ತುವರಿ ಮಾಡಿಕೊಂಡ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ತೆರವುಗೊಳಿಸಲು ಮುಂದಾದಗ ಶಾಸಕರಿಗೆ ಏಕವಚನ ಬಳಸಿದ್ದು ಮೊದಲು ಸಗಾಯಿ ಮೇರಿ. ಶಾಸಕ.ಅರವಿಂದ ಲಿಂಬಾವಳಿ ಹೆಸರಿಗೆ ಕಪ್ಪು ಮಸಿ ಬಳಿಯಲು ಕಾಂಗ್ರೇಸ್ ಘಟಕದವರೇ  ಈ ರೀತಿ ಸಗಾಯಿ ಮೇರಿರವರನ್ನ ಎತ್ತಿ ಕಟ್ಟುತ್ತಿದ್ದಾರೆ," ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮನೋಹರರೆಡ್ಡಿ ಹೇಳಿದ್ದಾರೆ. 

ಇದನ್ನೂ ಓದಿ: ನಾನು ಯಾರ ಮಗಳು ಗೊತ್ತಾ?: ಟ್ರಾಫಿಕ್ ಪೊಲೀಸರೊಂದಿಗೆ ಅರವಿಂದ ಲಿಂಬಾವಳಿ ಪುತ್ರಿ ಕಿರಿಕ್

ದಾಖಲೆ ಪತ್ರ ಎಲ್ಲವೂ ಸರಿಯಿದೆ ಅಂತಾರೆ ಮೇರಿ:

ಅರವಿಂದ ಲಿಂಬಾವಳಿ ಇಂದ ಬೈಗುಳಕ್ಕೆ‌ ಒಳಗಾದ ಮಹಿಳೆ ರುತ್ ಸಗಾಯ್ ಮೇರಿ ಕೂಡ ಪ್ರತಿಕ್ರಿಯೆ ನೀಡಿದ್ದು, "ನಮ್ಮ ಗೋಡೆಯನ್ನ ಡೆಮಾಲಿಷ್ ಮಾಡಿದ್ದರು. ನಮ್ಮ‌ ದಾಖಲೆ ಪ್ರಕಾರ ಎಲ್ಲಾ ಸರಿಯಾಗಿದೆ. ಸಾಕಷ್ಟು ವರ್ಷಗಳಿಂದ ಅಲ್ಲಿ ವಾಸ ಮಾಡ್ತಿದ್ದೇವೆ. ಆದರೆ ಯಾವುದೇ ನೋಟಿಸ್ ಕೊಡದೆ ಗೋಡೆ ಒಡೆದು ಹಾಕಿದ್ರು. ಅದಕ್ಕೆ‌ ‌ನಾನು ನಮಗೆ ಸಮಯಾವಕಾಶ ಕೊಡಿ, ನಮ್ಮ ವಸ್ತುಗಳನ್ನು ತೆಗೆದುಕೊಳ್ತೇವೆ ಅಂದೆ. ಜನರೇಟರ್, ವಿದ್ಯುತ್ ಪರಿಕರಗಳು ಇದೆ ಎಲ್ಲವನ್ನೂ ತೆಗೆದುಕೊಳ್ತೀವಿ ಅಂತ ಕೇಳಿಕೊಂಡ್ವಿ. ಬಳಿಕ ಪೊಲೀಸರು ಸರಿ ಹಾಗೆ ಮಾಡಿ ಅಂದ್ರು. ಆಗ ಶಾಸಕರು ಅದೇ ಪ್ರದೇಶಕ್ಕೆ ಬಂದಿದ್ರು. ನಾನು ಇದನ್ನ ಕೇಳೋಕೆ ದಾಖಲೆ ಸಹಿತ ಮಾತಾಡೋಕೆ ಹೋಗಿದ್ದೆ. ಮುಖ್ಯಮಂತ್ರಿಗಳು ಆ ಕಡೆ ವಿಸಿಟ್ ಗೆ ಬರ್ತಿದ್ರು. ಇವರಿಗೆ ಯಾವ ಒತ್ತಡ ಇತ್ತೋ ಗೊತ್ತಿಲ್ಲ. ಅಲ್ಲಿ ಸುಮಾರು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನ ತೋರಿಸೋಕೆ‌ ಏನೋ ಕೆಲವು ಡೆಮಾಲಿಶ್ ಮಾಡಿದ್ರು," ಎಂದು ಸಗಾಯಿ ಮೇರಿ ಆರೋಪಿಸುತ್ತಾರೆ. 

