ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿತದಿಂದ ಶೇ. 40ರಷ್ಟು ಸುಟ್ಟ ಗಾಯಗಳಾಗಿದ್ದ 7 ತಿಂಗಳ ಗರ್ಭಿಣಿ ಅಶ್ವಿನಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪಟಾಕಿ ಬಾಕ್ಸ್ ತೊಡೆಯ ಮೇಲಿಟ್ಟುಕೊಂಡಿದ್ದಾಗ ಕಿಡಿ ತಗುಲಿ ಈ ಘೋರ ದುರಂತ ಸಂಭವಿಸಿದೆ.
ಬೆಂಗಳೂರು (ನ.18): ದೀಪಾವಳಿ ಹಬ್ಬದ ಸಂಭ್ರಮದ ವೇಳೆ ಪಟಾಕಿ ಸಿಡಿತದಿಂದ ತೀವ್ರವಾಗಿ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿ ಅಶ್ವಿನಿ (33) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಒಂದು ವಾರದಿಂದ ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್ನ ಐಸಿಯುನಲ್ಲಿ (ICU) ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅಶ್ವಿನಿ ಅವರ ನಿಧನ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲುಮುಟ್ಟುವಂತೆ ಮಾಡಿದೆ.
ಪಟಾಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 33 ವರ್ಷದ ಅಶ್ವಿನಿ ಅವರ ದೇಹವು ಶೇ. 40ರಷ್ಟು ಸುಟ್ಟುಹೋಗಿತ್ತು. ತಕ್ಷಣವೇ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್ಗೆ (Burning Ward) ದಾಖಲಿಸಿ, ಕಳೆದ ಒಂದು ವಾರದಿಂದ ತೀವ್ರ ನಿಗಾ ಘಟಕದಲ್ಲಿ (ICU) ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಅವರು ಇಂದು ಪ್ರಾಣ ಬಿಟ್ಟಿದ್ದಾರೆ.
ಘೋರ ದುರಂತ ಸಂಭವಿಸಿದ್ದು ಹೇಗೆ?
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವಾಗ ನಡೆದ ಸಣ್ಣ ನಿರ್ಲಕ್ಷ್ಯವೇ ಈ ದೊಡ್ಡ ದುರಂತಕ್ಕೆ ಕಾರಣವಾಗಿತ್ತು. ಗರ್ಭಿಣಿ ಅಶ್ವಿನಿ ಅವರು ತಮ್ಮ ತೊಡೆಯ ಮೇಲೆ ಪಟಾಕಿ ಬಾಕ್ಸ್ ಇಟ್ಟುಕೊಂಡು ಕುಳಿತಿದ್ದರು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಕಿಡಿಯೊಂದು ಬಾಕ್ಸ್ಗೆ ತಗುಲಿದೆ. ಕಿಡಿ ತಗುಲಿದ ಮರುಕ್ಷಣವೇ ಬಾಕ್ಸ್ನಲ್ಲಿದ್ದ ಪಟಾಕಿಗಳು ಏಕಕಾಲಕ್ಕೆ ಸಿಡಿದ ಪರಿಣಾಮ ಅವರ ತೊಡೆ, ಹೊಟ್ಟೆ ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದವು.
ದೀಪಾವಳಿ ಪಟಾಕಿ ಅವಘಡದಲ್ಲಿ ಒಟ್ಟು 6 ಮಂದಿಗೆ ಗಾಯ
ನಗರದಲ್ಲಿ ದೀಪಾವಳಿ ಸಂದರ್ಭದಲ್ಲಿ ಸಂಭವಿಸಿದ ಪಟಾಕಿ ಸಿಡಿತದ ಪ್ರತ್ಯೇಕ ಅವಘಡಗಳಲ್ಲಿ ಗರ್ಭಿಣಿ ಸೇರಿದಂತೆ ಒಟ್ಟು ಆರು ಮಂದಿ ಗಾಯಗೊಂಡಿದ್ದರು. ಈ ಪೈಕಿ ಇಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಪಟಾಕಿ ಸಿಡಿಸಿದ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಮಕ್ಕಳೂ ಗಾಯಗೊಂಡ ಘಟನೆ ನಡೆದಿತ್ತು. ಗಾಯಗೊಂಡವರಲ್ಲಿ 11, 14 ಮತ್ತು 9 ವರ್ಷದ ಮೂವರು ಬಾಲಕರು ಹಾಗೂ 9 ವರ್ಷದ ಓರ್ವ ಬಾಲಕಿ ಸೇರಿದ್ದಾರೆ. ಇದರೊಂದಿಗೆ 21 ಮತ್ತು 27 ವರ್ಷದ ಇಬ್ಬರು ಮಹಿಳೆಯರೂ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದರು. ಎಲ್ಲಾ ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ತೀವ್ರ ಸುಟ್ಟ ಗಾಯಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 7 ತಿಂಗಳ ಗರ್ಭಿಣಿ ಅಶ್ವಿನಿ ಇಂದು ಮೃತಪಟ್ಟಿರುವುದು ತೀವ್ರ ವಿಷಾದಕ್ಕೆ ಕಾರಣವಾಗಿದೆ.












