ಸದಸ್ಯತ್ವ ನೋಂದಣಿ ಮಾಡಿಸಿದವರ ಜತೆ ರಾಹುಲ್‌ ಸಂವಾದ ರಾಹುಲ್‌ ಸಭೆಗೆ ಜೂಮ್‌ ಆ್ಯಪ್‌ ಮೂಲಕ 70000 ಮಂದಿ ಭಾಗಿ ಡಿಜಿಟಲ್ ಸದಸ್ಯತ್ವ ಅಭಿಯಾನ ನಡಸಿರುವ ಕಾಂಗ್ರೆಸ್

ಕನ್ನಡಪ್ರಭ ವಾರ್ತೆ 

ಬೆಂಗಳೂರು(ಏ.2): ಕಾಂಗ್ರೆಸ್‌ ಸದಸ್ಯತ್ವ ಅಭಿಯಾನದಲ್ಲಿ 60 ಲಕ್ಷ ಸದಸ್ಯರನ್ನು ನೋಂದಣಿ ಮಾಡಿರುವ ಸುಮಾರು 70,000 ಕಾರ್ಯಕರ್ತರು ಜೂಮ್‌ ಆ್ಯಪ್‌ ಮೂಲಕ ಪಕ್ಷದ ವರಿಷ್ಠ ರಾಹುಲ್‌ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ ವರ್ಚುಯಲ್‌ (Virtual Meeting) ಮೂಲಕ ಭಾಗವಹಿಸಿದ್ದು, ಈ ಪೈಕಿ ಕೆಲವರೊಂದಿಗೆ ರಾಹುಲ್‌ ಸಂವಾದ ನಡೆಸಿದರು.

ಮೊದಲಿಗೆ ಶಿವಶಂಕರ್‌ (Shivshankar) ಎಂಬುವರನ್ನು ಅಭಿನಂದಿಸಿದ ರಾಹುಲ್‌ ಗಾಂಧಿ, ಸದಸ್ಯತ್ವ ನೋಂದಣಿ ಅನುಭವ ಹಂಚಿಕೊಳ್ಳುವಂತೆ ಕೋರಿದರು. ಆಗ ಶಿವಶಂಕರ್‌, 3900 ಮಂದಿಯ ಸದಸ್ಯತ್ವ ನೋಂದಣಿ ಮಾಡಿದ್ದೇನೆ. ಸಾರ್ವಜನಿಕರು ಆರಂಭದಲ್ಲಿ ನಾನಾ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆಲ್ಲಾ ಉತ್ತರಿಸಿ ಕಾಂಗ್ರೆಸ್‌ ಕೊಡುಗೆಗಳ ಬಗ್ಗೆಯೂ ತಿಳಿಸಿದೆ. ನಂತರ ಸದಸ್ಯತ್ವ ಪಡೆದರು ಎಂದು ಜನರ ಪ್ರತಿಕ್ರಿಯೆಯನ್ನು ವಿವರಿಸಿದರು.

ನಿಮಗೆ ಕಾಂಗ್ರೆಸ್‌ ಏಕೆ ಇಷ್ಟಎಂಬ ರಾಹುಲ್‌ ಗಾಂಧಿ ಪ್ರಶ್ನೆಗೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಹೊಳಲ್ಕೆರೆಯ ಸವಿತಾ ರಘು (Savitha Raghu), ನನಗೆ ಕಾಂಗ್ರೆಸ್‌ ಎಂದರೆ ಅಚ್ಚುಮೆಚ್ಚು. ನಮ್ಮ ಅಜ್ಜಿ ಇಂದಿರಾ ಗಾಂಧಿಯವರ (Indira Gandhi) ಕೊಡುಗೆ ಬಗ್ಗೆ ಹೇಳುತ್ತಿದ್ದರು. ನಾವು ಆ ಕಾಲದಿಂದಲೂ ಕಾಂಗ್ರೆಸ್‌. ಇಂದು ಸಾಮಾನ್ಯ ಜನ ಸಂಕಷ್ಟದಲ್ಲಿದ್ದು, ಕಾಂಗ್ರೆಸ್‌ನ ಕೊಡುಗೆಗಳನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ. ನಾನು 11,000 ಸದಸ್ಯತ್ವ ನೋಂದಣಿ ಮಾಡಿದ್ದೇನೆ ಎಂದು ವಿವರಿಸಿದರು.

ಸಂಘಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಹೊಸಕೋಟೆಯ ನಾಣಿ, ಬೂತ್‌ ಕಮಿಟಿಗಳನ್ನು ಬಲವರ್ಧನೆಗೊಳಿಸಬೇಕು. ಬ್ಲಾಕ್‌ ಅಧ್ಯಕ್ಷರು ಕನಿಷ್ಠ ತಿಂಗಳಿಗೊಮ್ಮೆಯಾದರೂ ಸಭೆ ನಡೆಸಿ ಮೇಲ್ವಿಚಾರಣೆ ನಡೆಸುವಂತಾಗಬೇಕು ಎಂದು ಸಲಹೆ ನೀಡಿದರು. ಇದಕ್ಕೆ ರಾಹುಲ್‌ಗಾಂಧಿ ಖಂಡಿತ ನಿಮ್ಮ ಸಲಹೆ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಹೆಚ್ಚು ನೋಂದಣಿ ಮಾಡಿದವರಿಗೆ ಅಭಿನಂದನೆ:

ವಿಧಾನಸಭಾ ಕ್ಷೇತ್ರಗಳ ಪೈಕಿ ಕನಕಗಿರಿಯಲ್ಲಿ (Kanakagiri constituency) ಅತಿ ಹೆಚ್ಚು ಸದಸ್ಯತ್ವ ನೋಂದಣಿಯಾಗಿದ್ದು, ಮಾಜಿ ಸಚಿವ ಶಿವರಾಜ ತಂಗಡಗಿ ಅವರನ್ನು ರಾಹುಲ್‌ ಗಾಂಧಿ ಅಭಿನಂದಿಸಿದರು. ಜಿಲ್ಲೆಗಳ ಪೈಕಿ ಕೊಪ್ಪಳದಲ್ಲಿ (Koppal) ಅತಿ ಹೆಚ್ಚು ನೋಂದಣಿಯಾಗಿದ್ದು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ (Ishwar Khandre) ಅವರನ್ನು ಅಭಿನಂದಿಸಿದರು. ಮಾಜಿ ಮೇಯರ್‌ಗಳಾದ ಪದ್ಮಾವತಿ, ಆರ್‌.ಸಂಪತ್‌ರಾಜ್‌ (R. Sampathraj)ಇತರರಿಗೂ ರಾಹುಲ್‌ ಗಾಂಧಿ ಅಭಿನಂದಿಸಿ ಪ್ರಮಾಣಪತ್ರ ವಿತರಿಸಿದರು.

ರಾಹುಲ್ ಗಾಂಧಿ ಸಮ್ಮುಖದಲ್ಲಿ ಶುಕ್ರವಾರ ಕೆಪಿಸಿಸಿ ಸಭೆ ನಡೆಯಿತು. ಈ ಕೆಪಿಸಿಸಿ ವಿಶೇಷ ಸಭೆಯಲ್ಲಿ (KPCC Meeting) ಮಾತನಾಡಿದ ಡಿಕೆ ಶಿವಕುಮಾರ್, ನಾನು ಎಲ್ಲರನ್ನು ಒಟ್ಟಿಗೆ ಕರೆದೊಯ್ಯುತ್ತೇನೆ ಎಂದು ಸ್ಪಷ್ಟಪಡಿಸಿದರು. ಪಕ್ಷ ನನ್ನ ಮೇಲಿಟ್ಟ ಭರವಸೆಯನ್ನು ಯಾವುದೇ ಕಾರಣಕ್ಕೂ ನಾನು ಹುಸಿ ಮಾಡುವುದಿಲ್ಲ. ಕರ್ನಾಟಕದ ಮೂಲಕ ರಾಷ್ಟ್ರದಲ್ಲಿ ಕಾಂಗ್ರೆಸ್(Congress) ನ್ನು ಮತ್ತೆ ಅಧಿಕಾರದಲ್ಲಿ ಸ್ಥಾಪಿಸುವ ಪ್ರಯತ್ನ ಮಾಡಬೇಕಿದೆ. ಹೀಗಾಗಿ ನಾನು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದರು.

ವ್ಯಕ್ತಿ ಪೂಜೆಗಿಂತ , ಪಕ್ಷ ಪೂಜೆ ಮುಖ್ಯ ಎಂದು ನಾನು ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ. ರಾಜ್ಯದಲ್ಲಿ ಒಂದು ಭ್ರಷ್ಟ ಸರಕಾರ ಅಧಿಕಾರದಲ್ಲಿದ್ದು ಅದನ್ನು ಕಿತ್ತೊಗೆಯುವ ಪ್ರಯತ್ನ ನಡೆಸಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ದಾಖಲೆ ಮೀರಿಸಿದೆ. ಹೀಗಾಗಿ ಜನರು ಬೇಸತ್ತಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಉಪ ಚುನಾವಣೆಯಲ್ಲೂ ನಾವು ಸಮಬಲದಿಂದ ಗೆದ್ದಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದಕ್ಕೆ ಪೂರಕವಾದ ಎಲ್ಲ ವಾತಾವರಣವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.