Asianet Suvarna News Asianet Suvarna News

BJP MLA ಅರವಿಂದ ಲಿಂಬಾವಳಿ ದರ್ಪ; ಪ್ರಶ್ನಿಸಿದ್ದಕ್ಕೆ ಮಹಿಳೆ ಪೊಲೀಸರ ವಶಕ್ಕೆ

BJP MLA Arvind Limbavali: ಮಹದೇವಪುರ ಶಾಸಕ ಮತ್ತು ಮಾಜಿ ಸಚಿವ ಅರವಿಂದ್‌ ಲಿಂಬಾವಳಿ ಮಹಿಳೆಯೊಂದಿಗೆ ದರ್ಪ ಮೆರೆದಿರುವ ವಿಡಿಯೋ ವೈರಲ್‌ ಆಗಿದೆ. ಕ್ಷೇತ್ರದ ಸಮಸ್ಯೆ ಪರಿಹಾರಕ್ಕಾಗಿ ಬಂದ ಮಹಿಳೆಯನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಲಿಂಬಾವಳಿ ಆದೇಶ ನೀಡಿದ್ದಾರೆ.

BJP MLA Arvind Limbavali misbehaves with woman asks police to detain her
Author
First Published Sep 3, 2022, 11:53 AM IST

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಟ್ರಾಫಿಕ್‌ ಪೊಲೀಸರ ಜೊತೆ ಗಲಾಟೆ ಮಾಡಿ ಅರವಿಂದ್‌ ಲಿಂಬಾವಳಿ ಪುತ್ರಿ ಸುದ್ದಿಯಾಗಿದ್ದರು. ಇದೀಗ ಕ್ಷೇತ್ರದ ಸಮಸ್ಯೆ ಪರಿಹಾರಕ್ಕಾಗಿ ಬಂದ ಮಹಿಳೆಯ ಜೊತೆ ಲಿಂಬಾವಳಿ ದರ್ಪ ಮೆರೆದಿದ್ದಾರೆ. ಈ ಘಟನೆಯನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆ ಮಹದೇವಪುರದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಸೋಮವಾರ ಸುರಿದ ಮಳೆಯಿಂದ ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಪ್ರವಾಹ ಉಂಟಾಗಿತ್ತು. ಪ್ರವಾಹ ಪೀಡಿತ ಪ್ರದೇಶ ಪರಿವೀಕ್ಷಣೆಗೆ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಭೇಟಿ ನೀಡಿದ್ದರು. 

ರಾಜಕಾಲುವೆಗೆ ಹೊಂದಿಕೊಂಡಂತೆ ಇರುವ ವಾಣಿಜ್ಯ ಕಟ್ಟಡದ ಕೆಲ ಭಾಗಗಳನ್ನು ತೆರವುಗೊಳಿಸುವ ವೇಳೆ ರುತ್‌ ಸಗಾಯಿ ಮೇರಿ ಅಮೀಲಾ ಎಂಬುವವರು ದಾಖಲೆ ಪತ್ರಗಳನ್ನು ಮುಂದಿಟ್ಟು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲು ಬಂದರು. ಆದರೆ ಮಹಿಳೆಗೆ ಪರಿಹಾರ ನೀಡುವ ಬದಲು ದಾಖಲೆಗಳನ್ನು ಕಿತ್ತುಕೊಳ್ಳಲು ಶಾಸಕರು ಯತ್ನಿಸಿದರು. ಪತ್ರ ಕೊಡಲು ಹಿಂದೇಟು ಹಾಕಿದ ಮಹಿಳೆಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಅರವಿಂದ ಲಿಂಬಾವಳಿ ಏಕವಚನದಲ್ಲಿ ಮಾತನಾಡಿದರು. 

ವಿಡಿಯೋದಲ್ಲಿ ಶಾಸಕ ಲಿಂಬಾವಳಿ ಮಾತುಗಳು ಸ್ಪಷ್ಟವಾಗಿ ಕೇಳುತ್ತವೆ. "ಒತ್ತುವರಿ ಮಾಡಿಕೊಂಡು ಈಗ ನ್ಯಾಯ ಕೇಳಲು ಬರ್ತೀಯಾ. ನಿನಗೆ ಮಾನ ಮರ್ಯಾದೆ ಏನೂ ಇಲ್ವಾ. ನನಗೂ ಬೇರೆ ಭಾಷೆ ಬರತ್ತೆ. ಇವಳಿಗೆ ಮರ್ಯಾದೆ ಬೇರೆ ಕೇಡು. ಒದ್ದು ಒಳಗೆ ಹಾಕಿ ಇವಳನ್ನ," ಎಂದು ಅರವಿಂದ ಲಿಂಬಾವಳಿ ಏಕವಚನದಲ್ಲಿ ಮಹಿಳೆಯ ಮೇಲೆ ಕಿರುಚಾಡಿದ್ದಾರೆ. 

