150 ಕೋಟಿ ರು.ಗೂ ಅಧಿಕ ಮೌಲ್ಯದ 11.16 ಎಕರೆ ಸರ್ಕಾರಿ ಸ್ವತ್ತನ್ನು ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ಕಚೇರಿಯ ಅಧಿಕಾರಿ ಮತ್ತು ನೌಕರರು ನಕಲಿ ದಾಖಲೆ ಸೃಷ್ಟಿಸಿ ಭೂಗಳ್ಳರ ಪಾಲಾಗುವಂತೆ ಮಾಡಿದ್ದಾರೆ : ಎನ್.ಆರ್.ರಮೇಶ್
ಬೆಂಗಳೂರು : ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿ ತಲಘಟ್ಟಪುರ ಗ್ರಾಮದ ಸರ್ವೆ ನಂಬರ್ 30ರಲ್ಲಿ ಸುಮಾರು 150 ಕೋಟಿ ರು.ಗೂ ಅಧಿಕ ಮೌಲ್ಯದ 11.16 ಎಕರೆ ಸರ್ಕಾರಿ ಸ್ವತ್ತನ್ನು ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ಕಚೇರಿಯ ಅಧಿಕಾರಿ ಮತ್ತು ನೌಕರರು ನಕಲಿ ದಾಖಲೆ ಸೃಷ್ಟಿಸಿ ಭೂಗಳ್ಳರ ಪಾಲಾಗುವಂತೆ ಮಾಡಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಈ ಸಂಬಂಧ ಅವರು ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ಕಚೇರಿಯ ಅಧಿಕಾರಿ ಮತ್ತು ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
-ಈ 11.16 ಎಕರೆ ಜಾಗವು ಸಂಪೂರ್ಣ ಸರ್ಕಾರಿ ಸ್ವತ್ತಾಗಿದೆ. ಈ ಸ್ವತ್ತಿನ ಪ್ರಸ್ತುತ ಮಾರುಕಟ್ಟೆ ದರ ಸುಮಾರು 150 ಕೋಟಿ ರು.ಗೂ ಅಧಿಕವಿದೆ. ಈ ಸ್ವತ್ತಿನ ಸಂಬಂಧ ಪ್ರಕರಣವು ಕಳೆದ ಎರಡು ವರ್ಷಗಳಿಂದ ಚಾಲ್ತಿಯಲ್ಲಿದೆ. ಈಗಾಗಲೇ ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿ, ಕೆಂಗೇರಿ ಹೋಬಳಿ ಮತ್ತು ಯಶವಂತಪುರ ಹೋಬಳಿ ವ್ಯಾಪ್ತಿಯಲ್ಲಿ ಹತ್ತಾರು ಸರ್ಕಾರಿ ಸ್ವತ್ತುಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿರುವ ಕೆ.ಎನ್.ಸುರೇಂದ್ರ ಎಂಬಾತನ ಹಣದ ಪ್ರಭಾವಕ್ಕೆ ಒಳಗಾಗಿ ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ಕಚೇರಿ ಅಧಿಕಾರಿಗಳು ಮತ್ತು ನೌಕರರು ಈ ಸರ್ಕಾರಿ ಸ್ವತ್ತು ಕೆ.ಎನ್.ಸುರೇಂದ್ರ ಎಂಬ ಸರ್ಕಾರಿ ನೆಲಗಳ್ಳನ ಪಾಲಾಗುವಂತೆ ಟಿಪ್ಪಣಿಗಳನ್ನು ತಯಾರಿಸಿದ್ದಾರೆ. ಈ ಕಡತವು ಸದ್ಯದಲ್ಲೇ ಬೆಂಗಳೂರು ನಗರ ಜಿಲ್ಲೆ ಸಹಾಯಕ ಆಯುಕ್ತರಾಗಿರುವ ಅಪೂರ್ವ ಬಿದರಿ ಅವರ ಕಚೇರಿಗೆ ಟಪಾಲು ಮುಖಾಂತರ ತಲುಪುತ್ತಿರುವ ವಿಷಯ ಬಹಿರಂಗವಾಗಿದೆ.
ಹೀಗಾಗಿ ಈ ಅಮೂಲ್ಯ ಸರ್ಕಾರಿ ಸ್ವತ್ತು ನೆಲಗಳ್ಳನ ಪಾಲಾಗದಂತೆ ಕ್ರಮ ವಹಿಸುವ ಹಾಗೂ ಆ ಸ್ವತ್ತನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ತಮ್ಮದಾಗಿದೆ. ಈ ಸಂಬಂಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಸರ್ಕಾರಿ ಸ್ವತ್ತು ಕೆ.ಎನ್.ಸುರೇಂದ್ರ ಎಂಬ ಸರ್ಕಾರಿ ನೆಲಗಳ್ಳನ ಪಾಲಾಗುವಂತೆ ಕಾನೂನು ಬಾಹಿರ ಟಿಪ್ಪಣಿ ಹಾಳೆಗಳನ್ನು ತಯಾರಿಸಿರುವ ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ಕಚೇರಿಯ ಭ್ರಷ್ಟ ಅಧಿಕಾರಿ ಮತ್ತು ನೌಕರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ರಮೇಶ್ ದೂರಿನಲ್ಲಿ ಆಗ್ರಹಿಸಿದ್ದಾರೆ.