ವಿಲ್ಲಾಗಳಿಗೆ ಒತ್ತುವರಿ ಮಾಡಿಕೊಂಡು ರಸ್ತೆ ಮಾಡಿಕೊಟ್ಟಿದ್ದಾರೆ. ಇದನ್ನೆಲ್ಲಾ ಅವರು ಏನೂ ಮಾಡಲಿಲ್ಲ. ಇದನ್ನ ಕೇಳೋಕೆ ಹೋದಾಗ ನನಗೆ ಬಾಯಿಗೆ ಬಂದಂತೆ ಬೈದರು. ನಿಂಗೆ ಮಾನ ಮರ್ಯಾದೆ ಇದೆಯಾ ಅಂತ ಕೆಟ್ಟದಾಗಿ ಬೈದಿದ್ದಾರೆ. ಅವರ ಬಗ್ಗೆ ಯಾವುದೇ ವಿರೋಧ ಇಲ್ಲ. ನಾನು ಸುಮಾರು ವರ್ಷಗಳಿಂದ ಅಲ್ಲಿ ಸಮಾಜ ಸೇವೆ ಮಾಡ್ತಿದ್ದೇನೆ. ಪೊಲೀಸರವರಿಗೆ ಹಿಡಿರೋ ಅವ್ಳನ್ನ ಹೊಡೀರೋ ಅಂತೆಲ್ಲಾ ಹೇಳಿದ್ದಾರೆ. ಇವರು ಶಾಸಕರಾ ಅಥವಾ ಗೂಂಡಾನ ಅಂತ ಗೊತ್ತಾಗಬೇಕು, ಎನ್ನುತ್ತಾರೆ ಮೇರಿ.

ಇದನ್ನೂ ಓದಿ: ನಿಯಮ ಉಲ್ಲಂಘಿಸಿ ದೇವಸ್ಥಾನಕ್ಕೆ ಸಚಿವ ಭೇಟಿ, ಫೋಟೋ ಹರಿಬಿಟ್ಟ ಬಿಜೆಪಿ ಶಾಸಕಗೆ ಕ್ಲಾಸ್

"ಅರವಿಂದ ಲಿಂಬಾವಳಿ ಕಾನೂನು ಕೈಗೆ ತೆಗೆದುಕೊಂಡು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಅವರು ಮಾಡಿರುವ ಅವಮಾನಕ್ಕೆ ನನಗೆ ನ್ಯಾಯ ಬೇಕು. ಎಲ್ಲಾ ತಿಳಿದುಕೊಂಡಿರುವ ನಮಗೆ ಈ ರೀತಿ ಮಾಡಿದರೆ, ಸಾಮಾನ್ಯ ಜನರ ಪರಿಸ್ಥಿತಿ ಏನು..? ಜನ ತೀರ್ಮಾನ ಮಾಡಲಿ. ನಾನು ಹೋರಾಟ ಮುಂದುವರೆಸುತ್ತೇನೆ. ಪೊಲೀಸರು ಕೂಡ ಅವರು ಹೇಳಿದಂತೆ ಕೇಳ್ತಾರೆ. ನಮ್ಮ ದೂರನ್ನೂ ಕೂಡ ಪೊಲೀಸರು ತೆಗೆದುಕೊಂಡಿಲ್ಲ," ಎಂದು ಲಿಂಬಾವಳಿ ವಿರುದ್ಧ ಸಗಾಯಿ ಮೇರಿ ಆರೋಪಿಸಿದ್ದಾರೆ.

Follow Us:
Download App:
  • android
  • ios