Asianet Suvarna News Asianet Suvarna News

ಬೆಂಗಳೂರು ಪೊಲೀಸರಿಗೆ ಬರಲಿವೆ 672 ಹೊಸ ವಾಹನ: ಮಾಸಾಂತ್ಯಕ್ಕೆ ಸೇವೆಗೆ ಲಭ್ಯ?

ಬೆಂಗಳೂರು:  ರಾಜಧಾನಿಯಲ್ಲಿ ಶೀಘ್ರದಲ್ಲೇ ಹೊಸ ಪೊಲೀಸ್‌ ವಾಹನಗಳು ರಸ್ತೆಗೆ ಇಳಿಯಲಿದ್ದು, ನಗರ ಸಂಚಾರ ಪೊಲೀಸ್‌ ಠಾಣೆಗಳು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್‌ ಠಾಣೆಗಳಿಗೆ ಹೊಸ ವಾಹನಗಳನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ.

672 vehicle to come to police service in Bengaluru Available for service by the end of the month akb
Author
First Published Feb 13, 2023, 11:41 AM IST

ಮೋಹನ ಹಂಡ್ರಂಗಿ , ಕನ್ನಡಪ್ರಭ ವಾರ್ತೆ
ಬೆಂಗಳೂರು:  ರಾಜಧಾನಿಯಲ್ಲಿ ಶೀಘ್ರದಲ್ಲೇ ಹೊಸ ಪೊಲೀಸ್‌ ವಾಹನಗಳು ರಸ್ತೆಗೆ ಇಳಿಯಲಿದ್ದು, ನಗರ ಸಂಚಾರ ಪೊಲೀಸ್‌ ಠಾಣೆಗಳು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್‌ ಠಾಣೆಗಳಿಗೆ ಹೊಸ ವಾಹನಗಳನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ.

ಕೇಂದ್ರ ಸರ್ಕಾರದ ನಿರ್ಭಯಾ ನಿಧಿಯಡಿ (Nirbhaya fund) ನಗರ ಪೊಲೀಸರು (City Police) 112 ಎರ್ಟಿಗಾ ಕಾರುಗಳು, 112 ಬೊಲೆರೊ ಕಾರುಗಳು ಹಾಗೂ 448 ಟಿವಿಎಸ್‌ ಗ್ಲಾಮರ್‌ ದ್ವಿಚಕ್ರ ವಾಹನ ಖರೀದಿಸಲಾಗಿದೆ. ಸದ್ಯಕ್ಕೆ ಮೈಸೂರು ರಸ್ತೆಯ ನಗರ ಶಸಸ್ತ್ರ ಮೀಸಲು ಪಡೆ(ಸಿಎಆರ್‌) ಮೈದಾನದಲ್ಲಿ ಹೊಸ ವಾಹನಗಳನ್ನು ನಿಲ್ಲಿಸಲಾಗಿದೆ. ಶೀಘ್ರದಲ್ಲೇ ಈ ನೂತನ ವಾಹನಗಳನ್ನು ನಗರದ 111 ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್‌ ಠಾಣೆಗಳು ಹಾಗೂ 48 ಸಂಚಾರ ಪೊಲೀಸ್‌ ಠಾಣೆಗಳಿಗೆ ವಿತರಣೆ ಮಾಡಲಾಗುತ್ತದೆ.

ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗುಜರಿ ಪಾಲಿಸಿ ಅನ್ವಯ 15 ವರ್ಷ ಹಳೆಯ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಬೇಕು. ಅದರಂತೆ ನಗರದ ಪೊಲೀಸ್‌ ಇಲಾಖೆಯಲ್ಲಿ 15 ವರ್ಷದ ದಾಟಿದ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬೇಕಾಗಿದೆ. ಹೀಗಾಗಿ ನಗರ ಪೊಲೀಸರು 15 ವರ್ಷದ ದಾಟಿದ ವಾಹನಗಳ ಸಂಚಾರವನ್ನು ಮುಂದಿನ ಮಾರ್ಚ್ ಅಂತ್ಯದೊಳಗೆ ಸ್ಥಗಿತಗೊಳಿಸಲಿದ್ದಾರೆ. ಈ ನಡುವೆಯೇ ಅತ್ಯಾಧುನಿಕ ತಂತ್ರಜ್ಞಾನವುಳ್ಳ (Modern technology) ಹೊಸ ವಾಹನಗಳು ಪೊಲೀಸ್‌ ಠಾಣೆಗಳಿಗೆ ಸೇರ್ಪಡೆಗೊಳ್ಳಲಿವೆ.