ಮಹಿಳೆ ಇದಕ್ಕೆ ಪ್ರತ್ಯುತ್ತರವಾಗಿ, "ಮರ್ಯಾದೆ ಕೊಟ್ಟು ಮಾತನಾಡಿ, ಬಾಯಿಗೆ ಬಂದಂತೆ ಮಾತನಾಡಬೇಡಿ. ಹೆಣ್ಣು ಎಂಬ ಗೌರವ ಇರಲಿ. ನೀವು ನನಗೂ ಶಾಸಕರು, ಎಲ್ಲರಿಗೂ ಶಾಸಕರು," ಎಂದಿದ್ದಾರೆ. ಅದಾದ ನಂತರ ಮಹಿಳಾ ಪೊಲೀಸ್‌ ಒಬ್ಬರು ಬಂದು ಮಹಿಳೆಯನ್ನು ಬಲವಂತದಿಂದ ವಶಕ್ಕೆ ಪಡೆಯುತ್ತಾರೆ. ನಂತರ ಆಕೆಯನ್ನು ಪೊಲೀಸ್‌ ಜೀಪಿನಲ್ಲಿ ಕರೆದೊಯ್ಯುತ್ತಾರೆ. 

ಶಾಸಕರ ಈ ನಡೆಯನ್ನು ಪ್ರಶ್ನಿಸಿರುವ ಆಮ್‌ ಆದ್ಮಿ ಪಕ್ಷ ಇದೇನಿದು ಅರವಿಂದ ಲಿಂಬಾವಳಿ ಅವರೇ, ಒಂದು ಹೆಣ್ಣಿನೊಂದಿಗೆ ನಡೆದುಕೊಳ್ಳುವ ರೀತಿಯೇ ಇದು? ತಪ್ಪಿದ್ದರೆ ಕಾನೂನಿದೆ. ಇದೇನು ನಿಮ್ಮ ಮಾತುಗಳು? ನಿಮ್ಮ ಸ್ಥಾನಕ್ಕೆ ಶೋಭೆ ತರುವುದೆ? ಅಧಿಕಾರ ಶಾಶ್ವತ ಅಲ್ಲ. ಅದೇತಕೆ ಇಷ್ಟು ದರ್ಪ" ಎಂದು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದೆ. 

ಇದನ್ನೂ ಓದಿ: ನಾನು ಯಾರ ಮಗಳು ಗೊತ್ತಾ?: ಟ್ರಾಫಿಕ್ ಪೊಲೀಸರೊಂದಿಗೆ ಅರವಿಂದ ಲಿಂಬಾವಳಿ ಪುತ್ರಿ ಕಿರಿಕ್

ಲಿಂಬಾವಳಿ ಮಗಳ ರಂಪಾಟ: ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ (Arvind Limbavali) ಪುತ್ರಿ ಟ್ರಾಫಿಕ್ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ಬಳಿ ನಡೆದಿತ್ತು. ರ‍್ಯಾಶ್ ಡ್ರೈವ್ ಮಾಡಿಕೊಂಡು ಬಂದ ಯುವತಿ ಕಾರನ್ನು ಪೊಲೀಸರು ತಡೆದಿದ್ದರು, ಈ ವೇಳೆ ಕಾರು ನಿಲ್ಲಿಸದೇ ಯುವತಿ ಮುನ್ನುಗ್ಗಿದ್ದಳು. ಚೇಸ್ ಮಾಡಿ ಕ್ಯಾಪಿಟಲ್ ಹೊಟೆಲ್ ಬಳಿ ಅರವಿಂದ ಲಿಂಬಾವಳಿ ಪುತ್ರಿ ಕಾರನ್ನು ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ತಡೆದಿದ್ದರು.

ಇದನ್ನೂ ಓದಿ: ನಿಯಮ ಉಲ್ಲಂಘಿಸಿ ದೇವಸ್ಥಾನಕ್ಕೆ ಸಚಿವ ಭೇಟಿ, ಫೋಟೋ ಹರಿಬಿಟ್ಟ ಬಿಜೆಪಿ ಶಾಸಕಗೆ ಕ್ಲಾಸ್

ಈ ವೇಳೆ ಪೊಲೀಸರೊಂದಿಗೆ ಯುವತಿ "ನಾನು ಯಾರು ಗೊತ್ತಾ? ಶಾಸಕ ಅರವಿಂದ್ ಲಿಂಬಾವಳಿ ಗೊತ್ತಾ? ಅರವಿಂದ ಲಿಂಬಾವಳಿ ಮಗಳು ನಾನು" ಎಂದು ವಾಗ್ವಾದಕ್ಕಿಳಿದಿದ್ದಳು. ಅರವಿಂದ್ ಲಿಂಬಾವಳಿ ಮಗಳು ನಾನು ಎಂದು ಏರುಧ್ವನಿಯಲ್ಲಿ ಕಿರಿಕ್ ಮಾಡಿದ್ದಾಳೆ. ಅವಾಚ್ಯ ಶಬ್ದಗಳಿಂದ ಪೊಲೀಸರಿಗೆ ಯುವತಿ ನಿಂದಿಸಿದ್ದಳು. ರ‍್ಯಾಶ್ ಡ್ರೈವ್ ಫೈನ್ ಸೇರಿ ಹಳೆಯ ಕೇಸುಗಳ ಫೈನ್ ವಸೂಲಿ ಮಾಡಿರುವ ಪೊಲೀಸರು ಯುವತಿಯಿಂದ ಒಟ್ಟು 10 ಸಾವಿರ ರೂಪಾಯಿ ದಂಡ ವಸೂಲಿ ಮಾಡಿದ್ದರು. 

Follow Us:
Download App:
  • android
  • ios