Bengaluru traffic police: 3ನೇ ದಿನವೂ 6.31 ಕೋಟಿ ರು.ದಂಡ ಸಂಗ್ರಹ

ಗಸ್ತು ಕಾರ್ಯಕ್ಕೆ ಬಳಕೆ

ನಗರ ಪೊಲೀಸ್‌ ವಿಭಾಗದ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್‌ ಠಾಣೆಗಳಲ್ಲಿ ಗಸ್ತು ಕಾರ್ಯಕ್ಕೆ ‘ಹೊಯ್ಸಳ’ (Hoysala) ಹೆಸರಿನ ವಾಹನಗಳು ಹಾಗೂ ‘ಚೀತಾ’ ಹೆಸರಿನ ದ್ವಿಚಕ್ರ ವಾಹನಗಳಿವೆ. ಬಹುತೇಕ ರಾತ್ರಿ ವೇಳೆ ನಿಗದಿತ ಸಿಬ್ಬಂದಿ ಈ ವಾಹನಗಳಲ್ಲಿ ತಮ್ಮ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಾರೆ. ಪೊಲೀಸ್‌ ನಿಯಂತ್ರಣ ಕೊಠಡಿಗೆ ದೂರುಗಳು ಬಂದಲ್ಲಿ ತಕ್ಷಣ ಈ ವಾಹನಗಳಲ್ಲಿ ಘಟನಾ ಸ್ಥಳಕ್ಕೆ ತೆರಳಲು ಈ ವಾಹನಗಳು ಸಹಾಯಕವಾಗಿವೆ. ಇನ್‌ಸ್ಪೆಕ್ಟರ್‌ಗಳು ಬೊಲೆರೊ ವಾಹನಗಳನ್ನು ಬಳಸಿದರೆ, ಸಬ್‌ ಇನ್‌ಸ್ಪೆಕ್ಟರ್‌ಗಳು, ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ಗಳು ಗಸ್ತು ಕಾರ್ಯ ಸೇರಿದಂತೆ ತಮ್ಮ ಕರ್ತವ್ಯ ನಿರ್ವಹಣೆಗೆ ಚೀತಾ ದ್ವಿಚಕ್ರ (Two wheeler) ವಾಹನಗಳನ್ನೇ ಬಳಸುತ್ತಾರೆ. ಸಂಚಾರ ಪೊಲೀಸ್‌ ಠಾಣೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಎರ್ಟಿಗಾ ಕಾರುಗಳನ್ನು ನೀಡಲಾಗಿದೆ.

Chikkamagaluru: ಪೊಲೀಸ್ ವಾಹನಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ ಕಿಡಿಗೇಡಿ


ಅಗತ್ಯತೆಗೆ ಅನುಗುಣವಾಗಿ ಪೊಲೀಸ್‌ ಠಾಣೆಗೆ ಹಂಚಿಕೆ

ಈಗಾಗಲೇ 15 ವರ್ಷ ಪೂರೈಸಿರುವ ವಾಹನಗಳ ಬಗ್ಗೆ ಮಾಹಿತಿ ನೀಡುವಂತೆ ಎಲ್ಲಾ ಪೊಲೀಸ್‌ ಠಾಣೆಗಳಿಗೆ ಸೂಚಿಸಲಾಗಿದೆ. ಗುಜರಿಗೆ ಹೋಗುವ ವಾಹನಗಳು ಹಾಗೂ ಠಾಣೆಗಳ ಅಗತ್ಯತೆಗೆ ಅನುಗುಣವಾಗಿ ಈ ಹೊಸ ಪೊಲೀಸ್‌ ವಾಹನಗಳನ್ನು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್‌ ಠಾಣೆಗಳು ಹಾಗೂ ಸಂಚಾರ ಪೊಲೀಸ್‌ ಠಾಣೆಗಳಿಗೆ ಹಂಚಿಕೆ ಮಾಡಲಾಗುತ್ತದೆ. ಈ ಹಿಂದೆ ನಗರ ಪೊಲೀಸ್‌ ಆಯುಕ್ತ ಮೇಘರಿಕ್‌ (Megharik) ಅವರ ಅವಧಿಯಲ್ಲಿ 200ಕ್ಕೂ ಅಧಿಕ ಹೊಸ ವಾಹನಗಳನ್ನು ಖರೀದಿಸಿ ಪೊಲೀಸ್‌ ಠಾಣೆಗಳಿಗೆ ವಿತರಿಸಲಾಗಿದೆ. ಆದಾದ ಬಳಿಕ ಈ ಬಾರಿಯೇ ಹೆಚ್ಚು ವಾಹನಗಳನ್ನು ಪೊಲೀಸ್‌ ಠಾಣೆಗಳಿಗೆ ನೀಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.


ಅಮಿತ್‌ ಶಾ ಚಾಲನೆ?

ಕೇಂದ್ರದ ನಿರ್ಭಯಾ ನಿಧಿಯ ಅನುದಾನ ಬಳಸಿಕೊಂಡು ಖರೀದಿಸಿರುವ ಈ ಹೊಸ ಪೊಲೀಸ್‌ ವಾಹನಗಳಿಗೆ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರಿಂದ ಚಾಲನೆ ಕೊಡಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಮಾಸಾಂತ್ಯದೊಳಗೆ ನೂತನ ವಾಹನಗಳು ಪೊಲೀಸ್‌ ಠಾಣೆಗಳಿಗೆ ಹಂಚಿಕೆಯಾಗಲಿವೆ. ಈಗಾಗಲೇ ಇಲಾಖೆಗೆ ಹೊಸ ವಾಹನಗಳನ್ನು ಖರೀದಿಸಲಾಗಿದೆ. ಶೀಘ್ರದಲ್ಲೇ ಈ ಹೊಸ ವಾಹನಗಳನ್ನು ಪೊಲೀಸ್‌ ಠಾಣೆಗಳಿಗೆ ಹಂಚಿಕೆ ಮಾಡಿ ಸೇವೆಗೆ ಮುಕ್ತ ಗೊಳಿಸಲಾಗುವುದು ಎಂದು ನಗರ ಪೊಲೀಸ್‌ ಆಡಳಿತ ವಿಭಾಗದ ಡಿಸಿಪಿ ಲಕ್ಷ್ಮೇಪ್ರಸಾದ್‌ ಹೇಳಿದ್ದಾರೆ. 

Follow Us:
Download App:
  • android
  • ios